ಕನ್ನಡದಂತಹ ಪ್ರಾದೇಶಿಕ ಭಾಷೆಗಳ ಅಸ್ಮಿತೆಗೆ ಧಕ್ಕೆ ತರುವ ಉದ್ದೇಶ ಕಾಂಗ್ರೆಸ್ ಗೆ ಇಲ್ಲ: ರಾಹುಲ್ ಗಾಂಧಿ

Update: 2022-10-08 09:09 GMT

ಮಂಡ್ಯ:  ಭಾರತ್ ಜೋಡೋ ಯಾತ್ರೆಯ ವೇಳೆ ನಾಗಮಂಗಲ ತಾಲೂಕು ಅಂಚೆಬೂವನಹಳ್ಳಿ ಗ್ರಾಮದ ಬಳಿ ಆಯೋಜಿಸಿದ್ದ ಶೈಕ್ಷಣಿಕ ಸಂವಾದದಲ್ಲಿ ಶಿಕ್ಷಣ ತಜ್ಞರು ಮತ್ತು ಶಿಕ್ಷಕರೊಂದಿಗೆ ರಾಹುಲ್ ಗಾಂಧಿ ಮಾತನಾಡಿದ್ದಾರೆ.

''ಎಲ್ಲರ ಮಾತೃಭಾಷೆಯೂ ಅತ್ಯಂತ ಪ್ರಾಮುಖ್ಯವಾದದ್ದು. ನಾವು ಎಲ್ಲ ಭಾಷೆಗಳನ್ನೂ ಗೌರವಿಸಬೇಕು. ಸಂವಿಧಾನದಲ್ಲಿ ಎಲ್ಲಾ ಭಾಷೆಗಳಿಗೂ ಸಮಾನ ಹಕ್ಕಿದೆ'' ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

ಸಂವಾದದಲ್ಲಿ ಶಿಕ್ಷಣ ತಜ್ಞ ಡಾ.ವಿ.ಪಿ ನಿರಂಜನಾರಾಧ್ಯ ಮಾತನಾಡಿ, “ಸಂವಿಧಾನ ಉಳಿದರೆ ದೇಶ ಉಳಿಯುತ್ತದೆ. ಶಾಲೆಗಳು ಸಂವಿಧಾನದ ತೊಟ್ಟಿಲುಗಳಿದ್ದಂತೆ. ಸಂವಿಧಾನ ಉಳಿಯಬೇಕು ಎಂದರೆ ಶಾಲಾ ಮಕ್ಕಳಲ್ಲಿ ಸಂವಿಧಾನದ ಮೌಲ್ಯಗಳನ್ನು ಆಚರಣೆಗೆ ತರಬೇಕಿದೆ. ಎಲ್ಲಾ ವರ್ಗದ, ಎಲ್ಲಾ ಜಾತಿ ಧರ್ಮದ ಮಕ್ಕಳ ಒಟ್ಟಿಗೆ ಬೆರೆತು ಕಲಿಯುವ ಸಮಾನ ಶಾಲಾ ವ್ಯವಸ್ಥೆ ಜಾರಿಗೆ ಬಂದರೆ ಮಾತ್ರ ದೇಶದ ಐಕ್ಯತೆ ಉಳಿಯಲು ಸಾಧ್ಯ” ಎಂದು ಅಭಿಪ್ರಾಯಪಟ್ಟಿದ್ದಾರೆ.

“ಇಂದು ಎನ್‌ಇಪಿ ಮೂಲಕ ಮಕ್ಕಳಿಗೆ ವಿಷ ತುಂಬುವ ಕೆಲಸ ನಡೆಯುತ್ತಿದೆ. ವಿಚಾರ ಮಾಡುವ, ವಿಮರ್ಶಾತ್ಮಕವಾಗಿ ಆಲೋಚಿಸುವುದನ್ನು ಕಲಿಸುವ ಬದಲಿಗೆ ಪಠ್ಯಗಳನ್ನು ತಿರುಚಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಭಾರತವನ್ನು ಒಗ್ಗೂಡಿಸುವುದು ಹೇಗೆ ಸಾಧ್ಯ” ಎಂದು ಪ್ರಶ್ನಿಸಿದ್ದಾರೆ. 

ಈ ಕುರಿತು ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ''ಶಿಕ್ಷಣ ಕ್ಷೇತ್ರದ ಮೇಲೆ ಹಣ ಹೂಡಿಕೆ ಮಾಡಬೇಕು ಮತ್ತು ಸರ್ಕಾರಿ ಶಾಲೆಗಳನ್ನು ಅಭಿವೃದ್ದಿಪಡಿಸುವುದು ನಮ್ಮ ಆದ್ಯತೆಯಾಗಬೇಕು. ಕನ್ನಡದಂತಹ ಪ್ರಾದೇಶಿಕ ಭಾಷೆಗಳ ಅಸ್ಮಿತೆಗೆ ಧಕ್ಕೆ ತರುವ ಉದ್ದೇಶ ಕಾಂಗ್ರೆಸ್ ಗೆ ಇಲ್ಲ'' ಎಂದು ಇದೇ ವೇಳೆ  ತಿಳಿಸಿದ್ದಾರೆ. 

ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಶಿಕ್ಷಣಕ್ಕೆ ಆದ್ಯತೆ: ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಶಿಕ್ಷಣಕ್ಕೆ ಪ್ರಮುಖ ಆದ್ಯತೆ ನೀಡಲಿದೆ. ಈ ಪ್ರಣಾಳಿಕೆ ಜನರ ಅಭಿಪ್ರಾಯ ಆಗಿರಲಿದೆ ಎಂದು ರಾಹುಲ್ ಗಾಂಧಿ ಸಂವಾದದಲ್ಲಿ ಭರವಸೆ ನೀಡಿದ್ದಾರೆ. 

ಸಂವಾದದಲ್ಲಿ ಶಿಕ್ಷಕರು, ಅಧ್ಯಾಪಕರು, ಶಿಕ್ಷಣ ತಜ್ಞರು ಹಾಗೂ ವಿವಿಧ ಸಂಘಸಂಸ್ಥೆಗಳ ಮುಖಂಟರು ಭಾಗವಹಿಸಿದ್ದರು. ಬಿ.ಕೆ.ಹರಿಪ್ರಸಾದ್, ಪ್ರಿಯಾಂಕ್ ಖರ್ಗೆ, ಇತರ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News