20 ವರ್ಷಗಳ ಬಳಿಕ ಕೋಡಿ ಹರಿದ ‘ಬೋರನಕಣಿವೆ ಜಲಾಶಯ'

Update: 2022-10-06 04:08 GMT

ಬೆಂಗಳೂರು, ಅ.6: ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹೊಯ್ಸಳ ಕಟ್ಟೆ ಬಳಿ ಇರುವ ಬೋರನಕಣಿವೆ ಜಲಾಶಯ 20 ವರ್ಷಗಳ ಬಳಿಕ ಕೋಡಿ ತುಂಬಿ ಹರಿದಿರುವ ದೃಶ್ಯವನ್ನು ಕಣ್ತುಂಬಿಕೊಳ್ಳಲು ಜನ ಸಾಗರವೆ ಹರಿದು ಬರುತ್ತಿದೆ.

ಮೈಸೂರು ಅರಸ ಚಾಮರಾಜೇಂದ್ರ ಒಡೆಯರ್ ಅವರು ಸುಮಾರು 2.80ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಿದ ಈ ಜಲಾಶಯವು 30 ಅಡಿ ಎತ್ತರ ಹೊಂದಿದೆ. 1888ರಲ್ಲಿ ಆರಂಭವಾದ ಈ ಜಲಾಶಯದ ಕಾಮಗಾರಿಯೂ 1892ರಲ್ಲಿ ಪೂರ್ಣಗೊಂಡಿತು.

ಸುವರ್ಣ ಮುಖಿ ನದಿಯೂ ಈ ಜಲಾಶಯಕ್ಕೆ ನೀರಿನ ಮೂಲವಾಗಿದೆ. ತಿಪಟೂರು ಹಾಗೂ ಚಿಕ್ಕನಾಯಕನಹಳ್ಳಿ ತಾಲೂಕಿನ 375 ಕೆರೆಗಳು ತುಂಬಿ ವ್ಯರ್ಥವಾಗಿ ಹರಿಯುತ್ತಿದ್ದ ನೀರನ್ನ ನೀರಾವರಿಗಾಗಿ ಸದ್ಬಳಕೆ ಮಾಡಿಕೊಳ್ಳಲು ಹೊಯ್ಸಳ ಕಟ್ಟೆ ಬಳಿ ಈ ಜಲಾಶಯ ನಿರ್ಮಿಸಲಾಗಿದೆ. ಇದರಲ್ಲಿ 2269 ದಶ ಘನಲಕ್ಷ ಅಡಿಗಳಷ್ಟು ನೀರು ಸಂಗ್ರಹ ಮಾಡಬಹುದಾಗಿದೆ. 

ಈ ಜಲಾಶಯ 1977 ಹಾಗೂ 2001-02ರಲ್ಲಿ ಕೋಡಿ ಬಿದ್ದಿತ್ತು. ಇತ್ತೀಚೆಗೆ ಸತತವಾಗಿ ಸುರಿದ ಮಳೆಯಿಂದಾಗಿ ಜಲಾಶಯವು ಕೋಡಿ ಬಿದ್ದಿದೆ. ಈ ಜಲಾಶಯವು 3595 ಚದರ ಮೈಲಿ ಅಚ್ಚುಕಟ್ಟು ಪ್ರದೇಶವನ್ನು ಹೊಂದಿದೆ. 190ಕ್ಕೂ ಹೆಚ್ಚು ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯವನ್ನು ಕಲ್ಪಿಸಲಾಗಿದೆ. 

►ಬೋರನ ಕಣಿವೆ ಹೆಸರು ಬಂದದ್ದು ಹೇಗೆ?: ಮೈಸೂರು ಅರಸ ಚಾಮರಾಜೇಂದ್ರ ಒಡೆಯರ್ ಸ್ಥಳ ಪರಿಶೀಲನೆ ಹಿನ್ನೆಲೆಯಲ್ಲಿ ಹೊಯ್ಸಳ ಕಟ್ಟೆ ಬಳಿ ಬಂದಿದ್ದಾಗ ಬೋರ ಎಂಬ ಕುರಿ ಮೇಯಿಸುವ ವ್ಯಕ್ತಿಯೊಬ್ಬ ಮಹಾರಾಜರ ಬಳಿ ಸುತ್ತಮುತ್ತಲಿನ ಗ್ರಾಮಗಳಿಗೆ ನೀರಾವರಿ ಸೌಲಭ್ಯ ದೊರೆಯುವಂತೆ ಇಲ್ಲೊಂದು ಜಲಾಶಯ ನಿರ್ಮಿಸಿಕೊಡುವಂತೆ ಮನವಿ ಮಾಡಿದ್ದನಂತೆ. ಹೀಗಾಗಿ, ಈ ಜಲಾಶಯಕ್ಕೆ ಮಹಾರಾಜರು ಬೋರನಕಣಿವೆ ಎಂದು ನಾಮಕರಣ ಮಾಡಿದರು ಎಂಬ ಪ್ರತೀತಿ ಇದೆ.

► ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶ: ಬೋರನಕಣಿವೆ ಬಳಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ವಿಫಲವಾದ ಅವಕಾಶಗಳಿವೆ. ಸುತ್ತಮುತ್ತಲು ಅರಣ್ಯ ಪ್ರದೇಶವು ಹೆಚ್ಚಿರುವುದರಿಂದ ಬೆಳಗ್ಗೆ ಹಾಗೂ ಸಂಜೆ ವೇಳೆ ನವಿಲುಗಳು ಹೆಚ್ಚಾಗಿ ಕಂಡು ಬರುತ್ತವೆ. ಈ ಜಲಾಶಯದ ಬಳಿ ಉದ್ಯಾನವನ ನಿರ್ಮಾಣ, ಜಲ ಕ್ರೀಡೆಗಳು, ಬೋಟಿಂಗ್‍ಗೆ ಅವಕಾಶವನ್ನು ಕಲ್ಪಿಸಬಹುದಾಗಿದೆ.

ತಿಪಟೂರು, ತುರುವೇಕೆರೆ, ಚಿಕ್ಕನಾಯಕನಹಳ್ಳಿ, ಹೊಸದುರ್ಗ, ಸಿರಾ ಸೇರಿದಂತೆ ಇನ್ನಿತರ ತಾಲೂಕುಗಳ ಜನರು ಒಂದು ದಿನದ ಪ್ರವಾಸ ಕೈಗೊಳ್ಳಲು ಈ ಜಲಾಶಯದ ವಾತಾವರಣ ಪೂರಕವಾಗಿದೆ. ಇಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದ್ದಲ್ಲಿ ಈ ಭಾಗದಲ್ಲಿ ಅತ್ಯುತ್ತಮ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಬಹುದಾಗಿದೆ.

‘ಸತತವಾಗಿ ಬರಗಾಲ ಎದುರಿಸುತ್ತಿದ್ದ ನಮ್ಮ ತಾಲೂಕಿನಲ್ಲಿ ಈ ವರ್ಷ ಉತ್ತಮವಾಗಿ ಮಳೆಯಾಗಿರುವುದರಿಂದ 20 ವರ್ಷ ಆದ ಮೇಲೆ ಬೋರನಕಣಿವೆ ಜಲಾಶಯ ತುಂಬಿದೆ. ನಮ್ಮಸುತ್ತಮುತ್ತಲು ಇರುವ ಹಲವಾರು ಗ್ರಾಮಗಳಿಗೆ ಇದರಿಂದ ನೀರಾವರಿ ಆಗುತ್ತಿದೆ. ಕೃಷಿ ಚಟುವಟಿಕೆಗಳಿಗೂ ಸಹಕಾರಿಯಾಗುತ್ತಿದೆ'

-ಕೃಷ್ಣೇಗೌಡ, ರೈತ

----------------------------------------------

‘ಬೆಂಗಳೂರಿನಿಂದ ಒಂದು ದಿನದ ಪ್ರವಾಸ ಕೈಗೊಳ್ಳಲು ಈ ಸ್ಥಳ ತುಂಬಾ ಉಪಯುಕ್ತವಾಗಿದೆ. ರಾಜ್ಯ ಸರಕಾರ ಹಾಗೂ ನೀರಾವರಿ ಇಲಾಖೆಯವರು ಇಲ್ಲಿ ಸ್ವಚ್ಛತೆ ಹಾಗೂ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಿದರೆ ಪ್ರವಾಸೋದ್ಯಮ ಬೆಳೆಯಲು ಸಹಕಾರಿಯಾಗುತ್ತದೆ. ಪ್ರಮುಖವಾಗಿ ವಾಹನ ನಿಲುಗಡೆ, ಶೌಚಾಲಯ, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ಅಗತ್ಯವಿದೆ'

-ಆರಿಝ್ ಅಹ್ಮದ್ ಖಾನ್, ವಿದ್ಯಾರ್ಥಿ

Writer - -ಅಮ್ಜದ್ ಖಾನ್ ಎಂ.

contributor

Editor - -ಅಮ್ಜದ್ ಖಾನ್ ಎಂ.

contributor

Similar News