ಚಿಕ್ಕಮಗಳೂರು: ಎಸ್ಟೇಟ್ ಮಾಲಕನಿಂದ ಹಲ್ಲೆಗೊಳಗಾಗಿದ್ದ ಮಹಿಳೆಗೆ ಗರ್ಭಪಾತ

Update: 2022-10-12 16:37 GMT

ಚಿಕ್ಕಮಗಳೂರು, ಅ.12: ಕಾಫಿ ಎಸ್ಟೇಟ್ ಮಾಲಕನಿಂದ ಹಲ್ಲೆಗೊಳಗಾಗಿ ದಲಿತ ಸಮುದಾಯದ ಕಾರ್ಮಿಕರು ಕೋಣೆಯಲ್ಲಿ ಬಂಧಿಯಾಗಿದ್ದ ಪ್ರಕರಣದಲ್ಲಿ ಗರ್ಭಿಣಿಯ ಹೊಟ್ಟೆಗೆ ಏಟು ಬಿದ್ದ ಪರಿಣಾಮ ತೀವ್ರ ರಕ್ತ ಸ್ರಾವವಾಗಿ ವೈದ್ಯರು ಮಹಿಳೆಗೆ ಗರ್ಭಪಾತ ಮಾಡಿರುವ ಘಟನೆ ಮಂಗಳವಾರ ವರದಿಯಾಗಿದೆ.

ಜಗದೀಶ್ ಗೌಡ ಎಂಬಾತ ಹಲ್ಲೆ ನಡೆಸಿದ ಕಾಫಿ ಎಸ್ಟೇಟ್ ಮಾಲಕ. ಈತನ ಎಸ್ಟೇಟ್‌ನಲ್ಲಿ ದಲಿತ ಸಮುದಾಯದ ಮೂರು ಕಾರ್ಮಿಕ ಕುಟುಂಬಗಳು ಕೆಲಸಕ್ಕೆ ತೆರಳಿದ್ದರು. ಈ ವೇಳೆ ಜಗದೀಶ್‌ಗೌಡ ಹಾಗೂ ಕಾರ್ಮಿಕ ಕುಟುಂಬಸ್ಥರ ನಡುವೆ ಮಕ್ಕಳ ವಿಚಾರಕ್ಕೆ ಜಗಳ ನಡೆದಿತ್ತು. ಈ ಸಂದರ್ಭ ಎಸ್ಟೇಟ್ ಮಾಲಕ ಅರ್ಪಿತಾ ಎಂಬ ಗರ್ಭಿಣಿಯ ಪತಿ ವಿಜಯ್ ಎಂಬವರ ಸಂಬಂಧಿಕನಿಗೆ ಹಲ್ಲೆ ಮಾಡಿದ್ದು, ಇದರಿಂದ ಬೇಸರಗೊಂಡ ಕಾರ್ಮಿಕ ಕುಟುಂಬಗಳು ಎಸ್ಟೇಟ್ ತೊರೆಯಲು ಮುಂದಾಗಿದ್ದರು. ಇದರಿಂದ ಕೋಪಗೊಂಡ ಜಗದೀಶ್ ಗೌಡ ಕಾರ್ಮಿಕರಿಗೆ ನೀಡಿದ್ದ ಮುಂಗಡ ಹಣವನ್ನು ಹಿಂದಿರುಗಿಸುವಂತೆ ಪಟ್ಟು ಹಿಡಿದಿದ್ದ ಎನ್ನಲಾಗಿದೆ.

ಇದನ್ನೂ ಓದಿ: ಆ ತಾಯಿ ಕಳೆದುಕೊಂಡ ಮಗುವನ್ನು ನೀವು ಮರಳಿ ತರಲು ಸಾಧ್ಯವೇ?: ಸಿಎಂ ಬೊಮ್ಮಾಯಿಗೆ ಸುರ್ಜೆವಾಲಾ​ ಪ್ರಶ್ನೆ

ಹಣ ಹಿಂದಿರುಗಿಸುವ ಸಲುವಾಗಿ ಅರ್ಪಿತಾ ಪತಿಯ ಸಂಬಂಧಿಗಳಾದ ಮಂಜು, ಸತೀಶ್ ಎಂಬವರು ಹಣ ಹೊಂದಿಸಿಕೊಂಡು ಬರಲು ಎಸ್ಟೇಟ್‌ನಿಂದ ಹೊರ ಬಂದಿದ್ದರು. ಈ ಮಧ್ಯೆ ಕಳೆದ ಅ.8ರಂದು ಎಸ್ಟೇಟ್ ಮಾಲಕ ಜಗದೀಶ್, ಹಣ ತರಲು ಹೋದವರು ಇನ್ನೂ ಬಂದಿಲ್ಲ ಎಂದು ಆಕ್ರೋಶಗೊಂಡು ಮನಬಂದಂತೆ ನಿಂದಿಸಿದ್ದ. ಇದನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡುತ್ತಿದ್ದ ಅರ್ಪಿತಾಳನ್ನು ಕಂಡು ಮತ್ತಷ್ಟು ಕುಪಿತನಾದ ಜಗದೀಶ್‌ಗೌಡ ಗರ್ಭಿಣಿಯ ಕೆನ್ನೆಗೆ ಹೊಡೆದು ಹಲ್ಲೆ ಮಾಡಿದ್ದಲ್ಲದೆ ಮೊಬೈಲ್ ಕಿತ್ತುಕೊಳ್ಳಲು ಮುಂದಾಗಿದ್ದ. ಈ ವೇಳೆ ಗರ್ಭಿಣಿ ಮಹಿಳೆಯ ಹೊಟ್ಟೆ ಗೋಡೆಗೆ ತಾಗಿ ತೀವ್ರ ಪೆಟ್ಟಾಗಿತ್ತು. ಆದರೂ ಗರ್ಭಿಣಿ ಮಹಿಳೆ ಹಾಗೂ ಆಕೆಯ ಪತಿ ವಿಜಯ ಸೇರಿದಂತೆ ಮಕ್ಕಳು, ಮಹಿಳೆಯರು, ವೃದ್ಧರಿದ್ದ ಸುಮಾರು 14 ಮಂದಿಯನ್ನು ಕೋಣೆಯೊಂದರಲ್ಲಿ ಕೂಡಿ ಹಾಕಿ ದೌರ್ಜನ್ಯ ಎಸಗಿದ್ದ ಎಂದು ಆರೋಪಿಸಲಾಗಿದೆ.

► ಕೋಣೆಯಲ್ಲಿ ಕೂಡಿ ಹಾಕಿದ್ದ ವೇಳೆ ಗರ್ಭಿಣಿ

ಹೊಟ್ಟೆ ನೋವು ಜೋರಾದ ಪರಿಣಾಮ ಎಸ್ಟೇಟ್ ಮಾಲಕ ತನ್ನ ಜೀಪಿನಲ್ಲಿ ಮಹಿಳೆಯನ್ನು ಕಡಬಗೆರೆ ಆಸ್ಪತ್ರೆಗೆ ಕಳುಹಿಸಿದ್ದು, ಅಲ್ಲಿನ ವೈದ್ಯರು ಮೂಡಿಗೆರೆ ಕಳುಹಿಸಿದ್ದಾರೆ. ಮೂಡಿಗೆರೆ ವೈದ್ಯರು ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದು, ಈ ವೇಳೆ ವೈದ್ಯರು ಗರ್ಭಿಣಿಯ ಹೊಟ್ಟೆಗೆ ತೀವ್ರ ಪೆಟ್ಟು ಬಿದ್ದ ಪರಿಣಾಮ ರಕ್ತಸ್ರಾವ ಆಗಿದೆ ಎಂದು ಹೇಳಿ ಗರ್ಭಪಾತ ಮಾಡಿದ್ದಾರೆ ಎಂದು ತಿಳಿದು ಬಂದಿದೆ. 

ಎಸ್ಟೇಟ್ ಮಾಲಕ ಮುಂಗಡವಾಗಿ ನೀಡಿದ್ದ ಹಣ ಹಿಂದಿರುಗಿಸಲು ಕೇಳಿದ್ದರು. ನನ್ನ ಗಂಡನ ಸಂಬಂಧಿಕರು ಬೇರೆ ಎಸ್ಟೇಟ್‌ನಲ್ಲಿ ಕೆಲಸ ಕೇಳುತ್ತಾ ಹಣ ಹೊಂದಿಸಲು ಹೋಗಿದ್ದರು. ಹಣ ಹೊಂದಿಸಲು ತಡವಾದ ಪರಿಣಾಮ ಅವರು ಎಸ್ಟೇಟ್‌ಗೆ ಹಿಂದಿರುಗಿರಲಿಲ್ಲ. ಇದನ್ನೇ ನೆಪ ಮಾಡಿಕೊಂಡು ಮಾಲಕ ಜಗದೀಶ್ ಗೌಡ ಹಾಗೂ ಆತನ ಮಗ ತಿಲಕ್ ಎಂಬವರು ನಾನು ಸೇರಿದಂತೆ ನನ್ನ ಕುಟುಂಬದವರನ್ನು ಬಾಯಿಗೆ ಬಂದಂತೆ ನಿಂದಿಸಿ, ಹಲ್ಲೆ ಮಾಡಿದ್ದಾರೆ. ನನ್ನ ಕೆನ್ನೆಗೆ ಹೊಡೆದು ಮೊಬೈಲ್ ಕಿತ್ತುಕೊಳ್ಳಲು ಮುಂದಾಗಿದ್ದ ವೇಳೆ ನನ್ನನ್ನು ತಳ್ಳಿದ್ದರಿಂದ ನನ್ನ ಹೊಟ್ಟೆಗೆ ಕಟ್ಟೆಯೊಂದಕ್ಕೆ ತಾಗಿ ರಕ್ತಸ್ರಾವ ಆಗಿತ್ತು. ವೈದ್ಯರು ಗರ್ಭಪಾತ ಮಾಡಿದ್ದಾರೆ. ಅರ್ಪಿತಾ, ಎಸ್ಟೇಟ್ ಮಾಲಕನಿಂದ ದೌರ್ಜನ್ಯಕ್ಕೊಳಗಾದ ಮಹಿಳೆ

►► ‘ಬಾಳೆಹೊನ್ನೂರು ಚಲೋ’ ಪ್ರತಿಭಟನೆಯ ಎಚ್ಚರಿಕೆ

ಕೂಲಿ ಕಾರ್ಮಿಕರನ್ನು ಕೋಣೆಯಲ್ಲಿ ಕೂಡಿ ಹಾಕಿದ್ದ ಪ್ರಕರಣ ಸಂಬಂಧ ಬಾಳೆಹೊನ್ನೂರು ಠಾಣೆಯಲ್ಲಿ ಎಸ್ಟೇಟ್ ಮಾಲಕ ಜಗದೀಶ್ ಗೌಡ ಹಾಗೂ ಆತನ ಮಗ ತಿಲಕ್ ಎಂಬವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಆದರೆ, ಆರೋಪಿಗಳ ಸುಳಿವು ಇನ್ನೂ ಪತ್ತೆಯಾಗಿಲ್ಲ. ಆರೋಪಿಗಳು ಬಿಜೆಪಿಯೊಂದಿಗೆ ಗುರುತಿಸಿಕೊಂಡಿರುವುದರಿಂದ ಪ್ರಭಾವಿಗಳ ಒತ್ತಡದಿಂದಾಗಿ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಉದ್ದೇಶಪೂರ್ವಕ ವಿಳಂಬ ಮಾಡುತ್ತಿದ್ದಾರೆಂಬ ಆರೋಪ ಕೇಳಿ ಬಂದಿದೆ. ಪೊಲೀಸರು ಆರೋಪಿಗಳನ್ನು ಬುಧವಾರ ಸಂಜೆಯೊಳಗೆ ಬಂಧಿಸಬೇಕು. ತಪ್ಪಿದ್ದಲ್ಲಿ ಗುರುವಾರ ‘ಬಾಳೆಹೊನ್ನೂರು ಚಲೋ’ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಸಾಮಾಜಿಕ ಕಾರ್ಯಕರ್ತ ಕೌಳಿರಾಮು ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News