ಕಾಂಗ್ರೆಸ್‌ ಅಧ್ಯಕ್ಷೀಯ ಚುನಾವಣೆ: ಬಳ್ಳಾರಿಯಲ್ಲಿ ಮತ ಚಲಾಯಿಸಿದ ರಾಹುಲ್‌ ಗಾಂಧಿ

Update: 2022-10-17 06:47 GMT

ಬಳ್ಳಾರಿ, ಅ. 17: ಅಖಿಲ ಭಾರತ ಕಾಂಗ್ರೆಸ್ ಸಮಿತಿ(ಎಐಸಿಸಿ) ಅಧ್ಯಕ್ಷ ಸ್ಥಾನಕ್ಕೆ ಮತದಾನ ನಡೆಯುತ್ತಿದ್ದು, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೇಂದ್ರದ ಮಾಜಿ ಸಚಿವ ಶಶಿ ತರೂರ್ ಕಣದಲ್ಲಿದ್ದಾರೆ. 

‘ಭಾರತ್ ಜೋಡೊ ಯಾತ್ರೆ' ಕೈಗೊಂಡಿರುವ ಎಐಸಿಸಿ ನಾಯಕ ರಾಹುಲ್ ಗಾಂಧಿ ಸದ್ಯ ಬಳ್ಳಾರಿಯಲ್ಲಿದ್ದು, ಇಲ್ಲಿನ ಸಂಗನಕಲ್ಲು ವಿಶ್ರಾಂತಿ ತಾಣದಲ್ಲಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. 

ಮತದಾನ ಹಿನ್ನೆಲೆ ಪಾದ ಯಾತ್ರೆ ಮೊಟಕುಗೊಳಿಸಲು ಸಾಧ್ಯವಿಲ್ಲ. ಹೀಗಾಗಿ ರಾಹುಲ್‍ ಗಾಂಧಿ ಹಾಗೂ ಅವರೊಂದಿಗೆ ಯಾತ್ರೆಯಲ್ಲಿ ಭಾಗಿಯಾಗಿರುವ 40 ಮಂದಿ ಸದಸ್ಯರಿಗೆ ವಿಶೇಷ ಮತಗಟ್ಟೆ ಸ್ಥಾಪಿಸಲಾಗಿದೆ. 

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಒಟ್ಟಾರೆ 9 ಸಾವಿರಕ್ಕೂ ಅಧಿಕ ಮಂದಿ ಎಐಸಿಸಿ ಪ್ರತಿನಿಧಿಗಳು ಮತ ಚಲಾಯಿಸುವ ಹಕ್ಕು ಹೊಂದಿದ್ದು, ಕರ್ನಾಟಕದಲ್ಲಿ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರು ಹಾಗೂ ರಾಜ್ಯಸಭಾ ಸದಸ್ಯರು ಸೇರಿದಂತೆ ಒಟ್ಟು 494 ಮಂದಿ ಪ್ರತಿನಿಧಿಗಳು ಹಕ್ಕು ಚಲಾಯಿಸಲಿದ್ದಾರೆ.

ಕೆಪಿಸಿಸಿ ಕಚೇರಯಲ್ಲಿ ಸಿದ್ಧತೆ:  ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ಇಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4ಗಂಟೆಯ ವರೆಗೆ ಮತದಾನ ನಡೆಯಲಿದ್ದು, 479 ಪ್ರದೇಶ ಕಾಂಗ್ರೆಸ್ ಸಮಿತಿ ಪ್ರತಿನಿಧಿಗಳು, 15 ಮಂದಿ ಶಾಸಕಾಂಗ ಪಕ್ಷದ ಸದಸ್ಯರು ಮತದಾನ ಮಾಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News