ನನ್ನ ವಿರುದ್ಧ ಅಪಪ್ರಚಾರಕ್ಕಾಗಿ ಮಾಧ್ಯಮಗಳಿಗೆ ಕೋಟ್ಯಂತರ ರೂ. ವೆಚ್ಚ: ರಾಹುಲ್ ಗಾಂಧಿ

Update: 2022-10-09 02:52 GMT

ತುಮಕೂರು: 'ನನ್ನನ್ನು ಕೆಟ್ಟದಾಗಿ ಬಿಂಬಿಸಲು ಸಾವಿರಾರು ಕೋಟಿ ರೂಪಾಯಿ ವ್ಯಯಿಸಲಾಗಿದೆ' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. 

'ಭಾರತ ಜೋಡೊ ಯಾತ್ರೆ'   ಶನಿವಾರ ತುಮಕೂರು ಜಿಲ್ಲೆಗೆ ಪ್ರವೇಶಿಸಿದೆ. ತುರುವೇಕೆರೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರಾಹುಲ್, ನಾನು ಯಾವಾಗಲೂ ಆದರ್ಶಗಳ ಪರ ನಿಲ್ಲುತ್ತೇನೆ. ಇದು ಸಹಜವಾಗಿಯೇ ಬಿಜೆಪಿ, ಆರೆಸ್ಸೆಸ್ ಹಾಗೂ ಇತರ ಶಕ್ತಿಗಳಿಗೆ ಕಿರಿಕಿರಿ ಉಂಟುಮಾಡುತ್ತದೆ. ನನ್ನನ್ನು ಕೆಟ್ಟರೀತಿಯಲ್ಲಿ ಬಿಂಬಿಸಲು ಸಾವಿರಾರು ಕೋಟಿ ರೂಪಾಯಿ ವ್ಯಯಿಸಲಾಗಿದೆ ಎಂದು ಆರೋಪಿಸಿದ್ದಾರೆ.

'ನಾನು ಯಾವುದರ ಪರ ಇದ್ದೇನೆ ಮತ್ತು ಏನು ಮಾಡುತ್ತಿದ್ದೇನೆ ಎಂಬುದನ್ನು ಎಚ್ಚರಿಕೆಯಿಂದ ನೋಡುವ ಜನರು ಜಾಗರೂಕವಾಗಿ ಗಮನಿಸುತ್ತಿದ್ದಾರೆ' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ವಿಧಾನಸಭೆ ಚುನಾವಣೆ | ಸಿಎಂ ಅಭ್ಯರ್ಥಿ ಘೋಷಣೆ, JDS ಜೊತೆ ಮೈತ್ರಿ ಬಗ್ಗೆ ರಾಹುಲ್ ಗಾಂಧಿ ಹೇಳಿದ್ದೇನು? 

''ಈ ಯಾತ್ರೆಯು ನನ್ನ ಪಾಲಿಗೆ ಖಂಡಿತಾ ರಾಜಕೀಯದ ಭಾಗವೇ. ರಾಜಕೀಯ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳುವುದು ಈ ಯಾತ್ರೆಯ ಉದ್ದೇಶ. ನಾನು ಈ ಮಾತನ್ನು ಸುಮ್ಮನೆ ಹೇಳುತ್ತಿಲ್ಲ. ರಾಜಕಾರಣಿಗಳು ಮತ್ತು ನಮ್ಮ ನಾಗರಿಕರ ನಡುವೆ ಬಹುದೊಡ್ಡ ಅಂತರ ಬೆಳೆದುಕೊಂಡಿದೆ. ಬೀದಿಗಿಳಿದು ಜನರನ್ನು ಸಂಪರ್ಕಿಸುವುದು ಹಾಗೂ ಆ ಮೂಲಕ ಅವರೊಂದಿಗೆ ಹೆಚ್ಚು ಆಪ್ತವಾಗಿ ಮಾತನಾಡುವುದು, ನೋವು, ಸಂಕಷ್ಟಗಳನ್ನು ಅರಿಯುವುದು ನನ್ನ ಉದ್ದೇಶ. ಕಾರು ಇಲ್ಲವೇ ವಿಮಾನದ ಮೂಲಕ ಸಾಗುವುದು ಅಥವಾ ಮಾಧ್ಯಮಗಳ ಮೂಲಕ ಜನರನ್ನು ತಲುಪುವುದಕ್ಕಿಂತ ಇದು ಭಿನ್ನವಾದ ಮಾರ್ಗವಾಗಿದೆ'' ಎಂದು ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News