ಚಿಕ್ಕಮಗಳೂರು: ಅರಣ್ಯ ಇಲಾಖೆ ವಶದಲ್ಲಿದ್ದ ವ್ಯಕ್ತಿಯ ಮೃತದೇಹ ಆನೆ ಶಿಬಿರದ ಶೌಚಾಲಯದಲ್ಲಿ ಪತ್ತೆ

Update: 2022-10-20 14:26 GMT

ಚಿಕ್ಕಮಗಳೂರು, ಅ.20: ಬಿದಿರು ಕಡಿಯಲು ಬಂದಿದ್ದ ವೇಳೆ ಅರಣ್ಯ ಇಲಾಖೆ ಸಿಬ್ಬಂದಿಯಿಂದ ಬಂಧನಕ್ಕೊಳಗಾಗಿದ್ದ ವ್ಯಕ್ತಿ ಮೃತದೇಹ ತಾಲೂಕಿನ ಕಲ್ಲೋಳ ಕೋಟೆ ಗ್ರಾಮದಲ್ಲಿರುವ ಅರಣ್ಯ ಇಲಾಖೆಯ ಆನೆ ಹಿಮ್ಮೆಟ್ಟಿಸುವ ಶಿಬಿರದ ಶೌಚಾಲಯದಲ್ಲಿ ಪತ್ತೆಯಾಗಿರುವ ಘಟನೆ ವರದಿಯಾಗಿದೆ. 

ಹೃದಯಾಘಾತದಿಂದ ವ್ಯಕ್ತಿ ಮೃತಪಟ್ಟಿದ್ದಾನೆಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದು, ಅರಣ್ಯ ಇಲಾಖೆ ಸಿಬ್ಬಂದಿಯ ಹಲ್ಲೆಯಿಂದಾಗಿ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಶಿವಮೊಗ್ಗ ಮೂಲದ ರವಿ ಎಂಬಾತನ ಮೃತದೇಹ ಚಿಕ್ಕಮಗಳೂರು ಅರಣ್ಯ ವಲಯದ ಕಲ್ಲೋಳಕೋಟೆ ಆನೆ ಶಿಬಿರದಲ್ಲಿ ಗುರುವಾರ ಮಧ್ಯಾಹ್ನದ ವೇಳೆ ಪತ್ತೆಯಾಗಿದೆ ಎನ್ನಲಾಗಿದ್ದು, ಘಟನೆ ಸಂಬಂಧ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಕಳೆದ ರಾತ್ರಿ ಚಿಕ್ಕಮಗಳೂರು ಅರಣ್ಯ ವಿಭಾಗದ ಕಲ್ಲೋಳ ಕೋಟೆ ಅರಣ್ಯ ಪ್ರದೇಶದಲ್ಲಿ ಇಬ್ಬರು ವ್ಯಕ್ತಿಗಳನ್ನು ಬಿದಿರು ಕಳ್ಳತನದ ಆರೋಪದಲ್ಲಿ  ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ಪಡೆದುಕೊಂಡಿದ್ದರೆನ್ನಲಾಗಿದೆ.

ಬಂಧನದಲ್ಲಿದ್ದ ಇಬ್ಬರು ವ್ಯಕ್ತಿಗಳ ಪೈಕಿ ರವಿ ಎಂಬಾತ ಶೌಚಾಲಯಕ್ಕೆ ತೆರಳಿದ್ದು, ಈ ವೇಳೆ ಹೃದಯಾಘಾತದಿಂದ ರವಿ ಮೃತಪಟ್ಟಿದ್ದಾನೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.

ಗ್ರಾಮಸ್ಥರ ಆರೋಪ ಏನು?:  ರವಿ ಹಾಗೂ ಅರಣ್ಯ ಇಲಾಖೆ ವಶದಲ್ಲಿರುವ ಮತ್ತೊಬ್ಬ ವ್ಯಕ್ತಿ ಅರಣ್ಯದಲ್ಲಿ ಬಿದಿರು ಕಡಿಯಲು ಬಂದಿದ್ದರು. ಈ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಆರೋಪಿಗಳ ಮೇಲೆ ಹಲ್ಲೆ ಮಾಡಿದ್ದರಿಂದ ರವಿ ಮೃತಪಟ್ಟಿದ್ದಾನೆ. ಅರಣ್ಯ ಇಲಾಖೆ ವಸತಿಗೃಹದಲ್ಲಿ ಹಲ್ಲೆ ನಡೆಸಿ ಮೃತಪಟ್ಟ ಬಳಿಕ ಆನೆ ಹಿಮ್ಮೆಟ್ಟಿಸುವ ಶಿಬಿರದ ಶೌಚಾಲಯದಲ್ಲಿ ಮೃತದೇಹವನ್ನು ಇರಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಮುಂಭಾಗ ಗ್ರಾಮಸ್ಥರು ಜಮಾಯಿಸಿದ್ದು, ಈ ವೇಳೆ ಗ್ರಾಮಸ್ಥರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ನಡುವೆ ಮಾತಿಕ ಚಕಮಕಿ ನಡೆಯಿತು. ಅರಣ್ಯ ಇಲಾಖೆ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ ಗ್ರಾಮಸ್ಥರು ಹಲ್ಲೆ ನಡೆಸಿದ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಘಟನೆ ಸಂಬಂಧ  ಸಖರಾಯಪಟ್ಟಣ ಪೊಲೀಸ್ ಠಾಣೆಯ ಪೊಲೀಸರು ಭೇಟಿನೀಡಿ ಪರಿಶೀಲನೆ ನಡೆಸಿದ್ದು, ಪರಿಶೀಲನೆ ಬಳಿಕ ಪ್ರಕರಣ ದಾಖಲಿಸಿ ತನಿಖೆ ನಡೆಸಲು ಮುಂದಾಗಿದ್ದಾರೆ. ಪೊಲೀಸರ ತನಿಖೆಯಿಂದ ವ್ಯಕ್ತಿಗೆ ಸಾವಿನ ಕಾರಣ ತಿಳಿದು ಬರಬೇಕಿದೆ.
 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News