ಅ.28ರಿಂದ ಸುರತ್ಕಲ್ ಅಕ್ರಮ ಟೋಲ್‌ಗೇಟ್ ತೆರವಿಗೆ ಆಗ್ರಹಿಸಿ ಅನಿರ್ದಿಷ್ಠಾವಧಿ ಧರಣಿ ಆರಂಭ: ಮುನೀರ್ ಕಾಟಿಪಳ್ಳ

Update: 2022-10-24 12:10 GMT

ಮಂಗಳೂರು, ಅ. 24: ಸುರತ್ಕಲ್ ಟೋಲ್ ಗೇಟ್ ತೆರವಿಗೆ ಆಗ್ರಹಿಸಿ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಮತ್ತೊಂದು ಹೋರಾಟಕ್ಕೆ ತೀರ್ಮಾನಿಸಲಾಗಿದ್ದು, ಇದರಂತೆ ಅ.28ರಿಂದ ಟೋಲ್‌ಗೇಟ್ ಸಮೀಪ ಅನಿರ್ಧಿಷ್ಟಾವಧಿ ಹಗಲು-ರಾತ್ರಿ ಧರಣಿ ನಡೆಸಲು ನಿರ್ಧರಿಸಲಾಗಿದೆ ಎಂದು ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.

ಸೋಮವಾರ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.18ರಂದು ಟೋಲ್‌ಗೇಟ್ ಮುತ್ತಿಗೆ ಸಂದರ್ಭ ಜನಾಕ್ರೋಶ ಮುಗಿಲು ಮುಟ್ಟಿದಾಗ ಟೋಲ್ ತೆರವಿಗೆ ಸ್ವತಃ ಸಂಸದರಾದ ನಳಿನ್ ಕುಮಾರ್ ಕಟೀಲು ಅವರು 20 ದಿನಗಳ ಕಾಲಾವಧಿ ನೀಡುವಂತೆ ಕೋರಿದ್ದಾರೆ. ಆ ಅವಧಿ ನ.7ಕ್ಕೆ ಕೊನೆಗೊಳ್ಳುತ್ತದೆ. ಆದರೆ, ಟೋಲ್ ತೆರವಿಗೆ ಸಂಬಂಧಿಸಿ ವಾರ, ತಿಂಗಳು ಎಂದು ವರ್ಷದಿಂದಲೇ ಕಾಲಹರಣ ಮಾಡಲಾಗುತ್ತಿದೆ. ಇನ್ನೂ ಟೋಲ್ ತೆರವು ಆಗದಿರುವ ಕಾರಣದಿಂದ ಶಾಂತಿಯುತವಾಗಿ ಹಗಲು ರಾತ್ರಿ ಧರಣಿ ನಡೆಸಲು ತೀರ್ಮಾನಿಸಲಾಗಿದೆ ಎಂದರು.

ಜಿಲ್ಲೆಯ ಸಂಸದರು, ಶಾಸಕರು ಮನಸ್ಸು ಮಾಡಿದರೆ ಸುರತ್ಕಲ್ ಟೋಲ್ ಗೇಟ್ 24 ಗಂಟೆಯ ಅವಧಿಯಲ್ಲಿ ನಿಯಮಬದ್ಧವಾಗಿ ತೆರವು ಆಗಲಿದೆ. ಆದರೆ, ವ್ಯಾಪಾರಿ ಹಿತಾಸಕ್ತಿಗಳ ಪರವಹಿಸಿ ಜನವಿರೋಧಿ ನಿಲುವುಗಳಿಗೆ ಅಂಟಿಕೊಂಡಿರುವ ಜನಪ್ರತಿನಿಧಿಗಳು ಜನಾಭಿಪ್ರಾಯ ತಿರಸ್ಕರಿಸುತ್ತಿದ್ದಾರೆ. ಟೋಲ್‌ಗೇಟ್ ವಿರೋಧಿ ಹೋರಾಟ ಪಕ್ಷಾತೀತವಾಗಿ ನಡೆಯುತ್ತಿದೆ. ದ.ಕ. ಉಡುಪಿ ಜಿಲ್ಲೆಗಳ ಒಕ್ಕೊರಲ ಜನಾಭಿಪ್ರಾಯವನ್ನು ಈ ಹೋರಾಟದಲ್ಲಿ ಕ್ರೋಢೀಕರಿಸುವ ಯತ್ನವನ್ನು ಪ್ರಾಮಾಣಿಕವಾಗಿ ನಡೆಸಲಾಗುತ್ತಿದೆ. ಟೋಲ್‌ಗೇಟ್ ತೆರವುಗೊಳ್ಳದೆ ನಮ್ಮ ಹೋರಾಟ ನಿಲ್ಲಿಸುವುದಿಲ್ಲ. ಜನತೆ ಇಟ್ಟಿರುವ ನಂಬಿಕೆಯನ್ನು ಹುಸಿ ಮಾಡುವುದಿಲ್ಲ. ಹೀಗಾಗಿ ಹಗಲು-ರಾತ್ರಿ ಹೋರಾಟ ನಡೆಯಲಿದೆ ಎಂದವರು ಹೇಳಿದರು.

ಹೋರಾಟಗಾರರಾದ ಪ್ರತಿಭಾ ಕುಳಾಯಿ ಮಾತನಾಡಿ, ಸಾಮಾಜಿಕ ಜಾಲತಾಣದಲ್ಲಿ ತನ್ನ ವಿರುದ್ಧ ಅವಹೇಳನಕಾರಿಯಾಗಿ ಬರೆದವರ ವಿರುದ್ಧ ಕಾನೂನು ಹೋರಾಟ ಆರಂಭಿಸಲಾಗಿದೆ. ಪೊಲೀಸರು ಈ ಕುರಿತಂತೆ ತನಿಖೆ ನಡೆಸುತ್ತಿದ್ದಾರೆ. ನ್ಯಾಯ ಸಿಗುವವರೆಗೆ ಈ ಹೋರಾಟವನ್ನೂ ಮುಂದುವರಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ದಿನೇಶ್ ಹೆಗ್ಡೆ ಉಳೇಪಾಡಿ, ಬಿ.ಕೆ.ಇಮ್ತಿಯಾಝ್, ದಿನೇಶ್ ಕುಂಪಲ, ಪುರುಷೋತ್ತಮ ಚಿತ್ರಾಪುರ, ಶೇಖರ ಹೆಜಮಾಡಿ, ಕಿಶನ್ ಹೆಗ್ಡೆ, ರಘು ಎಕ್ಕಾರು, ಮುಹಮ್ಮದ್ ಕುಂಜತ್ತಬೈಲ್, ರಮೇಶ್, ಶ್ರೀನಾಥ್, ರಾಜೇಶ್ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News