ಸೋನಿಯಾ, ರಾಹುಲ್‍ರಿಂದ ಕಾಂಗ್ರೆಸ್ ಮುಖಂಡರು ಬೀದಿಗೆ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

Update: 2022-10-09 17:30 GMT
ಬಸನಗೌಡ ಪಾಟೀಲ್ ಯತ್ನಾಳ್

ವಿಜಯಪುರ: ‘ಭಾರತ ಐಕ್ಯತಾ ಯಾತ್ರೆ ಕುರಿತಂತೆ ಟೀಕೆ ಮಾಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಪ್ರಧಾನಿ ಮೋದಿ ಅವರು ಹೇಳಿದಂತೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರು, ಕಾಂಗ್ರೆಸ್ ಮುಖಂಡರನ್ನು ಬೀದಿಗೆ ತಂದಿದ್ದಾರೆ' ಎಂದು ವಾಗ್ದಾಳಿ ನಡೆಸಿದ್ದಾರೆ. 

ರವಿವಾರ ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಡೆಸುತ್ತಿರುವ ಭಾರತ ಐಕ್ಯತಾ ಯಾತ್ರೆ ಬಿಜೆಪಿಯ ಮೇಲೆ ಯಾವುದೇ ಪರಿಣಾಮವನ್ನೂ ಬೀರುವುದಿಲ್ಲ. ಇದರಿಂದ, ಇನ್ನೂ ಒಳ್ಳೆಯದ್ದೇ ಆಗಿದೆ. ಅವರ ಬಣ್ಣ ಬಯಲು ಮಾಡಿದೆ ಎಂದು ವ್ಯಂಗ್ಯವಾಡಿದರು.

ಭ್ರಷ್ಟರೆಲ್ಲರನ್ನು ರಸ್ತೆಗೆ ತರುತ್ತೇವೆಂದು ಪ್ರಧಾನಿ ಮೋದಿ ಅವರು ಮೊದಲೇ ಹೇಳಿದ್ದರು. ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಸೋನಿಯಾಗಾಂಧಿ ಅವರು ಎಂದಾದರೂ ರಸ್ತೆಯಲ್ಲಿ ನಡೆದಿದ್ದರಾ?. ಈಗ ನೋಡಿ ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ಇದು ಬಿಜೆಪಿಯ ದೊಡ್ಡ ಸಾಧನೆ ಅಲ್ಲವೇ ಎಂದು ಪ್ರಶ್ನಿಸಿದರು. 

ದೊಡ್ಡ ಖಾತೆಗಳು ಖಾಲಿ ಇವೆ. ಈ ಬಾರಿ ಸಂಪುಟ ರಚನೆಯಾದರೆ ತಮಗೆ ಸಚಿವ ಸ್ಥಾನ ದೊರೆತರೆ ಸಹಜವಾಗಿ ಜಿಲ್ಲಾ ಉಸ್ತುವಾರಿ ಆಗುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬೀದರ್ ನ ಪ್ರಾರ್ಥನಾ ಮಂದಿರದಲ್ಲಿ ನಡೆದ ಗಲಾಟೆ ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿದ ಯತ್ನಾಳ್ ಅವರು, ಅಲ್ಲಿ ಅಂಭಾಭವಾನಿ ಮಂದಿರವಿತ್ತು. ಮಥುರಾ, ಅಯೋಧ್ಯೆ ಮಾದರಿಯಲ್ಲಿ ಬೀದರ್ ನಲ್ಲಿ ನಿತ್ಯ ಪೂಜೆ ನಡೆಯಲೇಬೇಕು ಎಂದರು.

ಬಿಎಸ್‍ವೈ ವಿರುದ್ಧ ಅಸಮಾಧಾನ: ‘ವಿಜಯ ಸಂಕಲ್ಪ ಯಾತ್ರೆ’ಗೆ ನಮ್ಮನ್ನು ಕರೆದರೆ ಹೋಗುತ್ತೇವೆ. ಬಿಎಸ್‍ವೈ ಮೂಲಕವೇ ಬಿಜೆಪಿಗೆ 180 ಸ್ಥಾನ ಬರುತ್ತೆ ಎನ್ನುವುದಾದರೆ ಅವರೇ ಮಾಡಲಿ ಎಂದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News