ವಾರ್ತಾ ಇಲಾಖೆಯಿಂದ ದಲಿತರ ಹೆಸರಿನಲ್ಲಿ ಕೋಟ್ಯಂತರ ಹಣ ಲೂಟಿ: ಶಾಸಕ ಅನ್ನದಾನಿ ಆರೋಪ

Update: 2022-10-10 16:15 GMT
ಶಾಸಕ ಡಾ.ಕೆ.ಅನ್ನದಾನಿ

ಬೆಂಗಳೂರು, ಅ. 10: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ದಲಿತರ ಹೆಸರಿನಲ್ಲಿ ಟೆಂಡರ್ ಹೊರಡಿಸಿ, ಕೋಟ್ಯಂತರ ರೂ.ಹಣವನ್ನು ಲೂಟಿ ಮಾಡಲು ಮುಂದಾಗಿದೆ. ಈ ಟೆಂಡರ್ ರದ್ದುಪಡಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ, ಕಾನೂನಾತ್ಮಕ ಹೋರಾಟ ಮಾಡಲಾಗುವುದು ಎಂದು ಮಳವಳ್ಳಿ ಕ್ಷೇತ್ರದ ಶಾಸಕ ಡಾ.ಕೆ.ಅನ್ನದಾನಿ ಎಚ್ಚರಿಕೆ ನೀಡಿದ್ದಾರೆ.

ಸೋಮವಾರ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸರಕಾರ ಜನಪ್ರಿಯ ಕಾರ್ಯಕ್ರಮಗಳನ್ನು ಪ್ರಚಾರ ಪಡಿಸುವ ಸಲುವಾಗಿ ವಾರ್ತಾ ಇಲಾಖೆಯು ರಾಜ್ಯದ ಪಾರದರ್ಶಕ ಕಾಯ್ದೆ 1999ರ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಈ ಬಾರಿಯ ಟೆಂಡರ್ ಕರೆಯಲಾಗಿದೆ. ಅತ್ಯಧಿಕ ಮೊತ್ತದ ಹಣವನ್ನು ದಲಿತರ ಹೆಸರಿನಲ್ಲಿ ಟೆಂಡರ್ ಕರೆಯಲಾಗಿದೆ. ಇದರಲ್ಲಿ ಪರಿಶಿಷ್ಟ ಜಾತಿ, ಪಂಗಡದ ಮಾಲಕತ್ವದ ಕಂಪೆನಿಗಳು ಭಾಗವಹಿಸಬಹುದಾಗಿದೆ. ಅಲ್ಲದೆ, ಬಸ್ ಶೆಲ್ಟರ್ ಹಾಗೂ ಬಸ್ ಪ್ಯಾನಲ್‍ಗಳ ಮೇಲೆ ಪ್ರಚಾರ ನಡೆಸಲು ಕೇವಲ 6 ತಿಂಗಳ ಅವಧಿಗೆ 30ಕೋಟಿ ರೂ. ಖರ್ಚು ಮಾಡುವುದು ಈ ಟೆಂಡರ್ ಉದ್ದೇಶವಾಗಿದೆ. ಈ ಪ್ರಚಾರ ಕಾರ್ಯ ನಿರ್ವಹಿಸಲು ಕೇವಲ 3ಕೋಟಿ ರೂ. ಮಾತ್ರ ಖರ್ಚಾಗುತ್ತದೆ. ಉಳಿದ 27 ಕೋಟಿ ರೂ.ಯಾವ ದಲಿತ ಕಂಪೆನಿ ಹಿತಾಸಕ್ತಿಗಾಗಿ ಮೀಸಲಿಟ್ಟಿದ್ದಾರೆ ಎಂದು ಪ್ರಶ್ನಿಸಿದರು. 

ಇದನ್ನೂ ಓದಿ: ಹಂಸಲೇಖ ಆರೋಗ್ಯದ ಬಗ್ಗೆ ವದಂತಿ: ಪುತ್ರಿ ತೇಜಸ್ವಿನಿ ಸ್ಪಷ್ಟನೆ

‘ಪರಿಶಿಷ್ಟ ಜಾತಿ, ಪಂಗಡದ ಟೆಂಡರ್ ಗೆ 50ಲಕ್ಷ ರೂ. ಮೀರಿ ಟೆಂಡರ್ ಕರೆಯುವಂತಿಲ್ಲ ಎಂದು 2017ರಲ್ಲಿ ಸರಕಾರ ಆದೇಶವನ್ನು ಹೊರಡಿಸಿದೆ. ಏಕೆಂದರೆ ಸಾಮಾನ್ಯವಾಗಿ ಈ ಮೊತ್ತಕ್ಕೆ ಮೀರಿ ಟೆಂಡರ್ ಹಾಕುವ ಸೂಕ್ತ ದಾಖಲಾತಿಗಳು ಈ ಕಂಪನಿಗಳಲ್ಲಿ ಸಿಗುವುದಿಲ್ಲ. ಇನ್ನು ಸಾಮಾನ್ಯ ವರ್ಗದ ಜೊತೆ ಸ್ಪರ್ಧೆ ಮಾಡಲು ಇಂತಹ ಕಂಪೆನಿಗಳಿಗೆ ಸಾಧ್ಯವಿರುವುದಿಲ್ಲ. ಹಾಗಾಗಿ ಆದೇಶ ಹೊರಡಿಸಿದೆ. ಆದರೆ ಪರಿಶಿಷ್ಟ ಜಾತಿ, ಪಂಗಡದ ಟೆಂಡರ್ ಗೆ  30 ಕೋಟಿ ರೂ.ನ ಅಲ್ಪಾವಧಿ ಟೆಂಡರ್ ಕರೆದಿರುವುದು ಕೆಟಿಪಿಪಿ ಕಾಯ್ದೆಯ ಉಲ್ಲಂಘನೆಯಾಗಿದೆ’ ಎಂದು ತಿಳಿಸಿದರು.

‘ಕೆಟಿಪಿಪಿ ಕಾಯ್ದೆಯ ಪ್ರಕಾರ ಟೆಂಡರ್ ಮೊತ್ತದ 2 ಪಟ್ಟು ವ್ಯವಹಾರ ಟೆಂಡರ್ ದಾರ ಕಂಪನಿ ಹೋದಿರಬೇಕು. ಅಂದರೆ ಟೆಂಡರ್ ದಾರ ಕಂಪನಿ 60 ಕೋಟಿ ವ್ಯವಹಾರ ಹೋದಿರಬೇಕು. ಆದರೆ ಯಾವುದೋ ಕಂಪನಿಗೆ ಅನುಕೂಲ ಆಗುವಂತೆ ಟೆಂಡರ್ ಹಾಕುವ ಕಂಪನಿ ಕೇವಲ 7.5 ಕೋಟಿ ವ್ಯವಹಾರ ಹೋದಿರಬೇಕೆಂಬ ಅಂಶವನ್ನು ವಾರ್ತಾ ಇಲಾಖೆ ಸಡಿಲಿಸಿದೆ’ ಎಂದು ದೂರಿದ ಅವರು, ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ಮಾಡುವಂತೆ ಆಗ್ರಹಿಸಿದರು.

‘ಈವರೆಗೂ ಸರಕಾರವು ಶೇ.40ರಷ್ಟು ಕಮಿಷನ್ ಹೊಡೆಯುತ್ತಿದೆ ಎಂಬ ಆರೋಪವಿದ್ದು, ಈ ಪ್ರಕರಣದಲ್ಲಿ ಶೇ.90ರಷ್ಟು ಕಮಿಷನ್ ಹೊಡೆಯುತ್ತಿರುವುದು ಸಾಬೀತಾಗುತ್ತಿದೆ. ದಲಿತರ ಹೆಸರಿನಲ್ಲಿ ಕರೆದಿರುವ ಈ ನಿರ್ದಿಷ್ಟ ಟೆಂಡರ್ ಹಿಂದಿರುವ ಅಧಿಕಾರಿ ಯಾರು ಮತ್ತು ಟೆಂಡರ್ ಪಡೆಯುತ್ತಿರುವ ಕಂಪನಿ ಯಾರಿಗೆ ಸೇರಿದ್ದು ಎಂದು ಸಾರ್ವಜನಿಕವಾಗಿ ಬಹಿರಂಗವಾಗಬೇಕಾಗಿದೆ'

-ಡಾ.ಕೆ.ಅನ್ನದಾನಿ, ಮಳವಳ್ಳಿ ಕ್ಷೇತ್ರದ ಶಾಸಕ 

----------------------------

► ಟೆಂಡರ್ ರದ್ದು: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ 

‘ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪರಿಶಿಷ್ಟ ಜಾತಿ ಮತ್ತು ಪಂಗಡ ವರ್ಗದವರು ವಾಣಿಜ್ಯೋದ್ಯಮ ಅಧೀನದಲ್ಲಿರುವ ಬಸ್ ಶೆಲ್ಟರ್ ಮತ್ತು ಬಸ್ ಬ್ರ್ಯಾಂಡಿಗ್ ಮೂಲಕ ಪ್ರಚಾರ ನೀಡಲು ಆಹ್ವಾನಿಸಿದ್ದ ಸೆ.12ರ ಟೆಂಡರ್ ಅನ್ನು ಪೂರ್ವಭಾವಿ ಹಂತದಲ್ಲೇ ರದ್ದುಪಡಿಸಲಾಗಿದೆ.

ಎಸ್ಸಿ-ಎಸ್ಟಿ ಯೋಜನೆಯಡಿ ಟೆಂಡರ್ ಅನ್ನು ಆಹ್ವಾನಿಸಿದ್ದು, ಕೆಲವೊಂದು ಆಕ್ಷೇಪಣೆಗಳು ಬಂದ ಕಾರಣ ತಾಂತ್ರಿಕ ಬಿಡ್ ತೆರೆಯುವ ಮುನ್ನವೇ ಪೂರ್ವಭಾವಿ ಹಂತದಲ್ಲೇ ರದ್ದುಪಡಿಸಿದೆ' ಎಂದು ವಾರ್ತಾ ಇಲಾಖೆಯ ಉಪ ನಿರ್ದೇಶಕ ಸಿ.ಆರ್. ನವೀನ್ ಪ್ರಕಟನೆ ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News