ನಿವೇಶನ ರಹಿತರ ಹೋರಾಟ ಸಮಿತಿ ಕುಪ್ಪೆಪದವು ನೇತೃತ್ವದಲ್ಲಿ ಧರಣಿ

Update: 2025-01-06 17:58 GMT

ವಾಮಂಜೂರು: ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಂಜೂರುಗೊಂಡಿರುವ 98 ಕುಟುಂಬಗಳಿಗೆ ಇನ್ನೂ ನಿವೇಶನ ಮಂಜೂರು ಮಾಡದೇ ಹಕ್ಕು ಪತ್ರ ವಿತರಿಸದೇ ಗ್ರಾಮಸ್ಥರನ್ನು ಸತಾಯಿಸಲಾಗುತ್ತಿದೆ ಎಂದು ಆರೋಪಿಸಿ ನಿವೇಶನ ರಹಿತರು ಮನೆ ನಿವೇಶನ ರಹಿತರ ಹೋರಾಟ ಸಮಿತಿ ಕುಪ್ಪೆಪದವು ಇದರ ನೇತೃತ್ವದಲ್ಲಿ ಸೋಮವಾರ ಪಂಚಾಯತ್ ಎದುರು ಧರಣಿ ನಡೆಸಿದರು.

ಧರಣಿಯ ನೇತೃತ್ವ ವಹಿಸಿ ಮಾತನಾಡಿದ ಸಿಪಿಐಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ಕುಪ್ಪೆಪದವು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕೆಲಿಂಜಾರು ಪ್ರದೇಶದಲ್ಲಿ ಹಲವರು ಮನೆ ನಿವೇಶನ ರಹಿತರಿದ್ದಾರೆ. ಇದು ಗುರುಪುರ ಹೋಬಳಿಯಲ್ಲಿನ ಬಹುದೊಡ್ಡ ಗ್ರಾಮ. ಇಲ್ಲಿರುವವರು ಎಲ್ಲರೂ ಬಡವರು ಬೀಡಿ, ಕೂಲಿಕೆಲಸಗಾರರು. ಇವರು ಕಳೆದ 2ದಶಕಗಳಿಂದ ಮನೆ ನಿವೇಶನ ನೀಡಬೇಕೆಂದು ಆಗ್ರಹಿಸುತ್ತಿದ್ದಾರೆ. ಅವರ ದುಡಿಮೆಯ ದೊಡ್ಡಬಾಗ ಬಾಡಿಗೆಗೆ ಹೋಗು ತ್ತಿದೆ. ನಮ್ಮ ವ್ಯವಸಗ್ಥೆಗೆ ಬಡವರ ಬಗ್ಗೆ ಕಳಜಿಯೇ ಇಲ್ಲ. ಸಂತ್ರಸ್ತ 98 ಮಂದಿಗೆ ಜಮೀನು ಗುರುತಿಸಿ ಮಂಜೂರು ಮಾಡಿ 5ವರ್ಷದ ಹಿಂದೆಯೇ ಶಾಸಕ ಭರತ್‌ ಶೆಟ್ಟಿ ಅವರು ಕಾಟಾಚಾರಕ್ಕಷ್ಟೇ ಹಕ್ಕು ಪತ್ರ ನೀಡಿದ್ದಾರೆ. ಈ ವರೆಗೂ ಫಲಾನುಭವಿ ಗಳಿಗೆ ನಿವೇಶನ ನೀಡಲಾಗಿಲ್ಲ. ಕಾರಣ ಕೇಳಿದರೆ ಅಸಮಂಜಸ ಕಾರಣಗಳನ್ನು ನೀಡುತ್ತಿದ್ದಾರೆ. ನಿವೇಶನ ನೀಡಲಾಗ ದವರು, ಯಾಕೆ ಹಕ್ಕು ಪತ್ರ ನೀಡಿದ್ದಾರೆ. ಶಾಸಕರು, ಅಧಿಕಾರಿಗಳು ಕೊಟ್ಟ ಭರವಸೆಯಂತೆ 98 ಕುಟುಂಬಗಳಿಗೆ ನೀಡಿರುವ ಭರವಸೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು. ಶಾಸಕರ ಮನೆ, ಜಿಲ್ಲಾಧಿಕಾರಿ ಕಚೇರಿಗೆ ಪಾದಯಾತ್ರ ಮಾಡುತ್ತೇವೆ. ಅದಾಗಿಯೂ ನೀಡಿದ್ದರೆ ಜಮೀನು ಅತಿಕ್ರಮಣ ಮಾಡಬೇಕಾಗುತ್ತದೆ ಎಂದು ಮುನೀರ್‌ ಕಾಟಿಪಳ್ಳ ಎಚ್ಚರಿಕೆ ನೀಡಿದರು.

ಧರಣಿಯಲ್ಲಿ ಭಾಗವಹಿಸಿ ಮಾತನಾಡಿದ ಸಂತ್ರಸ್ತರು ಕುಪ್ಪೆಪದವು ಗ್ರಾಮ ಪಂಚಾಯತ್‌, ಜನಪ್ರತಿನಿಧಿಗಳು, ಶಾಸಕರು ಹಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಧರಣಿನಿರತ ಗ್ರಾಮಸ್ಥೆ ಉಮಾವತಿ ಅವರು, ನಮಗೆ ಹಕ್ಕುಪತ್ರ ನೀಡಿ 7 ವರ್ಷವಾಗಿದೆ. ಇದುವರೆಗೂ ಸರಕಾರ ನಮಗೆ ನಿವೇಶನ ಮಂಜೂರು ಮಾಡಿಲ್ಲ. ಗ್ರಾಮ ಸಭೆಯಲ್ಲಿ ಚರ್ಚಿಸಿದ್ದೇವೆ. ನಿವೇಶನ ನೀಡುವ ಭರವಸೆಯಷ್ಟೇ ಸಿಗುತ್ತಿದೆ. ಆದರೆ ಈ ವರೆಗೂ ನೀಡಿಲ್ಲ. ನಮ್ಮ ಕಷ್ಟ ಸುಖ ಶಾಸಕರು, ಅಧಿಕಾರಿಗಳಿಗೆ ಗೊತ್ತಾಗಿಲ್ಲ. ಇಂತಹಾ ಪ್ರತಿಭಟನೆಗಳನ್ನು ಮಾಡಿದರೆ ಮಾತ್ರ ಅವರಿಗೆ ತಿಳಿಯುತ್ತದೆ. ಚುನಾವಣೆ ಬರುವಾಗ ಮತ ಕೇಳಲು ಮಾತ್ರ ಬರುವ ಶಾಸಕರಿಗೆ ಬೀಡಿಕಟ್ಟಿ ಜೀವನ ಮಾಡುವ ನಾವು ಬಾಡಿಗೆ ಮನೆಯ ಲ್ಲಿದ್ದುಕೊಂಡು ಬಾಡಿಗೆ ಹೇಗೆ ನೀಡುವುದು, ಹೊಟ್ಟೆಗೆ ಏನು ತಿನ್ನುವುದು ಎಂದು ಅವರಿಗೆ ಅರ್ಥವಾಗುತ್ತಿಲ್ಲ. ನಿವೇಶನ ನೀಡುವವರೆಗೂ ನಮ್ಮ ಧರಣಿ ನಿಲ್ಲಿಸುವುದಿಲ್ಲ ಎಂದು ಶಾಸಕ ಭರತ್‌ ಶೆಟ್ಟಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಹಕ್ಕುಪತ್ರ ನೀಡಿ 7ವರ್ಷಗಳೆದಿದೆ. ಪ್ರತೀ ವರ್ಷ ಕರೆದು ಸಭೆ ಮಾಡಿ ನಿವೇಶನ ನೀಡುವ ಭರವಸೆ ನೀಡುತ್ತಿದ್ದಾರೆ ಹೊರತು ಈ ವರೆಗೂ ನಿವೇಶನ ನನೀಡಿಲ್ಲ. ಎಲ್ಲಿಂದಲೋ ಬಂದವರಿಗೆ ಸರಕಾರ ನಿವೇಶನವೂ ನೀಡಿದೆ ಹಕ್ಕುಪತ್ರವೂ ನೀಡಿದೆ. ಹಾಗೆ ಬಂದವರು ಸರಕಾರ ನೀಡಿರುವ ಜಮೀನುಗಳನ್ನು ಮಾರಾಟ ಮಾಡಿ ಇಲ್ಲಿಂದ ಹೋಗಿದ್ದಾರೆ. ನಾವು ಇಲ್ಲೇ ಹುಟ್ಟಿ ಬೆಳೆದವರು. ಆದರೆ ನಮಗೆ ಇನ್ನೂ ನಿವೇಶನವೂ ಸಿಕ್ಕಿಲ್ಲ, ಹಕ್ಕುಪತ್ರವೂ ಸಿಕ್ಕಿಲ್ಲ. ನಾವು ತಿಂಗಳಿಗೆ 6ಸಾವಿರ ರೂ. ಬಾಡಿಗೆ ನೀಡಿ ದಿನದೂಡುತ್ತಿದ್ದೇವೆ. ಶಾಸಕ ಭರತ್‌ ಶೆಟ್ಟಿ ಅವರಿಗೆ ಬೇಕಾದವರಿಗೆ ನಿವೇಶನ ಹಕ್ಕು ಪತ್ರ ಎಲ್ಲವನ್ನೂ ನೀಡಿದ್ದಾರೆ. ನಮಗೆ ಇಂದು ನಾಳೆ ಎಂದು ಸತಾಯಿಸುತ್ತಿದ್ದಾರೆ. ನಮ್ಮ ಕಷ್ಟ ಕೇಲುವವರೇ ಇಲ್ಲದಾಗಿದೆ. ನಿವೇಶನ ನೀಡಲಾಗದವರು ಉಪ್ಪುಹಾಕಿ ನೆಕ್ಕಲು ಹಕ್ಕುಪತ್ರ ನೀಡಿದ್ದಾರೆಯೇ? ಶಾಸಕರು ಹೆಸರು ಮತ್ತು ಓಟಿಗಾಗಿ ಮಾತ್ರ ಈ ಹಕ್ಕು ಪತ್ರಗಳನ್ನು ನೀಡಿದ್ದಾರೆ. ನಮಗೆ ನಿವೇಶನ ನೀಡುವವರೆಗೆ ನಮ್ಮ ಧರಣಿ ನಿಲ್ಲಿಸುವುದವುದಿಲ್ಲ ಎಂದು ಸಂತ್ರಸ್ತರಾದ ಅಬ್ದುಲ್‌ ಲತೀಫ್ ಎಂಬವರು ದೂರಿದರು.

‌ಧರಣಿಯಲ್ಲಿ ಕಾರ್ಮಿಕ ನಾಯಕ ಸದಾಶಿವ ದಾಸ್, ಹೋರಾಟ ಸಮಿತಿಯ ಸಂಚಾಲಕಿ ವಸಂತಿ ಕುಪ್ಪೆಪದವು, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಮುಹಮ್ಮದ್ ಶೆರೀಫ್ ಕಜೆ, ಸಿಪಿಐಎಂ ಸ್ಥಳೀಯ ಮುಖಂಡರಾದ ವಾರಿಜ ಕುಪ್ಪೆಪದವು, ಬೇಬಿ ನಾಯ್ಕ ಸುಂದರ ನಾಯ್ಕ ಕುಸುಮ ಕುಪ್ಪೆಪದವು, ಭವಾನಿ ಕುಪ್ಪೆಪದವು ಮತ್ತಿತರರು ಉಪಸ್ಥಿತರಿದ್ದರು.

"ನನಗೆ ಮದುವೆಯಾಗಿ 17ವರ್ಷವಾಯಿತು. ನನ್ನ ಗಂಡನಿಗೆ ಮನೆ ನಿವೇಶನ ಎರಡೂ ಇಲ್ಲ. ಈಗ ನಾನು ತಂದೆಯ ಮನೆಯಲ್ಲಿ ಇದ್ದೇನೆ. ನಮ್ಮ ಮನೆಯವರು ಗಂಡನ ಮನೆಗೆ ಹೋಗಿ ಎಂದು ಕಳುಹಿಸಿದರೆ ನಾನು ಎಲ್ಲಿಗೆ ಹೋಗಲಿ? ನನಗೆ ಎರಡು ಮಕ್ಕಳಿದ್ದಾರೆ. ನಮ್ಮ ಮುಂದಿನ ಜೀವನ ಹೇಗೆ ಎಂಬುದೇ ಶೋಚನೀಯವಾಗಿದೆ".

- ಹರಿಣಾಕ್ಷಿ ರಮೇಶ್‌, ಸಂತ್ರಸ್ತೆ

ತಿಂಗಳೊಳಗೆ ಭರವಸೆ ಈಡೇರದಿದ್ದರೆ ಹೋರಾಟ ತೀವ್ರ: ಉಪತಹಶಿಲ್ದಾರ್ ಗೆ ಎಚ್ಚರಿಸಿದ ಸಂತ್ರಸ್ತರು

ಧರಣಿಯ ವಿಷಯ ಅರಿತು ಮಂಗಳೂರು ಸಹಾಯಕ ತಹಶೀಲ್ದಾರ್ ಹಾಗೂ ಕಂದಾಯ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರ ಅಹವಾಲು ಆಲಿಸಿ ಮನವಿ ಸ್ವೀಕರಿಸಿದರು. ಬಳಿಕ ಸಂತ್ರಸ್ತ ಫಲಾನುಭವಿಗಳು ಹಾಗೂ ಪಂಚಾಯತ್ ಅಧಿಕಾರಿಗಳಿಂದ ದಾಖಲೆಗಳನ್ನು ತರಿಸಿಕೊಂಡು ಪರಿಶೀಲಿಸಿದರು. ಬಳಿಕ ಮಾತನಾಡಿ ಸಹಾಯಕ ತಹಶೀಲ್ದಾರ್‌, ಇನ್ನು 15 ದಿನಗಳಲ್ಲಿ 17 ಕುಟುಂಬಗಳಿಗೆ ಮಂಜೂರಾಗಿರುವ ನಿವೇಶನ ಹಸ್ತಾಂತರಿಸಲಾಗುವುದು. ಉಳಿದ 81 ಕುಟುಂಬ ಗಳಿಗೆ ಮಂಜೂರಾಗಿರುವ ನಿವೇಶನದ ಜಮೀನು ಸಮತಟ್ಟು, ಮರಮಟ್ಟು ತೆರವಿಗೆ ಅಂದಾಜು 15 ಲಕ್ಷ ರೂ. ಅನುದಾನ ಅಗತ್ಯ ಇದ್ದು, ಈ ಕುರಿತು ಸಂಬಂಧ ಪಟ್ಟ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸೂಕ್ತ ವ್ಯವಸ್ಥೆ ಮಾಡಲಾಗುವುದು. ಅದಾಗದಿದ್ದಲ್ಲಿ ಗ್ರಾಮದಲ್ಲಿ ಲಭ್ಯವಿರುವ ಸರಕಾರಿ ಜಮೀನಿನಲ್ಲಿ ಪರ್ಯಾಯ ನಿವೇಶನ ನೀಡಲು ಕ್ರಮ ಕೈಗೊಳ್ಳಲಾಗು ವುದು. ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲು 15 ದಿನಗಳ ಕಾಲಾವಧಿ ನೀಡುವಂತೆ ಧರಣಿ ನಿರತರಲ್ಲಿ ವಿನಂತಿಸಿದರು. ಉಪ ತಹಶೀಲ್ದಾರ್‌ ಮನವಿಗೆ ಒಪ್ಪಿದ ಸಂತ್ರಸ್ತರು, ನೀಡಿದ ಭರವಸೆ ಒಂದು ತಿಂಗಳ ಒಳಗಡೆ ಈಡೇರದಿದ್ದಲ್ಲಿ ಹೋರಾಟ ವನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು. ಬಳಿಕ ಧರಣಿಯನ್ನು ಮುಕ್ತಾಯಗೊಳಿಸಲಾಯಿತು.




Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News