20ನೇ ಶತಮಾನದ ಆದಿಭಾಗದ ಭಾರತದ ಪರಿಸರ ದಾರ್ಶನಿಕ

Update: 2023-06-30 05:57 GMT

ರಾಧಾಕಮಲ್ ಮುಖರ್ಜಿ ಇಂದು ಮರೆತೇ ಹೋಗಿದ್ದಾರೆ. ಆದರೆ, ಅವರ ಬರವಣಿಗೆಗಳು, ಇಂದು ಭಾರತ ಮತ್ತು ಜಗತ್ತು ಎದುರಿಸುತ್ತಿರುವ ಪರಿಸರ ಬಿಕ್ಕಟ್ಟಿನ ಬಗ್ಗೆ ಸ್ಪಷ್ಟವಾಗಿ ಮಾತನಾಡಿವೆ. ಉದಾಹರಣೆಗೆ; 1930ರಲ್ಲಿ ‘ಸೋಶಿಯಾಲಜಿಕಲ್ ರಿವ್ಯೆ’ ಎಂಬ ಪತ್ರಿಕೆಯಲ್ಲಿ ಪ್ರಕಟಗೊಂಡಿರುವ ‘ಅನ್ ಎಕಲಾಜಿಕಲ್ ಅಪ್ರೋಚ್ ಟು ಸೋಶಿಯಾಲಜಿ’ ಎಂಬ ಅವರ ಪ್ರಬಂಧ. ‘‘ಸಾಂಪ್ರದಾಯಿಕ ಸಮಾಜ ವಿಜ್ಞಾನವು ಬಹುತೇಕ ಸಂಪೂರ್ಣವಾಗಿ ಮಾನವನ ಮೇಲೆ ಮಾನವನು ಬೀರುವ ಪರಿಣಾಮಗಳಿಗೆ ಒತ್ತು ನೀಡುತ್ತದೆ; ಆದರೆ ಮಾನವನು ಮರಗಳು, ಪ್ರಾಣಿಗಳು, ಭೂಮಿ ಮತ್ತು ನೀರಿನ ಮೇಲೆ ಬೀರುವ ಪರಿಣಾಮಗಳನ್ನು ಹೆಚ್ಚಿನ ಸಂದರ್ಭಗಳಲ್ಲಿ ಉಪೇಕ್ಷಿಸುತ್ತದೆ’’ ಎಂದು ಪ್ರಬಂಧವು ಹೇಳುತ್ತದೆ. ‘‘ಇತಿಹಾಸ ಮತ್ತು ಅರ್ಥಶಾಸ್ತ್ರದಲ್ಲಿ ಈ ಮಾನವ ಪ್ರಭಾವಗಳಿಗೆ ಅನಗತ್ಯ ಮಹತ್ವವನ್ನು ನೀಡಲಾಗಿದೆ’’ ಎಂದು ಮುಖರ್ಜಿ ಹೇಳುತ್ತಾರೆ.

1922ರಲ್ಲಿ ಲಕ್ನೋ ವಿಶ್ವವಿದ್ಯಾನಿಲಯದ ಪ್ರೊಫೆಸರ್ ರಾಧಾಕಮಲ್ ಮುಖರ್ಜಿ ಪುಸ್ತಕವೊಂದನ್ನು ಪ್ರಕಟಿಸಿದರು. ಪುಸ್ತಕದ ಹೆಸರು ‘ಪ್ರಿನ್ಸಿಪಲ್ಸ್ ಆಫ್ ಕಂಪೇರಟಿವ್ ಎಕನಾಮಿಕ್ಸ್’. ನೂರು ವರ್ಷಗಳ ಬಳಿಕ ಆ ಪುಸ್ತಕವನ್ನು ಓದುವ ಅವಕಾಶ ನನಗೆ ಸಿಕ್ಕಿತು. ಭಾರತೀಯ ಹಳ್ಳಿಗಳ ಸಾಮಾಜಿಕ ಮತ್ತು ಆರ್ಥಿಕ ಬದುಕಿನ ಮೇಲೆ ಪರಿಸರವು ಬೀರುವ ಪ್ರಭಾವದ ಬಗ್ಗೆ ಈ ಪುಸ್ತಕವು ನೀಡಿರುವ ಗಮನವು ನನ್ನ ಗಮನ ಸೆಳೆಯಿತು. ಬಹುಶಃ ಕೃಷಿಯಲ್ಲಿ ಸಾರ್ವಜನಿಕ ಸಂಪನ್ಮೂಲಗಳು ವಹಿಸುವ ಮಹತ್ವದ ಪಾತ್ರವನ್ನು ಗುರುತಿಸಿದ ಮೊದಲ ಭಾರತೀಯ ವಿದ್ವಾಂಸ ಮುಖರ್ಜಿಯಾಗಿದ್ದಾರೆ. ಕೃಷಿ ಭೂಮಿಗಳ ಒಡೆತನವನ್ನು ವ್ಯಕ್ತಿಗಳು ಅಥವಾ ಕುಟುಂಬಗಳು ಹೊಂದಿದ್ದರೆ, ಕಾಲುವೆಗಳು, ಕಾಡುಗಳು ಮತ್ತು ಹುಲ್ಲುಗಾವಲುಗಳ ಪ್ರಯೋಜನವನ್ನು ಸಾಂಪ್ರದಾಯಿಕವಾಗಿ ಇಡೀ ಗ್ರಾಮದ ಜನರು ಪಡೆಯುತ್ತಿದ್ದರು. ಹಾಗಾಗಿ, ಮುಖರ್ಜಿ ಬರೆಯುವಂತೆ, ‘‘ಖಾಸಗಿ ಒಡೆತನವು ಈ ಸಾರ್ವಜನಿಕ ಸಂಪನ್ಮೂಲಗಳ ಬಳಕೆಯಲ್ಲಿ ಒಡೆಯನಿಗೆ ಆದ್ಯತೆಯನ್ನು ನೀಡಿದರೂ, ಅವುಗಳ ಬಳಕೆ ಒಡೆಯನಿಗೆ ಮಾತ್ರ ಯಾವತ್ತೂ ಸೀಮಿತಗೊಂಡಿಲ್ಲ’’.

ಬ್ರಿಟಿಷ್ ಪೂರ್ವ ಭಾರತೀಯ ಹಳ್ಳಿ ವ್ಯವಸ್ಥೆಯಲ್ಲಿ, ನೀರಾವರಿ ಕಾಲುವೆಗಳ ಒಡೆತನ ಮತ್ತು ಬಳಕೆ ಹಕ್ಕುಗಳು ಇಡೀ ಹಳ್ಳಿಗೆ ಸೇರಿದ್ದವು ಎನ್ನುವುದು ಮಹತ್ವದ ಅಂಶವಾಗಿದೆ. ‘‘ಅಂದು ನೀರಾವರಿಯನ್ನು ಹೇಗೆ ನಿರ್ವಹಿಸಲಾಗುತ್ತಿತ್ತು ಎಂದರೆ, ಯಾವುದಾದರೂ ಸಾರ್ವಜನಿಕ ನೀರಾವರಿ ಮೂಲವು ಸಮುದಾಯಕ್ಕೆ ವಿರುದ್ಧವಾಗಿ ತಮ್ಮ ಒಡೆತನದಲ್ಲಿದ್ದರೆ ಜನರು ಅವುಗಳ ಒಡೆತನವನ್ನು ಸಮುದಾಯಕ್ಕೆ ಬಿಟ್ಟುಕೊಡಬೇಕಾಗುತ್ತಿತ್ತು; ಅಥವಾ ಅದರ ಪರಿಣಾಮಗಳನ್ನು ಅನುಭವಿಸಬೇಕಾಗಿತ್ತು. ಇತರರೊಂದಿಗೆ ನಿಕಟ ಹಣಕಾಸು ಸಂಬಂಧವನ್ನು ಹೊಂದುವುದನ್ನು ಅಂದಿನ ವ್ಯವಸ್ಥೆಯು ಜನರಿಗೆ ಅನಿವಾರ್ಯವಾಗಿಸಿತ್ತು’’ ಎಂಬುದಾಗಿ ಮುಖರ್ಜಿ ತನ್ನ ಪುಸ್ತಕದಲ್ಲಿ ಬರೆದಿದ್ದಾರೆ. ಹಾಗಾಗಿ, ‘‘ಭಾರತೀಯ ಹಳ್ಳಿಗಳಲ್ಲಿ, ನೀರಿನ ಹಕ್ಕು ವ್ಯಕ್ತಿಗಳಲ್ಲಿ ಕೇಂದ್ರೀಕೃತವಾಗುವುದನ್ನು ತಪ್ಪಿಸಲು, ನೀರಿನ ಪೂರೈಕೆಗೆ ಸಂಬಂಧಿಸಿ ಜನರಲ್ಲಿ ಸೂಕ್ಷ್ಮ ಸಾಮುದಾಯಿಕ ಪ್ರಜ್ಞೆಯಿತ್ತು. ಸಾರ್ವಜನಿಕ ಸೊತ್ತುಗಳ ಮೇಲಿನ ನಿರಂಕುಶ ಅಧಿಕಾರ ವನ್ನು ತಡೆಯಲು ಭಾರತವು ಕೆರೆಗಳು ಮತ್ತು ನೀರು ವಿತರಿಸುವ ಕಾಲುವೆಗಳನ್ನು ಒಂದು ರೀತಿಯ ಸಾಮುದಾಯಿಕ ಒಡೆತನಕ್ಕೆ ಒಳಪಡಿಸಿತು. ಯಾಕೆಂದರೆ, ಕೆರೆಗಳು ಮತ್ತು ನೀರಾವರಿ ಕಾಲುವೆಗಳು ಕೃಷಿಯ ಅವಿಭಾಜ್ಯ ಅಂಗಗಳಾಗಿದ್ದವು’’ ಎಂಬುದಾಗಿ ಮುಖರ್ಜಿ ಹೇಳಿದ್ದಾರೆ.

ಆದರೆ, ಬಳಿಕ ಭಾರತವನ್ನು ವಸಾಹತು ಮಾಡಿಕೊಂಡ ಬ್ರಿಟಿಷರು, ಸಾರ್ವಜನಿಕ ಸೊತ್ತುಗಳ ನಿರ್ವಹಣೆಯ ಈ ಸ್ವದೇಶಿ ವ್ಯವಸ್ಥೆಗಳನ್ನು ಕಡೆಗಣಿಸಿದರು ಎಂದು ಮುಖರ್ಜಿ ಹೇಳುತ್ತಾರೆ. ಸರಕಾರಿ ಅರಣ್ಯ ಇಲಾಖೆಯು ಕಾಡಿನ ಪ್ರದೇಶಗಳನ್ನು ತನ್ನ ವಶಕ್ಕೆ ತೆಗೆದುಕೊಂಡಿತು ಹಾಗೂ ಅದನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಳಸಿಕೊಂಡಿತು. ತಮ್ಮ ಜೀವನೋಪಾಯಕ್ಕಾಗಿ ಜನರು ಕಾಡುಗಳನ್ನು ಬಳಸುವುದನ್ನು ಅಪರಾಧವನ್ನಾಗಿ ಮಾಡಿತು. ಕೆರೆಗಳು ಮತ್ತು ಕಾಲುವೆಗಳನ್ನೂ ಸರಕಾರಿ ಇಲಾಖೆಯೊಂದರ ಅಡಿಗೆ ತಂದಿತು ಹಾಗೂ ಅವುಗಳ ನಿರ್ವಹಣೆಯನ್ನು ಸರಕಾರದಿಂದ ನಿಯೋಜಿತರಾದ ಅಧಿಕಾರಿಗಳಿಗೆ ಒಪ್ಪಿಸಿತು. ‘‘ಈ ಬದಲಾವಣೆಯು, ಸಾರ್ವಜನಿಕ ಕಾಮಗಾರಿಗಳಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು ಸಂಪೂರ್ಣವಾಗಿ ಕೊನೆಗೊಳಿಸಿತು. ಮೊದಲು ಇಂಥ ಸಾರ್ವಜನಿಕ ಕಾಮಗಾರಿಗಳನ್ನು ಸ್ಥಳೀಯ ವ್ಯವಸ್ಥೆಯೊಂದು ನಿರ್ವಹಿಸುತ್ತಿತ್ತು. ಆದರೆ, ಸ್ಥಳೀಯರಿಗೆ ಜವಾಬ್ದಾರಿ ಮತ್ತು ಅಧಿಕಾರ ಸಿಗದಾಗ ಈ ವ್ಯವಸ್ಥೆಯು ನಿಷ್ಕ್ರಿಯವಾಯಿತು’’ ಎಂಬುದಾಗಿ ಮುಖರ್ಜಿ ಬರೆದಿದ್ದಾರೆ.

ರಾಧಾಕಮಲ್ ಮುಖರ್ಜಿ ಇಂದು ಮರೆತೇ ಹೋಗಿದ್ದಾರೆ. ಆದರೆ, ಅವರ ಬರವಣಿಗೆಗಳು, ಇಂದು ಭಾರತ ಮತ್ತು ಜಗತ್ತು ಎದುರಿಸುತ್ತಿರುವ ಪರಿಸರ ಬಿಕ್ಕಟ್ಟಿನ ಬಗ್ಗೆ ಸ್ಪಷ್ಟವಾಗಿ ಮಾತನಾಡಿವೆ. ಉದಾಹರಣೆಗೆ; 1930ರಲ್ಲಿ ‘ಸೋಶಿಯಾಲಜಿಕಲ್ ರಿವ್ಯೆ’ ಎಂಬ ಪತ್ರಿಕೆಯಲ್ಲಿ ಪ್ರಕಟಗೊಂಡಿರುವ ‘ಅನ್ ಎಕಲಾಜಿಕಲ್ ಅಪ್ರೋಚ್ ಟು ಸೋಶಿಯಾಲಜಿ’ ಎಂಬ ಅವರ ಪ್ರಬಂಧ. ‘‘ಸಾಂಪ್ರದಾಯಿಕ ಸಮಾಜ ವಿಜ್ಞಾನವು ಬಹುತೇಕ ಸಂಪೂರ್ಣವಾಗಿ ಮಾನವನ ಮೇಲೆ ಮಾನವನು ಬೀರುವ ಪರಿಣಾಮಗಳಿಗೆ ಒತ್ತು ನೀಡುತ್ತದೆ; ಆದರೆ ಮಾನವನು ಮರಗಳು, ಪ್ರಾಣಿಗಳು, ಭೂಮಿ ಮತ್ತು ನೀರಿನ ಮೇಲೆ ಬೀರುವ ಪರಿಣಾಮಗಳನ್ನು ಹೆಚ್ಚಿನ ಸಂದರ್ಭಗಳಲ್ಲಿ ಉಪೇಕ್ಷಿಸುತ್ತದೆ’’ ಎಂದು ಪ್ರಬಂಧವು ಹೇಳುತ್ತದೆ. ‘‘ಇತಿಹಾಸ ಮತ್ತು ಅರ್ಥಶಾಸ್ತ್ರದಲ್ಲಿ ಈ ಮಾನವ ಪ್ರಭಾವಗಳಿಗೆ ಅನಗತ್ಯ ಮಹತ್ವವನ್ನು ನೀಡಲಾಗಿದೆ’’ ಎಂದು ಮುಖರ್ಜಿ ಹೇಳುತ್ತಾರೆ. ಇನ್ನೊಂದೆಡೆ, ಭೂಗೋಳ ಶಾಸ್ತ್ರಜ್ಞರು ಮತ್ತು ಪರಿಸರ ತಜ್ಞರು, ಸಮಾಜ, ಅದರಲ್ಲೂ ವಿಶೇಷವಾಗಿ ಉದ್ಯೋಗ ಮತ್ತು ಕೌಟುಂಬಿಕ ಜೀವನದ ಮೇಲೆ ಪರಿಸರ ಬೀರುವ ಪ್ರಭಾವಕ್ಕೆ ಹೆಚ್ಚಿನ ಮಹತ್ವ ನೀಡಿದ್ದಾರೆ’’ ಎಂದು ಪ್ರಬಂಧದಲ್ಲಿ ಮುಖರ್ಜಿ ಬರೆದಿದ್ದಾರೆ.

ಹಾಗಾಗಿ, ‘‘ನಿರ್ದಿಷ್ಟ ವಲಯ ಮತ್ತು ನಿರ್ದಿಷ್ಟ ಸಮಯದಲ್ಲಿ ಸಹಜವಾಗಿ ವಿಕಸನಗೊಂಡಿರುವ ಸಸ್ಯ ಮತ್ತು ಪ್ರಾಣಿ ವ್ಯವಸ್ಥೆಗಳಲ್ಲಿ ಮಾನವರು ಮತ್ತು ಪ್ರಾಣಿಗಳು ಹಸ್ತಕ್ಷೇಪ ನಡೆಸಿದಾಗ ಪ್ರಾಕೃತಿಕ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗುತ್ತದೆ. ಆಗ ಆ ವ್ಯತ್ಯಯಕ್ಕೆ ಅನುಗುಣವಾದ ಹೊಸ ಪರಿಸರ ವ್ಯವಸ್ಥೆಯೊಂದು ಹುಟ್ಟಿಕೊಳ್ಳುತ್ತದೆ ಹಾಗೂ ಇದರ ಉಸ್ತುವಾರಿಯನ್ನು ಸ್ವತಃ ಪರಿಸರ ವ್ಯವಸ್ಥೆಯೇ ವಹಿಸುತ್ತದೆ’’ ಎಂಬುದಾಗಿ ತನ್ನ ಪ್ರಬಂಧದಲ್ಲಿ ಮುಖರ್ಜಿ ತನ್ನ ಸಹ ಸಮಾಜ ವಿಜ್ಞಾನಿಗಳಿಗೆ ಹೇಳುತ್ತಾರೆ. ಇದಕ್ಕೆ ಅವರು ಭಾರತದ ಉದಾಹರಣೆಯನ್ನೇ ಕೊಡುತ್ತಾರೆ. ‘‘ಮಾನವನ ಸಾಕು ಪ್ರಾಣಿಗಳು ಅತಿಯಾಗಿ ಮೇಯ್ದ ಮತ್ತು ತುಳಿದ ಕಾರಣದಿಂದಾಗಿ ಸಸ್ಯ ಸಂಕುಲ ಸಂಪೂರ್ಣವಾಗಿ ನಾಶವಾಗಿದೆ ಹಾಗೂ ಭಾರತದ ನದಿ ಬಯಲು ಪ್ರದೇಶಗಳಲ್ಲಿ ವರ್ಷವಿಡೀ ಅಥವಾ ಕೆಲವು ಋತುಗಳಲ್ಲಿ ಕಳೆಗಳು ಬೆಳೆಯುತ್ತಿವೆ’’ ಎಂಬ ಅಂಶದತ್ತ ಅವರು ಬೆಟ್ಟು ಮಾಡುತ್ತಾರೆ.

‘‘ಪರಿಸರ ವ್ಯವಸ್ಥೆಯನ್ನು ಬದಲಾಯಿಸಲು ಮತ್ತು ಮರುರೂಪ ನೀಡಲು ಮಾನವರಿಗೆ ಅಭೂತಪೂರ್ವ ಸಾಮರ್ಥ್ಯವಿದೆ. ಮರಗಳನ್ನು ಕಡಿಯುವ, ಕೃಷಿ ಮಾಡುವ, ಪ್ರಾಣಿಗಳನ್ನು ಸಾಕುವ ಮತ್ತು ಅಪರೂಪದ ಪ್ರಾಣಿ ಮತ್ತು ಪಕ್ಷಿಗಳನ್ನು ಆಮದು ಮಾಡುವ ಮಾನವನ ಚಟುವಟಿಕೆಗಳು ಪ್ರಾಥಮಿಕ ಮತ್ತು ಎರಡನೇ ಹಂತದ ಸುದೀರ್ಘ ಪರಿಣಾಮಗಳನ್ನು ಪರಿಸರದ ಮೇಲೆ ಬೀರಿವೆ. ಈ ಪರಿಣಾಮಗಳ ಸುಳಿಯಲ್ಲಿ ಸಮಗ್ರ ಸಸ್ಯ ತಳಿಗಳು ಮತ್ತು ಸಮುದಾಯಗಳು ಸಿಲುಕಿಕೊಂಡಿವೆ. ಈ ಅವ್ಯವಸ್ಥೆಗಳನ್ನು ಸರಿಪಡಿಸದಿದ್ದರೆ, ಮಹತ್ವದ ಸಸ್ಯ ಮತ್ತು ಪ್ರಾಣಿ ಪ್ರಭೇದಗಳು ಕಣ್ಮರೆಯಾಗಬಹುದು, ಮಣ್ಣಿನ ಫಲವತ್ತತೆ ಕುಂದಬಹುದು, ಅರಣ್ಯನಾಶಕ್ಕೆ ಮತ್ತು ಮರುಭೂಮಿಗಳ ಸೃಷ್ಟಿಗೆ ಕಾರಣವಾಗಬಹುದು ಹಾಗೂ ಬರಗಾಲ ಕಾಲಿಡಬಹುದು. ಅದರೊಂದಿಗೆ, ಈ ವಲಯದಲ್ಲಿ ಒಂದು ಕಾಲದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಮಾನವ ಬದುಕು ಅವನತಿಯತ್ತ ಸಾಗಬಹುದು’’ ಎಂದು ಅವರು ಎಚ್ಚರಿಸುತ್ತಾರೆ.

ಮಾನವರು ಪರಿಸರವನ್ನು ಮತ್ತು ಪರಿಸರವು ಮಾನವರನ್ನು ಅವಲಂಬಿಸಿದೆ ಎಂಬ ಕಲ್ಪನೆ, ಜೀವಜಾಲದ ಕಲ್ಪನೆ ಮತ್ತು ಈ ಜಾಲದಲ್ಲಿ ನಡೆಸುವ ಹಸ್ತಕ್ಷೇಪವು ಎಷ್ಟು ಅಪಾಯಕಾರಿಯಾಗಬಹುದು ಎನ್ನುವ ಕಲ್ಪನೆಯನ್ನು ಮುಖರ್ಜಿ ಒಂದು ಶತಮಾನದ ಹಿಂದೆಯೇ ಹೊಂದಿದ್ದರು. ಈ ವಿಷಯಗಳು ಇಂದು ಪರಿಸರ ವಿದ್ವಾಂಸರು ಮತ್ತು ಪರಿಸರ ಕಾರ್ಯಕರ್ತರ ಆದ್ಯಚಿಂತನೆಗಳಾಗಿವೆ.

ಆದರೆ, 1930ರ ದಶಕದಲ್ಲಿ ಈ ಕಲ್ಪನೆಗಳು ಮುನ್ನೆಚ್ಚರಿಕಾ ಚಿಂತನೆಗಳಾಗಿದ್ದವು ಹಾಗೂ ದಾರ್ಶನಿಕವಾಗಿತ್ತು. ರಾಧಾಕಮಲ್ ಮುಖರ್ಜಿ ಪರಿಸರದ ವಿಷಯದಲ್ಲಿ ಸಂಯಮ ಮತ್ತು ಜವಾಬ್ದಾರಿ ಯನ್ನು ಬೋಧಿಸಿದ್ದರು. ಆದರೆ, ಅವರ ಬೋಧನೆಗಳು ಕ್ಷಿಪ್ರ ನಗರೀಕರಣ ಮತ್ತು ಕೈಗಾರೀಕೃತ ಸಮಾಜದ ನೀತಿಗಳಿಗೆ ವಿರುದ್ಧವಾ ಗಿದ್ದವು. ಯಾಕೆಂದರೆ, ಕ್ಷಿಪ್ರ ನಗರೀಕರಣವು ತನ್ನ ಬೆಳವಣಿಗೆ ಮತ್ತು ವಿಸ್ತರಣೆಗೆ ಪರಿಸರ ತಡೆಯಾಗುವುದನ್ನು ಯಾವತ್ತೂ ಸಹಿಸುವುದಿಲ್ಲ.

1934ರಲ್ಲಿ, ಜೀವನೋಪಾಯ ಗಳಿಸುವ ವಿಧಾನಗಳು ಪರಿಸರದ ಮೇಲೆ ದುಷ್ಪರಿಣಾಮಗಳನ್ನು ಬೀರಬಹುದು ಎಂಬ ಬಗ್ಗೆ ತನ್ನ ಸಹ-ವಿದ್ವಾಂಸರನ್ನು ಎಚ್ಚರಿಸುವುದಕ್ಕಾಗಿ ಮುಖರ್ಜಿ ‘ಇಂಡಿಯನ್ ಜರ್ನಲ್ ಆಫ್ ಎಕನಾಮಿಕ್ಸ್’ನಲ್ಲಿ ಲೇಖನವೊಂದನ್ನು ಪ್ರಕಟಿಸಿದರು. ಪ್ರಕೃತಿಯ ನಿಯಮಗಳಲ್ಲಿ ಹಸ್ತಕ್ಷೇಪ ನಡೆಸುವುದು ಆರ್ಥಿಕ ಚಟುವಟಿಕೆಗಳ ಮೇಲೆ ಅಪಾಯಕಾರಿ ಪರಿಣಾಮಗಳನ್ನು ಬೀರಬಹುದು ಎಂದು ಅವರು ತನ್ನ ಈ ಲೇಖನದಲ್ಲಿ ವಿವರಿಸಿದ್ದರು. ಆ ಲೇಖನಕ್ಕೆ ‘ಮುರಿದ ಜನಸಂಖ್ಯೆ, ಜಮೀನು ಮತ್ತು ನೀರಿನ ನಡುವಿನ ಸಮತೋಲನ’ ಎಂಬ ಪರಿಣಾಮಕಾರಿ ಶಿರೋನಾಮೆಯನ್ನು ಅವರು ನೀಡಿದರು. ಅವರು ತನ್ನ ಆ ಲೇಖನದಲ್ಲಿ, ಗಂಗಾ ನದಿಯ ಭಾರತೀಯ ಬಯಲು ಪ್ರದೇಶದಲ್ಲಿ ನಡೆಯುತ್ತಿರುವ ಅರಣ್ಯನಾಶ ಮತ್ತು ಬರಿದಾಗುತ್ತಿರುವ ಹುಲ್ಲುಗಾವಲುಗಳ ಬಗ್ಗೆ ಗಮನ ಹರಿಸಿದ್ದಾರೆ. ಇದರಿಂದಾಗಿ ಬೃಹತ್ ಕಣಿವೆಗಳು ಸೃಷ್ಟಿಯಾಗಿದ್ದು ಕೃಷಿ ಅಥವಾ ವಾಸಕ್ಕೆ ಯೋಗ್ಯವಾಗಿಲ್ಲ. ಅದೂ ಅಲ್ಲದೆ, ಈ ಪ್ರದೇಶಗಳಲ್ಲಿ ಮಳೆ ಕಡಿಮೆಯಾಗಿದೆ ಹಾಗೂ ಅನಿಯಮಿತವಾಗಿದೆ. ಅದರ ಪರಿಣಾಮವಾಗಿ ನೀರು ಮತ್ತು ಮೇವಿನ ಕೊರತೆ ತಲೆದೋರಿದೆ. ಆಕಳುಗಳು ಈಗ ಬಡ ಮತ್ತು ದುರ್ಬಲವಾಗಿದ್ದು ಕಡಿಮೆ ಹಾಲು ಕೊಡುತ್ತಿವೆ ಹಾಗೂ ಹೊಲಗಳಲ್ಲಿ ಕೆಲಸ ಮಾಡಲು ಉತ್ಸುಕವಾಗಿಲ್ಲ ಎಂಬುದಾಗಿ ಅವರು ಹೇಳಿದ್ದಾರೆ. ‘‘ಭವಿಷ್ಯದಲ್ಲಿ ಸಿಂಧೂ ನದಿ ಕಣಿವೆಯ ಸ್ಥಿತಿಯೇ ಗಂಗಾ ನದಿ ಕಣಿವೆಗೆ ಬರುವುದು ಅಸಂಭವವೇನಲ್ಲ. ಸಿಂಧೂ ನದಿ ಕಣಿವೆಯು ಒಮ್ಮೆ ನಳನಳಿಸು ತ್ತಿತ್ತು. ಈಗ ಸಿಂಧೂ ನದಿಯ ಪೂರ್ವ ಭಾಗವು ಒಣಗಿದ್ದು ಅದರ ಒಡಲಲ್ಲಿ ಪ್ರಾಚೀನ ನಗರಗಳು ಹೂತುಹೋಗಿವೆ. ಒಮ್ಮೆ ಫಲವತ್ತಾದ ವಲಯವು ಹಂತ ಹಂತವಾಗಿ ಹೇಗೆ ಬಂಜರು ಭೂಮಿಯಾಯಿತು ಎನ್ನುವುದನ್ನು ಅವು ಸಾರಿ ಹೇಳುತ್ತಿವೆ’’ ಎಂದು ಅವರು ಬರೆದಿದ್ದಾರೆ.

ರಾಧಾಕಮಲ್ ಮುಖರ್ಜಿ ಇಂದಿನ ವಿದ್ವಾಂಸರಂತೆ ಸೀಮಿತ ವಿಷಯಗಳ ಬಗ್ಗೆ ಜ್ಞಾನ ಹೊಂದಿರುವ ತಜ್ಞರಲ್ಲ. ಇತಿಹಾಸ ಮತ್ತು ತತ್ವಶಾಸ್ತ್ರದಿಂದ ಹಿಡಿದು ಅರ್ಥಶಾಸ್ತ್ರ ಮತ್ತು ಸಮಾಜಶಾಸ್ತ್ರದವರೆಗೆ ಅವರ ಬರವಣಿಗೆಗಳ ವ್ಯಾಪ್ತಿ ವಿಶಾಲವಾಗಿದೆ. ಭಾರತದ ಇತರ ಅರ್ಥಶಾಸ್ತ್ರಜ್ಞರಂತಲ್ಲದೆ, ಪರಿಸರ ವಿಜ್ಞಾನ, ಅದರಲ್ಲೂ ಮುಖ್ಯವಾಗಿ ಅಂದು ರೂಪುಗೊಳ್ಳುತ್ತಿದ್ದ ಪರಿಸರ ಅಧ್ಯಯನ ಕ್ಷೇತ್ರದಲ್ಲಿ ತೀವ್ರ ಆಸಕ್ತಿ ಹೊಂದಿದ್ದರು.

ಮುಖರ್ಜಿಯ ನಿಧನದ ಬಳಿಕ ಅವರ ಪ್ರಕಟಿತ 47 ಪುಸ್ತಕಗಳನ್ನು ಸಂಗ್ರಹಿಸಲಾಗಿದೆ. ವಿವಿಧ ವಿಷಯಗಳ ಬಗ್ಗೆ ಅವರು ಬರೆದ ಪುಸ್ತಕಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ಅವರ ಮೊದಲ ಪುಸ್ತಕ ‘ದ ಫೌಂಡೇಶನ್ಸ್ ಆಫ್ ಇಂಡಿಯನ್ ಎಕನಾಮಿಕ್ಸ್’ (1916). ಬಳಿಕ ಅವರು ‘ರೀಜನಲ್ ಸೋಶಿಯಾಲಜಿ (1926), ‘ದ ಚೇಂಜಿಂಗ್ ಫೇಸ್ ಆಫ್ ಬೆಂಗಾಲಿ’ (1938), ‘ಸೋಶಿಯಲ್ ಎಕಾಲಜಿ’ (1940), ‘ದ ಇಂಡಿಯನ್ ವರ್ಕಿಂಗ್ ಕ್ಲಾಸ್’ (1945), ‘ದ ಸೋಶಿ ಯಲ್ ಫಂಕ್ಷನ್ ಆಫ್ ಆರ್ಟ್’ (1948), ‘ದ ಸೋಶಿಯಲ್ ಸ್ಟ್ರಕ್ಚರ್ ಆಫ್ ವ್ಯಾಲ್ಯೂಸ್’ (1949), ‘ದ ಡೈನಾಮಿಕ್ಸ್ ಆಫ್ ಮೋರಲ್ಸ್’ (1951), ‘ದ ಹಿಸ್ಟರಿ ಆಫ್ ಇಂಡಿಯನ್ ಸಿವಿಲೈಸೇಶನ್’ (ಎರಡು ಸಂಪುಟಗಳು, 1956), ‘ದ ಫಿಲಾಸಫಿ ಆಫ್ ಸೋಶಿಯಲ್ ಸಯನ್ಸ್’ (1960) ಮತ್ತು ‘ದ ಫ್ಲವರಿಂಗ್ ಆಫ್ ಇಂಡಿಯನ್ ಆರ್ಟ್’ (1964) ಮುಂತಾದ ಪುಸ್ತಕಗಳನ್ನು ಬರೆದರು.

ಮುಖರ್ಜಿ ಬರೆದ ಪುಸ್ತಕಗಳ ಪೈಕಿ ಹೆಚ್ಚಿನವು ಕ್ಷಣಿಕ ಅವಧಿಯ ಮಹತ್ವಗಳನ್ನು ಹೊಂದಿದವುಗಳು. ಉದಾಹರಣೆಗೆ; ಭಾರತೀಯ ಕಲಾ ಇತಿಹಾಸಕ್ಕೆ ಅವರು ನೀಡಿದ ದೇಣಿಗೆಗಳನ್ನು ಈಗ ಯಾರು ನೆನಪಿಸಿ ಕೊಳ್ಳುತ್ತಿಲ್ಲ. ಅವರ ಪುಸ್ತಕಗಳನ್ನು ಈಗ ವೃತ್ತಿಪರ ಅರ್ಥಶಾಸ್ತ್ರಜ್ಞರು ಅಥವಾ ವೃತ್ತಿಪರ ಸಮಾಜಶಾಸ್ತ್ರಜ್ಞರು ಓದುವುದಿಲ್ಲ. ಆದರೆ, ಮಾನವ ಪರಿಸರ ಕ್ಷೇತ್ರದಲ್ಲಿ ಅವರೊಬ್ಬ ನೈಜ ಆದಿ ಪ್ರವರ್ತಕ. ಈ ವಿಷಯದ ಬಗ್ಗೆ ಅವರು ಬರೆದ ಹೆಚ್ಚಿನ ವಿಷಯಗಳು ಶಾಶ್ವತ ಸತ್ಯಗಳಾಗಿವೆ.

ರಾಧಾಕಮಲ್ ಮುಖರ್ಜಿಯವರು ತನ್ನ ಶಿಕ್ಷಣದಿಂದ ಜೀವ ಜಾಲದ ಒಳಹೊರಗುಗಳ ಬಗ್ಗೆ ಆಳವಾದ ಜ್ಞಾನವನ್ನು ಪಡೆದುಕೊಂಡರು ಹಾಗೂ ಅದರ ಮೇಲೆ ಅಪಾರವಾದ ಗೌರವವನ್ನು ಬೆಳೆಸಿಕೊಂಡರು. ಪರಿಸರವಾದ ಹುಟ್ಟುವ ಮೊದಲೇ ಅವರು ಪರಿಸರವಾದಿಯಾಗಿದ್ದರು; ‘ಪರಿಸರ ಸಮಾಜಶಾಸ್ತ್ರಜ್ಞ’ ಮತ್ತು ‘ಪರಿಸರ ಅರ್ಥಶಾಸ್ತ್ರಜ್ಞ’ ಎಂಬ ಶೈಕ್ಷಣಿಕ ಅಧ್ಯಯನ ಶಾಖೆಗಳ ಕಲ್ಪನೆಗೂ ತುಂಬಾ ಮೊದಲೇ ಅವರು ಇವೆರಡೂ ಆಗಿದ್ದರು.

‘‘ಅರ್ಥಶಾಸ್ತ್ರ ಅಥವಾ ಸಮಾಜಶಾಸ್ತ್ರದ ನಿಯಮಗಳು ಜೈವಿಕ ಸಮತೋಲನದ ಪ್ರಮುಖ ನಿಯಮಗಳ ಅಡಿಯಲ್ಲಿ ಬರಬೇಕು’’ ಎಂಬುದಾಗಿ ಮುಖರ್ಜಿ ಒಮ್ಮೆ ಹೇಳಿದ್ದರು. ವಿದ್ವಾಂಸರು ವೈಚಾರಿಕ ಕಾರಣಗಳಿಗಾಗಿ ಪ್ರಕೃತಿಯ ಮೇಲೆ ಹೆಚ್ಚಿನ ಗಮನವನ್ನು ಕೊಡಬೇಕು; ಹಾಗೂ ನಾಗರಿಕರು ಬದುಕುಳಿಯುವುದಕ್ಕಾಗಿ ಪ್ರಕೃತಿಯ ಮಿತಿಗಳ ಮೇಲೆ ಹೆಚ್ಚಿನ ಗಮನವನ್ನು ನೀಡಬೇಕು ಎಂದು ವಾದಿಸಿದ್ದರು.

ಮುಖರ್ಜಿ ಪರಿಸರಕ್ಕೆ ಗಮನ ನೀಡದ ಹಾಗೂ ಕ್ಷಿಪ್ರ ಆರ್ಥಿಕ ಬೆಳವಣಿಗೆಯನ್ನು ಮಾತ್ರ ಗುರಿಯಾಗಿಸಿದ್ದ ಕಾಲ ಘಟ್ಟದಲ್ಲಿ ವಾಸಿಸಿದ್ದರು. ಆದರೂ, ಅವರು ಅಂದಿನ ನೀತಿಗಳಿಗೆ ವಿರುದ್ಧವಾಗಿ ಸಾಗಿ, ‘ಮಾನವರು ಪ್ರಕೃತಿಯ ‘ನಿಧಾನ ವಿಧಾನ’ಗಳನ್ನು ಕೊಂಚ ಮಟ್ಟಿಗೆ ಅನುಸರಿಸುವುದು ಉತ್ತಮ’ ಎಂಬ ಸಲಹೆಯನ್ನು ನೀಡಿದ್ದರು. ‘‘ಮಾನವರು ಹರಿದು ಹಾಕುವ ಗುಣವನ್ನು ಹೊಂದಿದ್ದಾರೆ. ಅದಕ್ಕೆ ಕಾರಣ ಅಜ್ಞಾನ ಅಥವಾ ಸ್ವಾರ್ಥ. ಆದರೆ, ಪರಿಸರ ಮತ್ತು ಸಮಾಜ ಎಂಬ ಶಕ್ತಿಗಳನ್ನು ಎಚ್ಚರಿಕೆಯಿಂದ ಹೊಲಿದು ಉತ್ತಮ ವಿನ್ಯಾಸ ನೀಡುವುದರಲ್ಲಿ ನಿಸ್ಸಂದಿಗ್ಧವಾಗಿಯೂ ಸಾಮಾಜಿಕ ಪ್ರಗತಿಯಿದೆ. ಜೀವ ಜಾಲದ ಸಂಕೀರ್ಣತೆಗಳ ಬಗ್ಗೆ ಇರುವ ಜ್ಞಾನ ಮತ್ತು ಗೌರವವೇ ಮಾನವ ಕುಲವನ್ನು ಅದರ ಅತ್ಯುನ್ನತ ಭವಿಷ್ಯದತ್ತ ಒಯ್ಯುತ್ತದೆ’’ ಎಂದು ಅವರು ಬರೆಯುತ್ತಾರೆ.

‘‘ಮಾನವ ಮತ್ತು ಪರಿಸರದ ನಡುವಿನ ಸಂಬಂಧವನ್ನು ಗಣನೆಗೆ ತೆಗೆದುಕೊಳ್ಳುವ ಪರಿಸರ ನೀತಿ (ಅಪ್ಲೈಡ್ ಹ್ಯೂಮನ್ ಎಕಾಲಜಿ) ಮಾತ್ರ ಮಾನವ ನಾಗರಿಕತೆಗಳು ನಿರಂತರವಾಗಿ ಸಾಗುವುದನ್ನು ಖಾತ್ರಿಪಡಿಸಬಲ್ಲವು’’ ಎಂಬುದಾಗಿ 1938ರಲ್ಲಿ ಬರೆದ ಪುಸ್ತಕವೊಂದರಲ್ಲಿ ಮುಖರ್ಜಿ ಬರೆಯುತ್ತಾರೆ. ಪರಿಸರದೊಂದಿಗಿನ ಹೊಂದಾಣಿಕೆಯನ್ನು ವ್ಯಕ್ತಿಗಳ ಭಾವನೆಗಳಿಗೆ ಬಿಡದೆ, ಈ ವಿಷಯದಲ್ಲಿ ಸರ್ವರೂ ಸಹಜವಾಗಿ ಅನುಸರಿಸುವ ನೈತಿಕ ಚೌಕಟ್ಟೊಂದು ರೂಪುಗೊಳ್ಳುವ ದಿನಗಳಿಗಾಗಿ ಅವರು ಎದುರು ನೋಡುತ್ತಾರೆ.

‘‘ಕ್ಷಿಪ್ರ ಹಾಗೂ ದೂರಗಾಮಿ ಪರಿಣಾಮಗಳನ್ನು ಹೊಂದಿರುವ ತಮ್ಮ ದಮನಕಾರಿ ಚಟುವಟಿಕೆಗಳನ್ನು ಮಾನವರು ಕೈಬಿಟ್ಟು, ಸಮಗ್ರ ಪರಿಸರ ‘ಶಕ್ತಿ’ಗಳೊಂದಿಗೆ ಮೈತ್ರಿಯೊಂದನ್ನು ಏರ್ಪಡಿಸಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಇದಕ್ಕಾಗಿ, ‘ನಾಳೆಗಾಗಿ ಯೋಚಿಸುವುದು’, ‘ಈ ವಲಯದ ಇನ್ನಷ್ಟೇ ಹುಟ್ಟಬೇಕಾಗಿರುವ ನಿವಾಸಿಗಳಿಗಾಗಿ ತ್ಯಾಗ ಮಾಡುವುದು’- ಮುಂತಾದ ಹೊಸ ವೌಲ್ಯಗಳನ್ನು ಹೊಸದಾಗಿ ಬೆಳೆಸಿಕೊಳ್ಳಬೇಕು’’ ಎಂದು ಅವರು ತನ್ನ ಸಹ ಮಾನವರಿಗೆ ಕರೆ ನೀಡಿದ್ದಾರೆ.

ಅವರು ಈ ಕರೆಯನ್ನು 80 ವರ್ಷಗಳಿಗಿಂತಲೂ ಹಿಂದೆ ನೀಡಿರು ವರಾದರೂ, ಇಂದಿನ ಸನ್ನಿವೇಶದಲ್ಲಿ ಅದು ಹಿಂದೆಂದಿಗಿಂತಲೂ ಹೆಚ್ಚು ಪಸಕ್ತವಾಗಿದೆ, ಅಗತ್ಯವಾಗಿದೆ ಮತ್ತು ವೌಲಿಕವಾಗಿದೆ.

Writer - ರಾಮಚಂದ್ರ ಗುಹಾ

contributor

Editor - ರಾಮಚಂದ್ರ ಗುಹಾ

contributor

Similar News

ಸಂವಿಧಾನ -75