ಮೂಡಿಗೆರೆ | ರಸ್ತೆ ದುರಸ್ತಿಯ ಭರವಸೆ ಈಡೇರಿಸುವಲ್ಲಿ ವಿಫಲ ಆರೋಪ; ಶಾಸಕರ ಮನೆ ಮುಂದೆ ರೈತಸಂಘದಿಂದ ಅಹೋರಾತ್ರಿ ಧರಣಿ

Update: 2022-10-20 18:14 GMT

ಮೂಡಿಗೆರೆ ಅ.20: ರಸ್ತೆ ದುರಸ್ತಿಯ ಭರವಸೆ ನೀಡಿ ಭರವಸೆ ಈಡೇರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿ ರೈತಸಂಘ ಹಾಗೂ ಕ್ಷೇತ್ರದ ವಿವಿಧ ಗ್ರಾಮಗಳ ಗ್ರಾಮಸ್ಥರು ಶಾಸಕ ಎಂ.ಪಿ.ಕುಮಾರಸ್ವಾಮಿ ಅವರ ಮನೆ ಮುಂದೆ ಗುರುವಾರದಿಂದ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ.

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕ ಹಾಗೂ 'ನಮ್ಮ ರಸ್ತೆ ನಮ್ಮ ಹಕ್ಕು' ಗ್ರೂಪ್‍ನ ನೂರಾರು ಯುವಕರು ಗುರುವಾರ ಬೆಳಗ್ಗೆ ಪಟ್ಟಣದಲ್ಲಿರುವ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರ ಮನೆ ಮುಂದೆ ಜಮಾಯಿಸಿ ರಸ್ತೆ ದುರಸ್ತಿಗೆ ನಿರ್ಲಕ್ಷ್ಯವಹಿಸಿರುವ ಶಾಸಕರ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. 

ಚಿಕ್ಕಮಗಳೂರು ತಾಲೂಕಿಗೆ ಸೇರಿರುವ ಹಾಗೂ ಮೂಡಿಗೆರೆ ವಿಧಾನಸಭೆ ಕ್ಷೇತ್ರಕ್ಕೆ ಒಳಪಟ್ಟಿರುವ ಗಡಿ ಭಾಗದ ಗ್ರಾಮಗಳಾದ ಮತ್ತಿಕೆರೆ, ಗಂಜಲಗೂಡು, ಬಾಣಾವರ, ಹಳುವಳ್ಳಿ, ಹಾದಿಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ರಸ್ತೆಗಳು ದುರಸ್ತಿ ಕಾಣದೇ ಸಂಪೂರ್ಣವಾಗಿ ಹದಗೆಟ್ಟಿವೆ. ರಸ್ತೆ ಅವ್ಯವಸ್ಥೆಯಿಂದಾಗಿ ವಾಹನಗಳ ಸವಾರರು, ಪ್ರಯಾಣಿಕರು ಹಾಗೂ ಗ್ರಾಮಸ್ಥರು, ರೈತರಿಗೆ ಭಾರೀ ಸಮಸ್ಯೆಯಾಗಿದೆ. ದುರಸ್ತಿಗೆ ಆಗ್ರಹಿಸಿ ನೂರಾರು ಬಾರಿ ಮನವಿ ಮಾಡಿದರೂ ಕ್ಷೇತ್ರದ ಶಾಸಕರು, ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯವಹಿಸಿದ್ದಾರೆ. ಶಾಸಕ ಕುಮಾರಸ್ವಾಮಿ ರಸ್ತೆ ದುರಸ್ತಿಯ ಭರವಸೆ ನೀಡಿ ಈಗ ಮೊಬೈಲ್ ಕರೆಯನ್ನೂ ಸ್ವೀಕರಿಸದೇ ತಮ್ಮ ಕ್ಷೇತ್ರದ ಜನರ ಸಮಸ್ಯೆ ಕೇಳಲು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಈ ವೇಳೆ ಮುಖಂಡರು ಆರೋಪಿಸಿದರು.

ಈ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ ಮಾತನಾಡಿ, ''13 ವರ್ಷದಿಂದ ಮತ್ತಿಕೆರೆ, ಗಂಜಲಗೂಡು, ಬಾಣಾವರ, ಹಳುವಳ್ಳಿ, ಹಾದಿಹಳ್ಳಿ ರಸ್ತೆ ದುರಸ್ತಿ ಕಾಣದೇ ಗುಂಡಿ ಗೊಚ್ಚೆಯಲ್ಲಿ ತಿರುಗಾಡುವಂತಾಗಿದೆ. ಗ್ರಾಮದ ಜನರು, ರೋಗಿಗಳು ಹಾಗೂ ವಿದ್ಯಾರ್ಥಿಗಳು ಕಳೆದ 13 ವರ್ಷದಿಂದ ರಸ್ತೆ ದುರಸ್ತಿ ಕಾಣದೇ ಸಂಕಷ್ಟ ಎದುರಿಸುವಂತಾಗಿದೆ. ಈ ಬಗ್ಗೆ ಅನೇಕ ಬಾರಿ ಶಾಸಕರ ಗಮನಕ್ಕೆ ತಂದರೂ ಅವರು ತಲೆ ಕೆಡಿಸಿಕೊಂಡಿಲ್ಲ'' ಎಂದು ದೂರಿದರು. 

ಈ ವೇಳೆ ಪಿಡಬ್ಲೂಡಿ ಅಧಿಕಾರಿಗಳು ಭೇಟಿ ನೀಡಿ ರಸ್ತೆ ದುರಸ್ತಿಪಡಿಸಲು ಅನುದಾನ ಮೀಸಲಿರಿಸಲಾಗಿದೆ. ಟೆಂಡರ್ ಪ್ರಕ್ರಿಯೆ ಆ.21ರಂದು ನಡೆಯಲಿದೆ. ರಸ್ತೆ ಶೀಘ್ರವೇ ದುರಸ್ತಿಪಡಿಸಲಾಗುವುದು ಎಂದು ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು. ಅದಕ್ಕೆ ಜಗ್ಗದ ಧರಣಿ ನಿರತರು ಶಾಸಕರೇ ಸ್ಥಳಕ್ಕೆ ಬಂದು ಸೂಕ್ತ ಭರವಸೆ ನೀಡದ ಹೊರತು ಸ್ಥಳ ಬಿಟ್ಟು ಕದಲುವ ಪ್ರಶ್ನೆಯೇ ಇಲ್ಲ ಎಂದು ಪಟ್ಟು ಹಿಡಿದು ಧರಣಿ ಮುಂದುವರಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News