ಗುರುಪುರ ಪೇಟೆಯಲ್ಲಿ ಸರಣಿ ಕಳವು
ಬಜ್ಪೆ: ಗುರುಪುರ ಪೇಟೆಯಲ್ಲಿ ಶುಕ್ರವಾರ ರಾತ್ರಿ ಮೂರು ಮತ್ತು ಹತ್ತಿರದ ಬಂಡಸಾಲೆಯಲ್ಲಿ ಒಂದು ಅಂಗಡಿಗಳಿಗೆ ನುಗ್ಗಿದ ಕಳ್ಳರು ಲಕ್ಷಕ್ಕೂ ಅಧಿಕ ಮೊತ್ತದ ಸೊತ್ತು, ನಗದು, ಚಿನ್ನದ ಆಭರಣ ಕದ್ದು ಪರಾರಿಯಾಗಿದ್ದಾರೆ.
ಗುರುಪುರ ಪೇಟೆಯಲ್ಲಿ ಉಮೇಶ್ ಭಟ್‌ರ ಅಂಗಡಿಗೆ ನುಗ್ಗಿದ ಕಳ್ಳರು 12 ಮೊಬೈಲ್, 20 ಸಾವಿರ ಮೊತ್ತದ ಇಲೆಕ್ಟ್ರಾನಿಕ್ಸ್ ಸೊತ್ತು, 60 ಸಾವಿರ ರೂ. ಮೌಲ್ಯದ ಚಿನ್ನದ ಉಂಗುರ, ಸುಮಾರು 25 ಸಾವಿರ ರೂ.ನಗದು ಕಳವುಗೈದಿದ್ದಾರೆ. ಪಕ್ಕದಲ್ಲಿರುವ ಭಟ್ ಅವರ ಸಹೋದರನ ಬೇಕರಿ ಅಂಗಡಿಗೆ ನುಗ್ಗಿದ ಕಳ್ಳರು ಕ್ಯಾಶ್ ಕೌಂಟರ್ ತಡಕಾಡಿದ್ದಾರೆ.
ಸಂಶುದ್ದೀನ್ ಎಂಬವರ ಅಂಗಡಿಗೆ ನುಗ್ಗಿದ ಕಳ್ಳರು, 12 ಸಾವಿರ ರೂ. ನಗದು, ಸುಮಾರು 17 ಸಾವಿರ ಮೌಲ್ಯದ ಸಿಗರೇಟ್ ಸಹಿತ 25 ಸಾವಿರ ರೂ. ಮೌಲ್ಯದ ಸೊತ್ತು ಕಳವುಗೈದಿದ್ದಾರೆ.
ಗುರುಪುರ ಬಂಡಸಾಲೆಯಲ್ಲಿ ಧರ್ಮಣ ಪೂಜಾರಿ ಎಂಬವರ ಗೂಡಂಗಡಿಯ ಬೀಗ ಮುರಿದು ಸುಮಾರು 2 ಸಾವಿರ ರೂ. ಮೌಲ್ಯದ ಸೊತ್ತು ಕಳವು ಮಾಡಿದ್ದಾರೆ. ಬಜ್ಪೆ ಪೊಲೀಸರು ಸೀಸಿ ಟೀವಿ ಫೂಟೇಜ್ ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ.