ಸೂರ್ಯಘರ್ ಯೋಜನೆಯಲ್ಲಿ 30 ಗಿ.ವ್ಯಾ ವಿದ್ಯುತ್ ಗುರಿ:‌ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

Update: 2025-01-02 12:51 GMT

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಯೋಜನೆ ಸೂರ್ಯಘರ್‌ನಲ್ಲಿ ಸಾಕಷ್ಟು ಸಬ್ಸಿಡಿ ಒದಗಿಸಲಾಗುತ್ತಿದೆ. ಈ ಯೋಜನೆಯೊಂದರಿಂದಲೇ ದೇಶದಲ್ಲಿ 30 ಗಿ.ವ್ಯಾ. ವಿದ್ಯುತ್ ಉತ್ಪಾದನೆಯ ಗುರಿ ಹಾಕಿಕೊಳ್ಳಲಾಗಿದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಮತ್ತು ಗ್ರಾಹಕ ವ್ಯವಹಾರಗಳು ಹಾಗೂ ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ವಿ. ಜೋಶಿ ಹೇಳಿದ್ದಾರೆ.

ಕಾವೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಗುರುವಾರ ದ.ಕ. ಜಿಲ್ಲಾಡಳಿತ, ಜಿ.ಪಂ., ಮೆಸ್ಕಾಂ, ಮಂಗಳೂರು ಮಹಾನಗರ ಪಾಲಿಕೆ ಸಹಯೋಗದಲ್ಲಿ ಪ್ರಧಾನಮಂತ್ರಿ ಸೂರ್ಯಘರ್- ಮುಫ್ತಿ ಬಿಜ್ಲಿ ಯೋಜನೆಯ ಮಾಹಿತಿ ಕಾರ್ಯಾಗಾರ ಮತ್ತು ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತವು ಜಗತ್ತಿನಲ್ಲಿ 3ನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿದ್ದು,ಮುಂದೆ ಚೀನಾವನ್ನು ಹಿಂದಕ್ಕೆ ತಳ್ಳಿ ‘ವರ್ಲ್ಡ್ ಫ್ಯಾಕ್ಟರಿ’ ಹೆಸರನ್ನು ತನ್ನದಾಗಿಸಿಕೊಳ್ಳಲಿದೆ

ಭಾರತ ಸೋಲಾರ್ ಶಕ್ತಿಯಲ್ಲಿ ಸ್ವಾವಲಂಬನೆ ಸಾಧಿಸುವ ಕಡೆಗೆ ಹೆಜ್ಜೆ ಇರಿಸಿದ್ದು, ಈ ತನಕ ಚೀನಾದಲ್ಲಿ ಬ್ಯಾಟರಿಗಳು ಉತ್ಪಾದನೆಯಾಗುತ್ತಿತ್ತು. ಭಾರತಕ್ಕೆ ಸೋಲಾರ್‌ನಲ್ಲಿ ಸ್ವಾವಲಂಭನೆ ಸಾಧ್ಯವಾದರೆ ಇಂಧನ ಕ್ಷೇತ್ರದಲ್ಲಿ ಬಹುದೊಡ್ಡ ಕ್ರಾಂತಿಯಾಗಲಿದೆ ಎಂದು ಹೇಳಿದರು.

*5ನೇ ಆರ್ಥಿಕ ದೊಡ್ಡ ಶಕ್ತಿ: ಇದೀಗ ಭಾರತವು ಜಗತ್ತಿನ ೫ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಸೂರ್ಯ ಘರ್‌ನಿಂದ 30 ಗಿ.ವ್ಯಾ. ಶಕ್ತಿ ಗುರಿ ಇರಿಸಿಕೊಳ್ಳಲಾಗಿದೆ. ಪ್ರಸ್ತುತ ದೇಶದಲ್ಲಿ ೯೩.೫ ಗಿಗಾ ವ್ಯಾಟ್ ಶಕ್ತಿಯ ಉತ್ಪಾದನೆಯಾಗುತ್ತಿದ್ದು, ಈ ಪೈಕಿ 2.3 ಗಿ.ವ್ಯಾ. ಸೌರಶಕ್ತಿ, ೪೫ ಗಿ.ವ್ಯಾ. ಗಾಳಿಯಿಂದ ಶಕ್ತಿ ಉತ್ಪಾದನೆಯಾಗುತ್ತಿದ್ದರೆ, ಉಳಿದದ್ದು ನ್ಯೂಕ್ಲಿಯರ್, ಹೈಡ್ರೋ ಸ್ಥಾವರ ಇತ್ಯಾದಿಗಳಿಂದ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ ಎಂದು ನುಡಿದರು.

70 ಗಿ.ವ್ಯಾ. ಶಕ್ತಿಯನ್ನು ನವೀಕರಿಸಬಹುದಾದ ಇಂಧನದಿಂದ ಉತ್ಪಾದನೆ ಮಾಡುವ ಉದ್ದೇಶ ಇದೆ ಎಂದು ಪ್ರಹ್ಲಾದ್ ಜೋಶಿ ತಿಳಿಸಿದರು.

2024 ಭಾರತವೂ ಸೇರಿದಂತೆ ಜಗತ್ತಿನಲ್ಲೇ ಅತಿ ಹೆಚ್ಚು ಉಷ್ಣಾಂಶ ದಾಖಲಾಗಿದೆ. 2050ರವರೆಗೆ ಇನ್ನೂ ದೊಡ್ಡ ಪ್ರಮಾಣದಲ್ಲಿ ಭೂಮಿ ಬಿಸಿಯಾಗಲಿದೆ. ಪ್ರಸ್ತುತ ಸ್ಥಿತಿಯನ್ನು ಇದೇ ರೀತಿ ಬಿಟ್ಟರೆ ದೇಶದ ಶೇ.19ರಷ್ಟು ಒಟ್ಟು ಆದಾಯ ಮತ್ತು ಜಿಡಿಪಿ ದರ ಕುಸಿಯಲಿದೆ. ಈಗಾಗಲೇ ಜಾಗತಿಕ ತಾಪಮಾನದ ಪರಿಣಾಮಗಳ ಕುರಿತು ಚರ್ಚೆ ಶುರುವಾಗಿದೆ. ಇದಕ್ಕೆ ಪರಿಹಾರವೆಂದರೆ ಕಲ್ಲಿದ್ದಲಿನಂತಹ ಇಂಧನಗಳಿಂದ ವಿದ್ಯುತ್ ಉತ್ಪಾದನೆಯನ್ನು ಗಣನೀಯವಾಗಿ ಇಳಿಸಿ ನವೀಕ ರಿಸಬಹುದಾದ ಇಂಧನ ಉತ್ಪಾದನೆಯತ್ತ ಗಮನ ಹರಿಸಬೇಕಾಗಿದೆ ಎಂದು ಹೇಳಿದರು.

ಸೋಲಾರ್‌ಗೆ ಒಂದು ಸಲ ಹೂಡಿಕೆ ಮಾಡಿದರೆ ಪರಿಸರದ ಉಳಿವಿನ ಜತೆಗೆ ಬೇಕಾದಷ್ಟು ವಿದ್ಯುತ್, ಶಕ್ತಿಯ ಉತ್ಪಾದ ನೆಯೂ ಆಗಲಿದೆ ಎಂದು ಜೋಶಿ ಹೇಳಿದರು.

‘ಸ್ಬಾಭಿಮಾನದಿಂದ ವಿದ್ಯುತ್ ಉತ್ಪಾದಿಸಿ’

ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿಯನ್ನು ಉಲ್ಲೇಖಿಸಿ ಮಾತನಾಡಿದ ಸಚಿವ ಜೋಶಿ ಕೈಚಾಚೋದು ಬಿಟ್ಟು ಸ್ವಾಭಿಮಾನದಿಂದ ವಿದ್ಯುತ್ ಉತ್ಪಾದಿಸಿ ಸಚಿವ ಜೋಶಿ, ಯಾವುದಾದರೂ ಸರಕಾರಕ್ಕೆ ಕೈಚಾಚಿ ತೆಗೆದುಕೊಳ್ಳುವುದಕ್ಕಿಂತ ಸೂರ್ಯಘರ್ ಮೂಲಕ ಸ್ವಾಭಿಮಾನದಿಂದ ವಿದ್ಯುತ್ ಉತ್ಪಾದನೆ ಮಾಡಿ, ಇದು ಕೂಡ ಉಚಿತವೇ ಆಗಲಿದೆ ಎಂದು ಹೇಳಿದರು.

ಸಂಸದ ಬ್ರಿಜೇಶ್ ಚೌಟ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ಪ್ರಧಾನಮಂತ್ರಿ ಸೂರ್ಯಘರ್ ಯೋಜನೆಯ ಫಲಾನು ಭವಿಗಳಿಗೆ ಸಬ್ಸಿಡಿ ಮಂಜೂರಾತಿ ಪತ್ರ, ಸಾಲ ಮಂಜೂರಾತಿ ಪತ್ರವನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿತರಿಸಿದರು.

ಶಾಸಕರಾದ ವೈ ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ವೇದವ್ಯಾಸ ಕಾಮತ್, ಹರೀಶ್ ಪೂಂಜ, ಭಾಗೀರಥಿ ಮುರುಳ್ಯ, ಮಂಗಳೂರು ಮಹಾನಗರ ಪಾಲಿಕೆ ಉಪಮೇಯರ್ ಭಾನುಮತಿ, ಮೆಸ್ಕಾಂ ಎಂಡಿ ಜಯಪ್ರಕಾಶ್ ಆರ್, ಲೀಡ್ ಬ್ಯಾಂಕ್ ಮ್ಯಾನೇಜರ್ ಕವಿತಾ ಶೆಟ್ಟಿ, ಮೆಸ್ಕಾಂನ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News