ದೇಶ ಒಡೆಯುತ್ತಿರುವ ಬಿಜೆಪಿ, ಆರೆಸ್ಸೆಸ್: ರಾಹುಲ್ ಗಾಂಧಿ ವಾಗ್ದಾಳಿ

Update: 2022-10-08 12:38 GMT

ತುಮಕೂರು, ಅ.8: ಬಿಜೆಪಿ ಹಾಗೂ ಆರೆಸ್ಸೆಸ್ ಭಾರತವನ್ನು ಒಡೆಯುತ್ತಿದೆ. ಇದನ್ನು ತಡೆದು ದೇಶದ ಜನರನ್ನು ಒಗ್ಗೂಡಿಸುವುದಕ್ಕಾಗಿ ಭಾರತ್ ಜೋಡೋ ಯಾತ್ರೆ ಹಮ್ಮಿಕೊಂಡಿದ್ದೇವೆ. ಚುನಾವಣೆಯನ್ನು ಮುಂದಿಟ್ಟುಕೊಂಡು ಈ ಯಾತ್ರೆ ನಡೆಸುತ್ತಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. 

ಕಲ್ಪತರುನಾಡಿನಲ್ಲಿ ಕೈಗೊಂಡಿರುವ 'ಭಾರತ್ ಜೋಡೋ ಯಾತ್ರೆ' ತುರುವೇಕೆರೆ ತಾಲೂಕಿನ ಅರಳೀಕೆರೆ ಪಾಳ್ಯ ತಲುಪಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ದೇಶವನ್ನು ಒಡೆಯುವ ಪ್ರಯತ್ನ ಮಾಡುತ್ತಿದೆ. ಅಲ್ಲದೆ ದೇಶದ ಜನರಲ್ಲಿ ಪರಸ್ಪರ ದ್ವೇಷ ಹುಟ್ಟು ಹಾಕಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಮುಂಬರುವ 2024ರ ಚುನಾವಣೆಯನ್ನು ಮುಂದಿಟ್ಟುಕೊಂಡು ಭಾರತ್ ಜೋಡೋ ಯಾತ್ರೆ ನಡೆಸುತ್ತಿಲ್ಲ. ದೇಶದಲ್ಲಿ ಬಿಜೆಪಿಯ ನಡೆಯನ್ನು ವಿರೋಧಿಸಿ ಈ ಯಾತ್ರೆ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ದೇಶದಲ್ಲಿ ಈಗಾಗಲೇ ಜನತೆ ಬಿಜೆಪಿ ಆಡಳಿತದಿಂದ ಬೇಸತ್ತಿದ್ದಾರೆ. ಕಳೆದ 8 ವರ್ಷಗಳಲ್ಲಿ ನಿರುದ್ಯೋಗ ಸಮಸ್ಯೆಯಿಂದ ಯುವಕರು ಆಕ್ರೋಶಿತರಾಗಿದ್ದಾರೆ ಎಂದು ಹೇಳಿದರು. 

ಕಾಂಗ್ರೆಸ್ ಕೋಮುವಾದದ ಪಕ್ಷವಲ್ಲ. ಎಲ್ಲ ವರ್ಗದ ಜನರನ್ನು ಒಟ್ಟಾಗಿ ಕರೆದೊಯ್ಯುವ ಪಕ್ಷ. ಹಾಗಾಗಿ ದೇಶದ ಜನರನ್ನು ಒಗ್ಗೂಡಿಸುವ ಸಲುವಾಗಿ ಈ ಯಾತ್ರೆ ನಡೆಸಲಾಗುತ್ತಿದೆ. ಬಿಜೆಪಿಯವರ ಮಾಡುತ್ತಿರುವ ಅಪಪ್ರಚಾರ ಸತ್ಯಕ್ಕೆ ದೂರವಾದ ಸಂಗತಿ ಎಂದರು. 

ಆರೆಸ್ಸೆಸ್ ನವರು ಬ್ರಿಟೀಷರಿಗೆ ಸಹಾಯ ಮಾಡುತ್ತಿದ್ದರು. ಆದರೆ ಕಾಂಗ್ರೆಸ್ ಪಕ್ಷ ಬ್ರಿಟಿಷರ ವಿರುದ್ಧ ಹೋರಾಡಿತ್ತು. ಇದೇ ಕಾಂಗ್ರೆಸ್ ಮತ್ತು ಆರೆಸ್ಸೆಸ್ ಗೂ ಇರುವ ವ್ಯತ್ಯಾಸ ಎಂದರು. 

ಭಾರತವನ್ನು ಒಡೆಯುತ್ತಿರುವುದು ಬಿಜೆಪಿ ಹಾಗೂ ಆರೆಸ್ಸೆಸ್. ಇದನ್ನು ತಡೆದು ದೇಶದ ಜನರನ್ನು ಒಗ್ಗೂಡಿಸುವುದಕ್ಕಾಗಿ ಈ ಯಾತ್ರೆ ನಡೆಸಲಾಗುತ್ತಿದೆ ಎಂದ ಅವರು, ಭಾರತ್ ಐಕ್ಯತಾ ಯಾತ್ರೆಯಲ್ಲಿ ಲಕ್ಷ ಲಕ್ಷ ಜನರು ಪಾಲ್ಗೊಂಡು ಬೆಂಬಲ ನೀಡುತ್ತಿದ್ದಾರೆ. ನನ್ನನ್ನು ಅಪ್ರಯೋಜಕ ಎಂದು ಬಿಂಬಿಸಲು ಬಿಜೆಪಿ ಕೋಟಿ ಕೋಟಿ ಹಣ ಖರ್ಚು ಮಾಡುತ್ತಿದೆ ಎಂದು ರಾಹುಲ್ ಗಾಂಧಿ ನುಡಿದರು. 

ಎಐಸಿಸಿ ಅಧ್ಯಕ್ಷೀಯ ಚುನಾವಣೆಯಲ್ಲಿ ಹಸ್ತಕ್ಷೇಪವಿಲ್ಲ

ಎಐಸಿಸಿ ಅಧ್ಯಕ್ಷರ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ನಾವು ಹಸ್ತಕ್ಷೇಪ ಮಾಡುವುದಿಲ್ಲ. ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದವರು ನಮ್ಮ ಕೈಗೊಂಬೆಯಲ್ಲ. ಅವರು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ಪತ್ರಕರ್ತರ ಪ್ರಶ್ನೆಗೆ ರಾಹುಲ್ ಗಾಂಧಿ ಉತ್ತರಿಸಿದರು. 

ಸಿಎಂ ಅಭ್ಯರ್ಥಿ ಘೋಷಣೆ ಇಲ್ಲ

ಚುನಾವಣೆಗೆ ಮೊದಲೇ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಪದ್ಧತಿ  ನಮ್ಮ ಪಕ್ಷದಲ್ಲಿ ಇಲ್ಲ. ಪಕ್ಷದಲ್ಲಿ ತನ್ನದೇ ಆದ ಆಂತರಿಕ ವ್ಯವಸ್ಥೆ ಇದೆ. ಆ ವ್ಯವಸ್ಥೆ ಮೂಲಕ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ಮಾಡಲಾಗುವುದು. ಕರ್ನಾಟಕದಲ್ಲಿ ಪಕ್ಷ ಚುನಾವಣೆಯಲ್ಲಿ ಗೆದ್ದ ಬಳಿಕ  ಸ್ಥಳೀಯ ನಾಯಕರು ಚರ್ಚಿಸಿ ಸಿಎಂ ಅಭ್ಯರ್ಥಿ ಆಯ್ಕೆ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಹೇಳಿದರು.  

ಕರ್ನಾಟಕದಲ್ಲಿ ಜೆಡಿಎಸ್ ಜತೆ ಒಪ್ಪಂದ ಮಾಡಿಕೊಳ್ಳುವ ಬಗ್ಗೆ ರಾಜ್ಯ ನಾಯಕರು ಚರ್ಚಿಸಬೇಕು. ಕರ್ನಾಟಕದಲ್ಲಿ ನನ್ನ ಪ್ರಕಾರ ಜೆಡಿಎಸ್ ಜತೆ ಒಪ್ಪಂದದ ಅಗತ್ಯತೇ ಬೀಳುವುದಿಲ್ಲ. ಯಾರ ಸಹಾಯವೂ ಇಲ್ಲದೆ ಕಾಂಗ್ರೆಸ್ ಪಕ್ಷ ಗೆಲ್ಲುತ್ತದೆ ಎಂದು ಭವಿಷ್ಯ ನುಡಿದರು.

 ಕಾಂಗ್ರೆಸ್ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿರುವ ಪಕ್ಷ. ಹಾಗಾಗಿ ಪತ್ರಕರ್ತರಿಗೆ ಪ್ರಶ್ನೆ ಕೇಳಲು ಅವಕಾಶ ನೀಡಲಾಗಿದೆ. ಆದರೆ ಕಳೆದ 8 ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ಇದುವರೆಗೂ ಒಂದೇ ಒಂದು ಸುದ್ದಿಗೋಷ್ಠಿ ಮಾಡಿಲ್ಲ ಎಂದು ದೂರಿದರು. 

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ, ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News