ಮೂಡಿಗೆರೆ: ಕಾಂಗ್ರೆಸ್ ಟಿಕೆಟ್‍ಗಾಗಿ ಮೋಟಮ್ಮ ಪುತ್ರಿ, ಚಿತ್ರದುರ್ಗದ ಮಾಜಿ ಸಂಸದರ ನಡುವೆ ಪೈಪೋಟಿ

Update: 2022-10-23 18:25 GMT
ನಯನಾ ಮೋಟಮ್ಮ / ಚಂದ್ರಪ್ಪ

ಚಿಕ್ಕಮಗಳೂರು: ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಇರುವ ಹಿನ್ನೆಲೆಯಲ್ಲಿ ಕಾಫಿನಾಡಿನಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ತೆರೆಮರೆಯಲ್ಲಿ ರಾಜಕೀಯ ಚಟುವಟಿಕೆಗಳನ್ನು ಬಿರುಸುಗೊಳಿಸುತ್ತಿವೆ. ಆಡಳಿತ ಪಕ್ಷದ ಅಭ್ಯರ್ಥಿಗಳ ಎದುರು ಉತ್ತಮ ಪ್ರತಿಸ್ಪರ್ಧಿಗಳನ್ನು ಕಣಕ್ಕಿಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಮುಖಂಡರು ಭಾರೀ ಕಸರತ್ತು ನಡೆಸುತ್ತಿದ್ದಾರೆ. ವಿಶೇಷವಾಗಿ ಮೂಡಿಗೆರೆ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿಯ ಎಂ.ಪಿ.ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಯಾರೆಂಬ ಕುತೂಹಲ ಗರಿಗೆದರಿದ್ದು, ಮಾಜಿ ಸಚಿವೆ, ಕಾಂಗ್ರೆಸ್ ಹಿರಿಯ ನಾಯಕಿ ಮೋಟಮ್ಮ ಅವರ ಮಗಳಿಗೆ ಟಿಕೆಟ್ ನೀಡಬೇಕೆಂಬ ಕೂಗು ಎದ್ದಿರುವ ಮಧ್ಯೆಯೇ ಕಾಂಗ್ರೆಸ್ ಪಕ್ಷದಿಂದಲೇ ಅವರಿಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.

ಮೂಡಿಗೆರೆ ವಿಧಾನಸಭೆ ಕ್ಷೇತ್ರ ಮೀಸಲು ಕ್ಷೇತ್ರವಾಗಿದೆ. ಈ ಹಿಂದೆ ಮೂಡಿಗೆರೆ ಕ್ಷೇತ್ರ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿತ್ತು. ಪರಿಶಿಷ್ಟ ಜಾತಿ, ಪಂಗಡದ ಮತದಾರರು ಅತೀ ಹೆಚ್ಚಿರುವ ಕ್ಷೇತ್ರ ಇದಾಗಿದ್ದು, ಹಿಂದೆ ಮಾಜಿ ಸಚಿವೆ ಮೋಟಮ್ಮ ಸತತ ಗೆಲುವು ಸಾಧಿಸುವ ಮೂಲಕ ಕ್ಷೇತ್ರ ಕಾಂಗ್ರೆಸ್‍ನ ಭದ್ರಕೋಟೆಯಾಗಿ ಹೊರಹೊಮ್ಮಿತ್ತು. ಆದರೆ ಸದ್ಯ ಕ್ಷೇತ್ರದಲ್ಲಿ ಬಿಜೆಪಿ ಪ್ರಾಬಲ್ಯ ಹೊಂದಿದ್ದು, ಹಾಲಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕ್ಷೇತ್ರದಲ್ಲಿ ಜೆಡಿಎಸ್ ಪ್ರಾಬಲ್ಯವೂ ಇದ್ದು, ಎರಡು ಬಾರಿ ಜೆಡಿಎಸ್ ಪಕ್ಷದಿಂದ ಮಾಜಿ ಸಚಿವ ಬಿ.ಬಿ.ನಿಂಗಯ್ಯ ಶಾಸಕರಾಗಿ ಆಯ್ಕೆಯಾಗಿದ್ದರು. 

ಸದ್ಯ ಮೂಡಿಗೆರೆ ಕ್ಷೇತ್ರದಿಂದ ಬಿಜೆಪಿ ಪಕ್ಷದಿಂದ ಹಾಲಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರಿಗೆ ಬಿಜೆಪಿ ಮುಖಂಡರೇ ಆದ ದೀಪಕ್ ದೊಡ್ಡಯ್ಯ ಪ್ರತಿಸ್ಪರ್ಧಿಯಾಗಿದ್ದು, ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆದರೆ ಎಂ.ಪಿ.ಕುಮಾರಸ್ವಾಮಿ ಅವರೇ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಇನ್ನು ಜೆಡಿಎಸ್ ಪಕ್ಷದಿಂದ ಮಾಜಿ ಸಚಿವ, ಎಚ್ಡಿಕೆ ಆಪ್ತರಾಗಿರುವ ಬಿ.ಬಿ.ನಿಂಗಯ್ಯ ಅವರಿಗೆ ಟಿಕೆಟ್ ಖಚಿತ ಎನ್ನಲಾಗುತ್ತಿದೆ.

ಆದರೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಗ್ಗೆ ಇನ್ನೂ ಅನಿಶ್ಚಿತತೆ ಇದ್ದು, ಮಾಜಿ ಸಚಿವೆ ಮೋಟಮ್ಮ ಅವರ ಮಗಳು ನಯನಾ ಮೋಟಮ್ಮ ಅವರು ಟಿಕೆಟ್‍ಗಾಗಿ ಭಾರೀ ಕಸರತ್ತು ಮಾಡುತ್ತಿದ್ದಾರೆ. ಮಾಜಿ ಸಚಿವೆ ಮೋಟಮ್ಮ ಕೂಟ ತಮ್ಮ ಮಗಳಿಗೆ ಟಿಕೆಟ್ ಕೊಡಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ವರಿಷ್ಠರ ಬೆನ್ನು ಬಿದ್ದಿದ್ದಾರೆ. ಆದರೆ ನಯನಾ ಮೋಟಮ್ಮ ಅವರಿಗೆ ಕಾಂಗ್ರೆಸ್ ಪಕ್ಷದ ಸ್ಥಳೀಯ, ಜಿಲ್ಲಾ ಮುಖಂಡರಿಂದಲೇ ವಿರೋಧ ವ್ಯಕ್ತವಾಗಿದ್ದು ನುಂಗಲಾರದ ತುತ್ತಾಗಿ ಪರಿಣಮಿಸಿದ್ದು, ಮೂಡಿಗೆರೆ ಕ್ಷೇತ್ರ ಕಾಂಗ್ರೆಸ್ ಮುಖಂಡರು ಬಹಿರಂಗವಾಗಿಯೇ ಮೋಟಮ್ಮ ಪುತ್ರಿ ನಯನಾ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ.

ನಯನಾ ಮೋಟಮ್ಮ ಅವರ ವಿರುದ್ಧ ಸ್ಥಳೀಯ ಮುಖಂಡರ ಸಭೆಯಲ್ಲಿ ಭಾರೀ ವಿರೋಧ ವ್ಯಕ್ತವಾಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದು ನಯನಾ ಮೋಟಮ್ಮ ಅವರ ಬಗ್ಗೆ ಕ್ಷೇತ್ರದ ಕಾಂಗ್ರೆಸ್ ಮುಖಂಡರಲ್ಲಿರುವ ವಿರೋಧಕ್ಕೆ ಸಾಕ್ಷಿಯಾಗಿದೆ.

ಸದ್ಯ ಮೂಡಿಗೆರೆ ವಿಧಾನಸಭೆ ಕ್ಷೇತ್ರದಲ್ಲಿ ಹಾಲಿ ಶಾಸಕ ಎಂ.ಪಿ.ಕುಮಾರಸ್ವಾಮಿ ವಿರುದ್ಧ ಜನಾಭಿಪ್ರಾಯ ಇದೆ ಎಂಬ ಮಾತು ಬಿಜೆಪಿ ಪಕ್ಷದ ಮುಖಂಡರಿಂದಲೇ ಕೇಳಿ ಬಂದಿದೆ. ಮೂರು ಬಾರಿ ಶಾಸಕರಾಗಿರುವ ಅವರು ಕ್ಷೇತ್ರದ ಅಭಿವೃದ್ಧಿಯನ್ನು ನಿರ್ಲಕ್ಷ್ಯಿಸಿದ್ದಾರೆಂಬ ಕಾರಣಕ್ಕೆ ಈ ಬಾರಿ ಬಿಜೆಪಿಯಿಂದ ಅಭ್ಯರ್ಥಿಯನ್ನು ಬದಲಿಸುವ ಮಾತುಗಳೂ ಕೇಳಿ ಬಂದಿವೆ. ಅಲ್ಲದೇ ಶಾಸಕ ಕುಮಾರಸ್ವಾಮಿ ಬಗ್ಗೆ ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ವಿರೋಧ ಕಟ್ಟಿಕೊಂಡಿದ್ದು, ಸಿ.ಟಿ.ರವಿ ಅವರು ಕುಮಾರಸ್ವಾಮಿ ಅವರಿಗೆ ಟಿಕೆಟ್ ಸಿಗದಂತೆ ಮಾಡಲಿದ್ದಾರೆಂಬ ಮಾತೂ ಕೇಳಿ ಬಂದಿದ್ದು, ಸಿ.ಟಿ.ರವಿ ಆಪ್ತ ದೀಪಕ್ ದೊಡ್ಡಯ್ಯ ಅವರಿಗೆ ಟಿಕೆಟ್ ಸಿಗಲಿದೆ ಎನ್ನಲಾಗುತ್ತಿದೆಯಾದರೂ ಮಾಜಿ ಸಿಎಂ ಯಡಿಯೂರಪ್ಪ ಅವರ ಕೃಪಾಕಟಾಕ್ಷ ಕುಮಾರಸ್ವಾಮಿ ಮೇಲಿರುವುದರಿಂದ ಈ ಬಾರಿಯೂ ಕುಮಾರಸ್ವಾಮಿಯೇ ಅಭ್ಯರ್ಥಿ ಎನ್ನಲಾಗುತ್ತಿದೆ.

ಆದರೆ ಹಾಲಿ ಶಾಸಕ ಕುಮಾರಸ್ವಾಮಿಗೆ ಕ್ಷೇತ್ರದಾದ್ಯಂತ ಜನವಿರೋಧಿ ಅಲೆ ಇದೆ, ಇಂತಹ ಸಂದರ್ಭದಲ್ಲಿ ಕ್ಷೇತ್ರದಾದ್ಯಂತ ಪರಿಚಯಸ್ಥರಾಗಿರುವ ಹಾಗೂ ಪುರುಷ ಅಭ್ಯರ್ಥಿಯನ್ನೇ ಕಣಕ್ಕಿಳಿಸಿದಲ್ಲಿ ಗೆಲುವು ನಿಶ್ಚಿತ ಎಂಬ ಅಭಿಪ್ರಾಯ ಜಿಲ್ಲಾ ಹಾಗೂ ಸ್ಥಳೀಯ ಮುಖಂಡರ ಅಭಿಪ್ರಾಯವಾಗಿದ್ದು, ಈ ನಿಟ್ಟಿನಲ್ಲಿ ಪಕ್ಷದ ಮುಖಂಡರು ಕ್ಷೇತ್ರದಾದ್ಯಂತ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದಾರೆ. ಅಲ್ಲದೇ ಚಿತ್ರದುರ್ಗದ ಮಾಜಿ ಸಂಸದ ಚಂದ್ರಪ್ಪ ಅವರನ್ನು ಮೂಡಿಗೆರೆ ಕ್ಷೇತ್ರದಿಂದ ಕಣಕ್ಕಿಳಿಸುವುದು ಸೂಕ್ತ ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ. 

ಈ ನಡುವೆ ಮೂಡಿಗೆರೆ ಕ್ಷೇತ್ರದಿಂದ ಚಿಕ್ಕಮಗಳೂರು ಜಿಲ್ಲೆಯ ನಿವೃತ್ತ ಜಿಲ್ಲಾಧಿಕಾರಿ ಶ್ರೀರಂಗಯ್ಯ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆಂಬ ಮಾತು ಆರಂಭದಲ್ಲಿ ಕೇಳಿ ಬಂದಿತ್ತು. ಆದರೆ ಶ್ರೀರಂಗಯ್ಯ ಇದುವರೆಗೂ ಕ್ಷೇತ್ರಕ್ಕೆ ಕಾಲಿಡದಿರುವುದರಿಂದ ಅವರ ಸ್ಪರ್ಧೆ ಹುಸಿಯಾದಂತಾಗಿದ್ದು, ನಯನಾ ಮೋಟಮ್ಮ ಹಾಗೂ ಚಿತ್ರದುರ್ಗದ ಮಾಜಿ ಸಂಸದ ಚಂದ್ರಪ್ಪ ನಡುವೆ ಟಿಕೆಟ್‍ಗೆ ಪೈಪೋಟಿ ಏರ್ಪಟ್ಟಿದ್ದು, ಅಂತಿಮವಾಗಿ ಯಾರಿಗೆ ಟಿಕೆಟ್ ಸಿಗಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

Writer - ಕೆ.ಎಲ್. ಶಿವು

contributor

Editor - ಕೆ.ಎಲ್. ಶಿವು

contributor

Similar News