ಪುಸ್ತಕೋತ್ಸವ ಪ್ರಜ್ಞಾವಂತ, ಸೌಹಾರ್ದತೆ ಹಾಗೂ ಸಾಂಸ್ಕೃತಿಕ ಏಕತೆಯ ಸಮಾಜಕ್ಕೆ ಪ್ರೇರಣೆಯಾಗಿದೆ: ಸ್ಪೀಕರ್ ಯು.ಟಿ. ಖಾದರ್
ತಿರುವನಂತಪುರಂ, ಜ.7: ಕೇರಳ ವಿಧಾನಸಭೆ ಸಚಿವಾಲಯವು ತಿರುವನಂತಪುರದಲ್ಲಿ ಏರ್ಪಡಿಸಿದ್ದ ಅಂತರಾಷ್ಟ್ರೀಯ ಪುಸ್ತಕ ಮೇಳ-3ನೇ ಆವೃತ್ತಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸ್ಪೀಕರ್ ಯು.ಟಿ. ಖಾದರ್ ಮಂಗಳವಾರ ಭಾಗವಹಿಸಿದರು.
ನಂತರ ಮಾತನಾಡಿದ ಯುಟಿ ಖಾದರ್ ಅವರು, ಈ ಪುಸ್ತಕೋತ್ಸವಗಳು ಕೇವಲ ಉತ್ಸವಗಳಲ್ಲ, ಅವು ಪರಿವರ್ತನೆಯ ಘಟ್ಟಗಳು. ಪುಸ್ತಕಗಳು ಪ್ರಗತಿಯ ನಿಗೂಢ ವಾಸ್ತುಶಿಲ್ಪಿಗಳಂತೆ, ಮನಸ್ಸುಗಳನ್ನು ಪರಿವರ್ತನೆ ಮಾಡಿ, ಕನಸುಗಳ ಸಾಕ್ಷಾತ್ಕರಿಸುವ ಶಕ್ತಿಗಳಾಗಿವೆ. ಪ್ರಪಂಚದಾದ್ಯಂತದ ಇರುವ ಪ್ರಗತಿಪರ ಚಿಂತಕರನ್ನು ಒಟ್ಟುಗೂಡಿಸಿದ ಈ ಉತ್ಸವವು ಉತ್ತಮ ಸಾಮರಸ್ಯದ ಸಮಾಜ ಸೃಷ್ಟಿಸಲು ನವ ಯೋಜನೆಗಳ ಪ್ರೇರೇಪಿಸುವ ಮತ್ತು ಅವುಗಳನ್ನು ಅನುಷ್ಠಾನ ಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಇಂತಹ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ವಿಧಾನಸಭೆಯು ತನ್ನ ಸಾಂಪ್ರದಾಯಿಕ ನೀತಿ ನಿರೂಪಣೆಯ ಪಾತ್ರವನ್ನು ಮೀರಿ, ಹೇಗೆ ಸಂಸ್ಕೃತಿ, ಜ್ಞಾನ ಮತ್ತು ಸಾಹಿತ್ಯದ ಉನ್ನತೀಕರಣಕ್ಕೆ ಸ್ಫೂರ್ತಿದಾಯಕ ಕೊಡುಗೆ ನೀಡಬಹುದೆಂದು ತೋರಿಸಿಕೊಟ್ಟು ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು ಹೇಳಿದರು.
"ದೇವರ ಸ್ವಂತ ನಾಡು" ಎಂದು ಕರೆಯಲ್ಪಡುವ ಕೇರಳದ ಪವಿತ್ರ ಭೂಮಿಯಲ್ಲಿ "ಅಂತಾರಾಷ್ಟ್ರೀಯ ಕೇರಳ ವಿಧಾನಸಭೆಯ ಪುಸ್ತಕೋತ್ಸವ" ಕಾರ್ಯಕ್ರಮದಲ್ಲಿ ಭಾಗವಹಿಸುವ ಈ ಕ್ಷಣ ನನಗೆ ಅಪಾರ ಹೆಮ್ಮೆ ಮತ್ತು ಗೌರವದ ಅಮೃತಗಳಿಗೆಯಾಗಿದೆ. ಈ ನೆಲದ ಶ್ರೀಮಂತ ಸಂಸ್ಕೃತಿ, ಬೌದ್ಧಿಕ ಆಳ ಮತ್ತು ಸಾಹಿತ್ಯದ ಪರಂಪರೆ ಕೇರಳವನ್ನು ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಲ್ಲೇ ಅನನ್ಯವಾಗಿ ಗುರುತಿಸುವಂತೆ ಮಾಡಿದೆ. ಸಂಸ್ಕೃತಿ ಮತ್ತು ಶ್ರೀಮಂತ ಸಾಹಿತ್ಯ ಪರಂಪರೆಗೆ ಹೆಸರಾದ ಕೇರಳವು, ಕರ್ನಾಟಕದಂತೆಯೇ ಹಲವು ಸಾಂಸ್ಕೃತಿಕ ವೈಶಿಷ್ಟ್ಯತೆಗಳನ್ನೊಳಗೊಂಡ ರಾಜ್ಯ ವಾಗಿದ್ದು, ವೈವಿಧ್ಯತೆಯಲ್ಲಿ ಏಕತೆ ಮತ್ತು ಸಾರ್ವಕಾಲಿಕ ಮೌಲ್ಯಗಳು ಇಲ್ಲಿನ ಜನ ಜೀವನದಲ್ಲಿ ಆಳವಾಗಿ ಬೇರೂರಿವೆ, ಎಂದು ಅವರು ಹೇಳಿದರು.
"ಶಿಕ್ಷಣವನ್ನು ವಿಮೋಚನೆಯ ಮಾರ್ಗವೆಂದು ಪ್ರತಿಪಾದಿಸಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಆಳವಾದ, ಅರ್ಥಪೂರ್ಣ ವಾದ ಬೋಧನೆಗಳು ಕೇರಳವನ್ನು ಆಧ್ಯಾತ್ಮಿಕ ಮತ್ತು ಬೌದ್ಧಿಕ ವೈಭವದ ಪ್ರಮುಖ ಕೇಂದ್ರವನ್ನಾಗಿ ರೂಪಿಸಿವೆ. ಮಾತ್ರವಲ್ಲದೆ, ಸ್ವಾಮಿ ವಿವೇಕಾನಂದರ ಸ್ಪೂರ್ತಿದಾಯಕ ಭೇಟಿಯು ಕೇರಳವನ್ನು ಜ್ಞಾನೋದಯದ ಪೀಠಸ್ಥಾನವಾಗಿ ಮತ್ತಷ್ಟು ಪ್ರಖ್ಯಾತಿಗೊಳಿಸಿತು. ಬಸವಣ್ಣನವರ ತತ್ವ ಮತ್ತು ಆದರ್ಶಗಳು ಕೇರಳದಲ್ಲಿಯೂ ಸಮಾನತೆ ಮತ್ತು ಸಾಮರಸ್ಯದ ಮನೋಭಾವವನ್ನು ಪ್ರತಿಬಿಂಬಿಸಿತು. ತಿರುವಾಂಕೂರನ್ನು ಏಕೀಕರಿಸಿದ ರಾಜ ಮಾರ್ತಾಂಡ ವರ್ಮ ಅವರ ದೂರದರ್ಶಿತ್ವದ ನಾಯಕತ್ವವು, ಆಧುನಿಕ ದೃಷ್ಟಿಕೋನ ಮತ್ತು ಚಿಂತನೆಗಳೊಂದಿಗೆ ಬೆಂಗಳೂರು ನಗರವನ್ನು ಸ್ಥಾಪಿಸಿದ ಕೆಂಪೇಗೌಡರ ಸಾಧನೆಗೆ ಸಮಾನವಾಗಿದೆ. ಸ್ವಾತಿ ತಿರುನಾಳ್ ರಾಮವರ್ಮ ರವರ ಪ್ರಬುದ್ಧ ಆಳ್ವಿಕೆಯು ತಿರುವಾಂಕೂರಿನ ಕಲಾತ್ಮಕ ಮತ್ತು ಬೌದ್ಧಿಕ ಪರಂಪರೆಯನ್ನು ಮತ್ತಷ್ಟು ಉತ್ತುಂಗಕ್ಕೆ ತಲುಪಿಸಿದಂತೆ, ಕರ್ನಾಟಕದಲ್ಲಿ ಒಡೆಯರೆ ರಾಜವಂಶ ನಾಡಿಗೆ ಅಮೂಲ್ಯವಾದ ಕೊಡುಗೆಯನ್ನು ನೀಡಿದೆ. ಈ ಅಸಾಧಾರಣ ನಾಯಕರು ತಮ್ಮ ದೀರ್ಘ ಕಾಲಿಕ ದೃಷ್ಟಿ ಮತ್ತು ಚಿಂತನೆಯ ಮೂಲಕ ದೇಶವನ್ನು ಸಮೃದ್ಧಿ, ಸಾಮರಸ್ಯ ಮತ್ತು ಸಾಂಸ್ಕೃತಿಕ ವೈಭವದಿಂದ ನಾಡನ್ನು ಶ್ರೀಮಂತಗೊಳಿಸಿದ್ದಾರೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಪುಸ್ತಕೋತ್ಸವವು ಕೇರಳ ರಾಜ್ಯ ವಿಧಾನಸಭೆಯ ದೂರದೃಷ್ಟಿಯ ಸಂಕೇತವಾಗಿದೆ. ಇಂತಹ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ವಿಧಾನಸಭೆಯು ತನ್ನ ಸಾಂಪ್ರದಾಯಿಕ ನೀತಿ ನಿರೂಪಣೆಯ ಪಾತ್ರವನ್ನು ಮೀರಿ, ಹೇಗೆ ಸಂಸ್ಕೃತಿ, ಜ್ಞಾನ ಮತ್ತು ಸಾಹಿತ್ಯದ ಉನ್ನತೀಕರಣಕ್ಕೆ ಸ್ಫೂರ್ತಿದಾಯಕ ಕೊಡುಗೆ ನೀಡಬಹುದೆಂದು ತೋರಿಸಿಕೊಟ್ಟು ಇಡೀ ದೇಶಕ್ಕೆ ಮಾದರಿಯಾಗಿದೆ. ಇಷ್ಟು ಮಾತ್ರವಲ್ಲದೆ, ಶಿಕ್ಷಣ ಮತ್ತು ಸಾಹಿತ್ಯವನ್ನು ಉತ್ತೇಜಿಸುವ ಮೂಲಕ ಸಮಾಜವನ್ನು ಹೇಗೆ ಉನ್ನತೀಕರಿಸಬಹುದು ಎಂಬುದನ್ನು ಜಗತ್ತಿಗೆ ಸಾರಿದೆ. ವಿಕ್ಟರ್ ಹ್ಯೂಗೋ ಅವರು ಹೇಳಿದಂತೆ, "ಓದಲು ಕಲಿಯುವುದು ಬೆಂಕಿಯನ್ನು ಉರಿಸಿದಂತೆ; ಉಚ್ಚರಿಸುವ ಪ್ರತಿಯೊಂದು ಅಕ್ಷರವೂ ಒಂದೊಂದು ಕಿಡಿ." ಕೇರಳ ವಿಧಾನಸಭೆಯ ಈ ಪ್ರಯತ್ನ ಕಲಿಕೆ ಮತ್ತು ಸ್ಫೂರ್ತಿಯ ಕಿಡಿಯನ್ನು ಜನಮಾನಸದಲ್ಲಿ ಪ್ರಜ್ವಲಿಸಿದ್ದು, ಅದು ಅವರ ಮನಸ್ಸುಗಳನ್ನು ಬೆಳಗಿಸುವುದಲ್ಲದೆ ದೇಶದಾದ್ಯಂತ ಸಾಂಸ್ಕೃತಿಕ ಸಮೃದ್ಧಿಯನ್ನು ಉತ್ತೇಜಿಸುವ ಹಾದಿಯನ್ನು ರೂಪಿಸಿದೆ" ಎಂದು ತಿಳಿಸಿದರು.
"ಈ ಪುಸ್ತಕೋತ್ಸವಗಳು ಕೇವಲ ಉತ್ಸವಗಳಲ್ಲ, ಅವು ಪರಿವರ್ತನೆಯ ಘಟ್ಟಗಳು. ಪುಸ್ತಕಗಳು ಪ್ರಗತಿಯ ನಿಗೂಢ ವಾಸ್ತುಶಿಲ್ಪಿಗಳಂತೆ, ಮನಸ್ಸುಗಳನ್ನು ಪರಿವರ್ತನೆ ಮಾಡಿ, ಕನಸುಗಳ ಸಾಕ್ಷಾತ್ಕರಿಸುವ ಶಕ್ತಿಗಳಾಗಿವೆ. ಪ್ರಪಂಚದಾದ್ಯಂತದ ಇರುವ ಪ್ರಗತಿಪರ ಚಿಂತಕರನ್ನು ಒಟ್ಟುಗೂಡಿಸಿದ ಈ ಉತ್ಸವವು ಉತ್ತಮ ಸಾಮರಸ್ಯದ ಸಮಾಜ ಸೃಷ್ಟಿಸಲು ನವ ಯೋಜನೆಗಳ ಪ್ರೇರೇಪಿಸುವ ಮತ್ತು ಅವುಗಳನ್ನು ಅನುಷ್ಠಾನಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಯುವ ಜನಾಂಗಕ್ಕೆ ಜ್ಞಾನದ ಭಂಡಾರವಾಗಿ ಕಾರ್ಯನಿರ್ವಹಿಸುವ ಇಂತಹ ಮಹತ್ವಪೂರ್ಣ ಕಾರ್ಯಕ್ರಮಗಳು ಅವರಲ್ಲಿ ರಚನಾತ್ಮಕ, ಕ್ರಿಯಾತ್ಮಕ ಹಾಗೂ ಸಕಾರಾತ್ಮಕತೆಯನ್ನು ಚಿಂತನೆಗಳನ್ನು ಪ್ರೊತ್ಸಾಹಿಸುತ್ತದೆ ಮಾತ್ರವಲ್ಲ ಜೀವನ ಪೂರ್ತಿ ಕಲಿಕೆಯಯನ್ನು ಉತ್ತೇಜಿಸುವ ಮೂಲಕ ಪ್ರಜ್ಞಾವಂತ ಸಮಾಜದ ನವನಿರ್ಮಾಣಕ್ಕೆ ಸಹಕಾರಿಯಾಗಿದೆ" ಎಂದು ಯುಟಿ ಖಾದರ್ ಹೇಳಿದರು.
"ಪುಸ್ತಕ ಮೇಳಗಳು ಸಮುದಾಯಗಳನ್ನು ಏಕೀಕರಿಸುವ ಮಹತ್ತರ ಅವಕಾಶಗಳನ್ನು ಸೃಷ್ಟಿಸುತ್ತವೆ. ಓದುಗರು, ಬರಹಗಾರರು, ಪ್ರಕಾಶಕರು ಮತ್ತು ಚಿಂತಕರನ್ನು ಒಟ್ಟುಗೂಡಿಸುವ ಮೂಲಕ ಉತ್ತಮ ಆರೋಗ್ಯಕರ ಸಂವಾದ, ಸಾಂಸ್ಕೃತಿಕ ವಿನಿಮಯ ಮತ್ತು ಸಾಮಾಜಿಕ ಒಗ್ಗಟ್ಟಿಗೆ ಒಂದು ವೇದಿಕೆಯನ್ನು ಒದಗಿಸುತ್ತದೆ. ಸ್ಥಳೀಯ ಲೇಖಕರು ಮತ್ತು ಪ್ರಕಾಶಕರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು, ಪ್ರಾದೇಶಿಕ ಪರಂಪರೆ ಮತ್ತು ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡಲು ಈ ಉತ್ಸವವು ಒಂದು ಮಾಧ್ಯಮವಾಗಿದೆ. ಡಾ. ಸ್ಯೂಸ್ ಅವರ ಬುದ್ಧಿವಂತಿಕೆಯ ಹೇಳಿಕೆಯಂತೆ "ನೀವು ಹೆಚ್ಚು ಓದುವುದರಿಂದ, ನಿಮಗೆ ಹೆಚ್ಚು ಜ್ಞಾನವು ದೊರೆಯುತ್ತದೆ. ಇದರಿಂದ ನೀವು ಇನ್ನಷ್ಟು ಹೆಚ್ಚು ಕಲಿಯುವಿರಿ ಮತ್ತು ನೀವು ಹೆಚ್ಚು ಸ್ಥಳಗಳಿಗೆ ಹೋಗುವಿರಿ, ಆ ಮೂಲಕ ಪ್ರಜ್ಞಾವಂತರಾಗುವಿರಿ” ಆದ್ದರಿಂದ ಎಲ್ಲರೂ ಈ ಬುದ್ಧಿವಂತಿಕೆಯ ಸಾಗರ ವನ್ನು ಕೇವಲ ಅನ್ವೇಷಿಸುವುದು ಮಾತ್ರವಲ್ಲ ಇದರಲ್ಲಿ ಮನಸ್ಸುಪೂರ್ತಿ ಮುಳುಗೇಳಬೇಕೆಂದು ನಾನು ಹೇಳಲಿಚ್ಚಿಸುತ್ತೇನೆ ಎಂದು ಖಾದರ್ ನುಡಿದರು.
"ಬೌಗೋಳಿಕ ಗಡಿಗಳ ಹೊರತಾಗಿಯೂ, ಕರ್ನಾಟಕ ಮತ್ತು ಕೇರಳ ರಾಜ್ಯಗಳು ಅತಿಯಾದ ಸಾಂಸ್ಕೃತಿಕ ಸಾಮ್ಯತೆ ಗಳನ್ನು ಪ್ರದರ್ಶಿಸುತ್ತವೆ. ಯಕ್ಷಗಾನದಿಂದ ಕಥಕ್ಕಳಿಯವರೆಗೆ, ಜಾನಪದ ಸಂಗೀತದ ಲಯಬದ್ಧವಾದ ತಾಳದಿಂದ, ಅಡಿಗೆ ಮನೆಗಳನ್ನು ಅಲಂಕರಿಸುವ ಕರಾವಳಿಯ ವಿಭಿನ್ನ ಭಕ್ಷ್ಯಗಳವರೆಗೆ, ಎರಡೂ ರಾಜ್ಯಗಳು ಸಂಪ್ರದಾಯ ಮತ್ತು ಸಾಮರಸ್ಯದ ಶ್ರೀಮಂತ ಸಾಮ್ಯತೆಯನ್ನು ಪ್ರದರ್ಶಿಸುತ್ತವೆ. ಪುಸ್ತಕಗಳು ಕೂಡ ಈ ಬೌತಿಕ ಗಡಿಗಳನ್ನು ಮೀರಿ, ಕರ್ನಾಟಕ ಮತ್ತು ಕೇರಳದ ಜನರನ್ನು ಸಾಹಿತ್ಯದ ಸೇತುವೆಯ ಮೂಲಕ ಬೆಸೆದಿವೆ. ಇಂತಹ ಕಾರ್ಯಕ್ರಮಗಳು ಆ ಬೆಸುಗೆಯನ್ನು ಇನ್ನಷ್ಟು ಬಲಪಡಿಸುತ್ತವೆ ಎಂದು ಅವರು ತಮ್ಮ ಆಶಯ ವ್ಯಕ್ತಪಡಿಸಿದರು.
"ಕೇರಳ ಮತ್ತು ಕರ್ನಾಟಕವು ವಿವಿಧ ಕ್ಷೇತ್ರಗಳಲ್ಲಿ ಅಪಾರ ಸಹಯೋಗ ಸಾಮರ್ಥ್ಯವನ್ನು ಹೊಂದಿವೆ - ಶಿಕ್ಷಣ, ಪ್ರವಾಸೋದ್ಯಮ ಮತ್ತು ಪರಿಸರ ಸಂರಕ್ಷಣೆ ಸಂಬಂದಿಸಿದ ಯೋಜನೆಗಳನ್ನು ಜಂಟಿಯಾಗಿ ಅನುಷ್ಠಾನಗೊಳಿಸುವು ದರಿಂದ ನಾವು ಮಹತ್ವದ ಮೈಲಿಗಲ್ಲುಗಳನ್ನು ಸಾಧಿಸಬಹುದು ಮಾತ್ರವಲ್ಲ, ಪ್ರಾದೇಶಿಕ ಸಾಮರಸ್ಯ ಹಾಗೂ ಪ್ರಗತಿಯ ಮೂಲಕ ಇಡೀ ರಾಷ್ಟ್ರಕ್ಕೆ ಆದರ್ಶಪ್ರಾಯವಾಗಬಹುದು. ಜಂಟಿ ಶೈಕ್ಷಣಿಕ ಕಾರ್ಯಕ್ರಮಗಳು, ವಿದ್ಯಾರ್ಥಿಗಳ ವಿನಿಮಯ ಯೋಜನೆಗಳು, ಪರಸ್ಪರ ಕಲಿಕೆ, ಸಾಮರಸ್ಯ ಮತ್ತು ಸಾಂಸ್ಕೃತಿಕ ತಿಳುವಳಿಕೆಯನ್ನು ಉತ್ತೇಜಿಸಬಹುದು. ಸಹಕಾರಿ ಪ್ರವಾಸೋದ್ಯಮ ಅಭಿಯಾನಗಳು ಎರಡೂ ರಾಜ್ಯಗಳ ನೈಸರ್ಗಿಕ ಸೌಂದರ್ಯ, ಪಾರಂಪರಿಕ ತಾಣಗಳು ಮತ್ತು ಸಾಂಸ್ಕೃತಿಕ ವೈಭವವನ್ನು ಇನ್ನಷ್ಟು ಪ್ರಚಾರ ಮಾಡಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಬಹುದು. ಪರಿಸರ ಸಂರಕ್ಷಣೆಯಲ್ಲಿ ಜಂಟಿ ಪ್ರಯತ್ನಗಳು ಈ ಪ್ರದೇಶದ ಪರಿಸರ ಯೋಗಕ್ಷೇಮವನ್ನು ಉತ್ತೇಜಿಸಿ ದೀರ್ಘಕಾಲಿಕ ಪರಿಸರ ರಕ್ಷಣಾ ಯೋಜನೆ ಗಳಿಗೆ ಮುನ್ನುಡಿ ಬರೆಯಬಹುದು" ಎನ್ನುವ ವಿಚಾರಧಾರೆಯನ್ನು ಮುಂದಿಟ್ಟರು.
ಈ ಸಂದರ್ಭ ಪದ್ಮಭೂಷಣ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಗೌರವಾನ್ವಿತ ಲೇಖಕರಾದ ದಿವಂಗತ ಎಂ.ಟಿ. ವಾಸುದೇವನ್ ನಾಯರ್ ಅವರಿಗೆ ನಾನು ನನ್ನ ಅನಂತ ಗೌರವವನ್ನು ಸಲ್ಲಿಸಲು ಇಚ್ಛಿಸುತ್ತೇನೆ. ಅವರ ನಿಧನ ನಮಗೆಲ್ಲಾ ಭಾರಿ ನಷ್ಟವಾಗಿದೆ. ಮಲಯಾಳಂ ಸಾಹಿತ್ಯ ಮತ್ತು ಸಿನಿಮಾಕ್ಕೆ ಅವರು ನೀಡಿದ ಗಮನಾರ್ಹ ಕೊಡುಗೆಗಳು, ಅಪಾರ ಜನಪ್ರಿಯತೆಯನ್ನು ಗಳಿಸಿದ ಅವರ ಕಾದಂಬರಿಗಳು, ಸಣ್ಣ ಕಥೆಗಳು ಮತ್ತು ಚಿತ್ರಕಥೆಗಳು ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಸಮೃದ್ಧಗೊಳಿಸಿದೆ. ಅವರ ಕೃತಿಗಳು ಸಾರ್ವಕಾಲಿಕ ಮತ್ತು ಎಲ್ಲಾ ವಯೋಮಾನದವರಿಗೆ ಪ್ರೇರಣೆ ನೀಡುವಂತಹದಾಗಿವೆ. ಈ ಪುಸ್ತಕೋತ್ಸವದ ಮೊದಲ ಆವೃತ್ತಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ದಿಕ್ಸೂಚಿ ಭಾಷಣ ಮಾಡಿದ ಎಂ.ಟಿ. ವಾಸುದೇವನ್ ನಾಯರ್ ಅವರು ಈಗ ನಮ್ಮ ಜೊತೆಗೆ ಬೌತಿಕವಾಗಿ ಇಲ್ಲದಿದ್ದರೂ, ಅವರ ಆಲೋಚನೆಗಳು ಮತ್ತು ಕೃತಿಗಳು ನಮ್ಮೆಲ್ಲರ ಮನದಲ್ಲಿ ಶಾಶ್ವತವಾಗಿ ನೆನಪಾಗಿ ಉಳಿದಿವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ಪುಸ್ತಕೋತ್ಸವವು ಭವಿಷ್ಯದಲ್ಲಿ ಇನ್ನಷ್ಟು ಎಂ.ಟಿ. ವಾಸುದೇವನ್ ನಾಯರ್ ಗಳ ಸೃಷ್ಟಿಗೆ ಮುನ್ನುಡಿ ಬರೆದು, ಸಾಹಿತ್ಯ ಕ್ಷೇತ್ರಕ್ಕೆ ಮತ್ತು ನಾಡಿನ ಬೌದ್ಧಿಕ ಸಂಪತ್ತಿಗೆ ಅಮೂಲ್ಯ ಕೊಡುಗೆ ನೀಡಲಿ ಎಂದು ನಾನು ಹಾರೈಸುತ್ತೇನೆ" ಎಂದು ಯುಟಿ ಖಾದರ್ ತಮ್ಮ ಮನದಾಳದ ಮಾತುಗಳನ್ನಾಡಿದರು.
ಶಾಸಕರ ಅಭಿವೃದ್ಧಿ ನಿಧಿಯಿಂದ 3 ಲಕ್ಷ ರೂ. ಮೌಲ್ಯದ ಪುಸ್ತಕಗಳನ್ನು ಖರೀದಿಸುವ ಅವಕಾಶವನ್ನು ಎಲ್ಲಾ ಶಾಸಕರಿಗೆ ನೀಡಿರುವ ಪುಸ್ತಕೋತ್ಸವದ ಆಯೋಜಕರಿಗೆ ವಂದನೆಗಳನ್ನು ಸಲ್ಲಿಸುತ್ತಾ , ಈ ಪುಸ್ತಕಗಳನ್ನು ನಮ್ಮ ಕ್ಷೇತ್ರದ ಎಲ್ಲಾ ಶಾಲೆ ಹಾಗೂ ಸಾರ್ವಜನಿಕ ಗ್ರಂಥಾಲಯಗಳಿಗೆ ನೀಡುವ ಮೂಲಕ ಈ ಪುಸ್ತಕೋತ್ಸವ ದೇಶದಾದ್ಯಂತ ಎಲ್ಲರಿಗೂ ಜ್ಞಾನದ ಹೊಸ ಪ್ರಪಂಚದ ಪರಿಚಯ ಮಾಡಿಕೊಡುವಲ್ಲಿ ತನ್ನ ಕೊಡುಗೆ ನೀಡಲಿದೆ ಎಂದು ಖಾದರ್ ಅವರು ಮೆಚ್ಚುಗೆ ಸೂಚಿಸಿದರು.
ನೀಲ್ ಗೈಮನ್ ಹೇಳಿದಂತೆ, “ಪುಸ್ತಕವು ನಿಮ್ಮ ಕೈಯಲ್ಲಿ ನೀವು ಹಿಡಿದಿಟ್ಟುಕೊಳ್ಳುವ ಮಹತ್ತರ ಕನಸು.” ಈ ಹಬ್ಬವು ಕೇವಲ ಒಂದು ಆಚರಣೆ ಮಾತ್ರವಲ್ಲ, ಇದು ಒಂದು ಬಲಿಷ್ಠ ಅಭಿಯಾನವಾಗಿದೆ. ಪ್ರಜ್ಞಾವಂತ ಹಾಗೂ ಸೌಹಾರ್ದತೆಯ ನವೀಕೃತ ಸಮಾಜದ ಉದಯಕ್ಕೆ ಇದು ಒಂದು ಜ್ಞಾಪನೆಯ ತುರ್ತುಕರೆಯಾಗಿದೆ.. ನಾವೆಲ್ಲಾ ಒಗ್ಗಟ್ಟಾಗಿ, ಮಾನವೀಯತೆಯನ್ನು ಮೈಗೂಡಿಸಿಕೊಂಡು ವೈವಿಧ್ಯತೆಯಲ್ಲಿ ಏಕತೆಯ ಮೂಲಕ, ಉಜ್ವಲ ಮತ್ತು ಹೆಚ್ಚು ಪ್ರಬುದ್ಧ ಭವಿಷ್ಯಕ್ಕಾಗಿ ಸಜ್ಜಾಗೋಣ. ಮಾಜಿ ರಾಷ್ಟ್ರಪತಿ ಮತ್ತು ಪ್ರಸಿದ್ಧ ವಿಜ್ಞಾನಿ ಡಾ. ಎ.ಪಿ.ಜೆ. ಅವರ "ಕಲಿಕೆಯು ಸೃಜನಶೀಲತೆಯನ್ನು ನೀಡುತ್ತದೆ, ಸೃಜನಶೀಲತೆಯು ಚಿಂತನೆಗೆ ಕಾರಣವಾಗುತ್ತದೆ, ಚಿಂತನೆಯು ಜ್ಞಾನವನ್ನು ನೀಡುತ್ತದೆ ಮತ್ತು ಜ್ಞಾನವು ನಿಮ್ಮನ್ನು ಶ್ರೇಷ್ಠರನ್ನಾಗಿ ಮಾಡುತ್ತದೆ." ಎನ್ನುವ ಉಲ್ಲೇಖದೊಂದಿಗೆ ಅವರು ಕಾರ್ಯಕ್ರಮಕ್ಕೆ ಶುಭ ಕೋರಿದರು.
ಎಲ್ಲಾ ಸಚಿವರು, ಶಾಸಕರು, ಮತ್ತು ಕೇರಳದ ಪ್ರಜೆಗಳನ್ನು ಕರ್ನಾಟಕಕ್ಕೆ ಆಹ್ವಾನಿಸಿ, ತಮ್ಮ ಜ್ಞಾನ ಮತ್ತು ಸಂಸ್ಕೃತಿಯನ್ನು ಹಂಚಿಕೊಳ್ಳಲು ಕರೆ ನೀಡುತ್ತಾ, ಉತ್ತಮ ಮತ್ತು ಉಜ್ವಲ ಭಾರತವನ್ನು ನಿರ್ಮಿಸಲು ಎಲ್ಲರ ಸಹಯೋಗದ ಅಗತ್ಯವಿದೆ ಎಂಬ ಸಂದೇಶವನ್ನು ಯುಟಿ ಖಾದರ್ ನೀಡಿದರು.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪುಸ್ತಕ ಮೇಳವನ್ನು ಉದ್ಘಾಟಿಸಿದರು. ಕೇರಳ ವಿಧಾನಸಭೆ ಸ್ಪೀಕರ್ ಎ.ಎನ್. ಶಮೀರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೇರಳ ವಿಧಾನ ಸಭೆಯ ವಿಪಕ್ಷ ನಾಯಕ ವಿ.ಡಿ. ಸತೀಶನ್, ಕೇರಳದ ಸಚಿವರಾದ ವಿ.ಶಿವನ ಕುಟ್ಟಿ, ಸಾಜಿ ಚೆರಿಯನ್, ಜಿ.ಆರ್. ಅನಿಲ್ ಭಾಗವಹಿಸಿದ್ದರು.
ಈ ಸಂದರ್ಭ ಲೇಖಕ ಎಂ.ಮುಕುಂದನ್‌ರನ್ನು ಸನ್ಮಾನಿಸಲಾಯಿತು. ಲೇಖಕ ದೇವದತ್ ಪಟ್ಟನಾಯಕ್ ಉಪಸ್ಥಿತರಿದ್ದರು.