ಬೆಳಗಾವಿ | ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ಬಾಲಕ ಮೃತ್ಯು

Update: 2022-10-24 10:54 IST
ಬೆಳಗಾವಿ | ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ಬಾಲಕ ಮೃತ್ಯು
  • whatsapp icon

ಬೆಳಗಾವಿ, ಅ.24: ಬೈಕಿನಲ್ಲಿ ತಂದೆ ಜೊತೆ ಸಂಚರಿಸುತ್ತಿದ್ದ ಬಾಲಕನೋರ್ವ ಕುತ್ತಿಗೆಗೆ ಗಾಳಿಪಟದ ಮಾಂಜಾ ದಾರ ಸಿಲುಕಿ ಮೃತಪಟ್ಟ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿ ಹತ್ತರಗಿ ಗ್ರಾಮದ ಹಳೇ ಗಾಂಧಿನಗರದಲ್ಲಿ ರವಿವಾರ ಮಧ್ಯಾಹ್ನ ನಡೆದಿದೆ.

ಹತ್ತರಗಿ ಗ್ರಾಮದ ಈರಣ್ಣ ಎಂಬವರ ಪುತ್ರ ವರ್ಧನ್​ ಈರಣ್ಣ ಬ್ಯಾಳಿ(6) ಮೃತ ಬಾಲಕ. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ತಂದೆ ಜೊತೆ ಪೇಟೆಗೆ ತೆರಳಿ ಹೊಸ ಬಟ್ಟೆ ಖರೀದಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.

ದೀಪಾವಳಿ ಪ್ರಯುಕ್ತ ಈರಣ್ಣ ಹೊಸ ಬಟ್ಟೆ ಖರೀದಿಸಲೆಂದು ಮಗ ವರ್ಧನ್​ ಜೊತೆ ಹತ್ತರಗಿ ಗ್ರಾಮದ ಹಳೇ ಗಾಂಧಿನಗರಕ್ಕೆ ತೆರಳಿದ್ದರು. ಬಟ್ಟೆಗಳನ್ನು ಖರೀದಿಸಿ ಬೈಕಿನಲ್ಲಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ವರ್ಧನ್ ಬೈಕಿನ ಮುಂಭಾಗದಲ್ಲಿ ಕುಳಿತಿದ್ದ. ಇವರು ಸಂಚರಿಸುತ್ತಿದ್ದ ಬೈಕ್ ರಾಷ್ಟ್ರೀಯ ಹೆದ್ದಾರಿ 4ರ ಹಳೆ ಗಾಂಧಿ ನಗರದ ಸೇತುವೆ ಮೇಲೆ ತಲುಪಿದಾಗ ಮಾಂಜಾ ದಾರ ವರ್ಧನ್ ಕುತ್ತಿಗೆಗೆ ಸಿಲುಕಿ ಗಂಭೀರ ಗಾಯಗಳಾಗಿವೆ. ತಕ್ಷಣ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಜಿಲ್ಲಾಸ್ಪತ್ರೆಯಲ್ಲಿ ವರ್ಧನ್ ಕೊನೆಯುಸಿರೆಳೆದಿರುವುದಾಗಿ ತಿಳಿದುಬಂದಿದೆ.

ಈ ಬಗ್ಗೆ ಮಾಳ ಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾಂಜಾ ದಾರ ಬಳಕೆಗೆ ನಿಷೇಧವಿದ್ದರೂ, ಇದು ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಅದೀಗ ಬಾಲಕನೋರ್ವನನ್ನು ಬಲಿ ಪಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News