ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರಕಟ, ನಾಳೆ ಆರು ಮಂದಿ ಗಣ್ಯರಿಗೆ ಪ್ರಶಸ್ತಿ ಪ್ರದಾನ: ಸಚಿವ ಶ್ರೀರಾಮುಲು

Update: 2022-10-08 11:31 GMT

ಬೆಂಗಳೂರು, ಅ. 8: ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ರಾಜ್ಯದ ಸರಕಾರದಿಂದ ನೀಡುವ ಪ್ರತಿಷ್ಠಿತ ‘ಮಹರ್ಷಿ ವಾಲ್ಮೀಕಿ ಪ್ರಶಸ್ತಿ'ಗೆ ಎಲ್.ಮುನಿಸ್ವಾಮಿ, ಎನ್.ನಾಗಪ್ಪ, ನಾಗಪ್ಪ ಎಚ್.ಕೋಣಿ, ಪಿ.ಪದ್ಮಾ, ಸುಭಾಷ್ ಎಸ್.ಎಚ್. ಹಾಗೂ ಉಷಾರಾಣಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ.

ಶನಿವಾರ ವಿಧಾನಸೌಧದಲ್ಲಿನ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾಳೆ(ಅ.9) ವಿಧಾನಸೌಧದಲ್ಲಿ ನಡೆಯಲಿರುವ ‘ಮಹರ್ಷಿ ವಾಲ್ಮೀಕಿ ಜಯಂತಿ'ಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆರು ಮಂದಿ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಬೆಂಗಳೂರಿನ ಎಲ್.ಮುನಿಸ್ವಾಮಿ(ಸಾಮಾಜಿಕ ಕ್ಷೇತ್ರ), ಎನ್.ನಾಗಪ್ಪ, ಬೆಳಗಾವಿಯ ನಾಗಪ್ಪ ಎಚ್.ಕೋಣಿ(ಸಮಾಜ ಸೇವೆ), ಕಲಬುರಗಿಯ ಪಿ.ಪದ್ಮಾ(ಕಲಾಕ್ಷೇತ್ರ), ಮೈಸೂರಿನ ಸುಭಾಷ್ ಎಸ್.ಎಚ್.(ಸಾಮಾಜಿಕ ಕ್ಷೇತ್ರ) ಹಾಗೂ ಉಷಾ ರಾಣಿ(ಕಲಾಕ್ಷೇತ್ರ) ಅವರನ್ನು ಆಯ್ಕೆ ಮಾಡಲಾಗಿದ್ದು, ಪುರಸ್ಕೃರಿಗೆ 5 ಲಕ್ಷ ರೂ.ನಗದು, 20 ಗ್ರಾಂ ಚಿನ್ನದ ಪದಕ, ಪಶಸ್ತಿ ಫಲಕವನ್ನು ನೀಡಿ ಗೌರವಿಸಲಾಗುತ್ತದೆ' ಎಂದು ವಿವರ ನೀಡಿದರು.

‘ವಾಲ್ಮೀಕಿ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಲು ವಿಶ್ರಾಂತ ಪ್ರಾಧ್ಯಾಪಕ ಡಾ.ಕಡ್ಲಬಾಳ ಪ್ರನ್ನಂಗಧರ ಅವರ ನೇತೃತ್ವದಲ್ಲಿ 10 ಮಂದಿ ಸದಸ್ಯರ ಸಮಿತಿಯನ್ನು ನೇಮಕ ಮಾಡಿದ್ದು, ಸಮಿತಿ ಶಿಫಾರಸ್ಸುನ್ನು ಆಧರಿಸಿ ಮೇಲ್ಕಂಡ ಆರು ಮಂದಿ ಗಣ್ಯರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅರ್ಹರಿಗೆ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಸಂದಿದೆ' ಎಂದು ಶ್ರೀರಾಮುಲು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News