ಜ.8: ದ.ಕ.ಜಿಲ್ಲಾ ಬ್ಯಾರಿ ಪ್ರತಿನಿಧಿ ಸಮಾವೇಶ

Update: 2025-01-06 16:25 GMT

ಮಂಗಳೂರು, ಜ.6: ಅಖಿಲ ಭಾರತ ಬ್ಯಾರಿ ಮಹಾಸಭಾ ವತಿಯಿಂದ ದ.ಕ.ಜಿಲ್ಲಾ ಬ್ಯಾರಿ ಪ್ರತಿನಿಧಿ ಸಮಾವೇಶವು ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಜ.8ರಂದು ಬೆಳಗ್ಗೆ 10ರಿಂದ ಸಂಜೆ 4ರವರೆಗೆ ನಡೆಯಲಿದೆ ಎಂದು ಮಹಾಸಭಾದ ಅಧ್ಯಕ್ಷ ಅಝೀಝ್ ಬೈಕಂಪಾಡಿ ತಿಳಿಸಿದ್ದಾರೆ.

ಸೋಮವಾರ ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಸುಮಾರು ಬ್ಯಾರಿ ಜನಾಂಗದ 25 ಲಕ್ಷ ಜನರಿದ್ದಾರೆ. ಈ ಜನಾಂಗದ ಸಾಮಾಜಿಕ ಭದ್ರತೆ, ಶೈಕ್ಷಣಿಕ, ಸಾಂಸ್ಕೃತಿಕ, ರಾಜಕೀಯ ಶ್ರೇಯೋಭಿವೃದ್ಧಿಯ ಉದ್ದೇಶದಿಂದ ಈ ಸಮಾವೇಶ ನಡೆಸಲಾಗುವುದು. ಜಿಲ್ಲೆಯ ಎಲ್ಲಾ ಚುನಾಯಿತ ಜನಪ್ರತಿನಿಧಿಗಳು, 849 ಮಸೀದಿಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಸಹಿತ 1200ಕ್ಕೂ ಅಧಿಕ ಮಂದಿ ಈ ಸಮಾವೇಶ ದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ರಾಜ್ಯ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಮತ್ತು ಸಚಿವ ಝಮೀರ್ ಅಹ್ಮದ್ ಖಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಅಖಿಲ ಭಾರತ ಬ್ಯಾರಿ ಮಹಾಸಭಾದ ಗೌರವ ಅಧ್ಯಕ್ಷರಾಗಿರುವ ಕರ್ನಾಟಕ ರಾಜ್ಯ ಆಲೈಡ್ ಆ್ಯಂಡ್ ಹೆಲ್ತ್‌ಕೇರ್ ಕೌನ್ಸಿಲ್ ಅಧ್ಯಕ್ಷ ಡಾ.ಯು.ಟಿ.ಇಫಿಕಾರ್ ಆಲಿ ಫರೀದ್ ಅವರನ್ನು ಸಮಾವೇಶದಲ್ಲಿ ಸನ್ಮಾನಿಸಲಾಗುವುದು. ಬ್ಯಾರಿ ಜನಾಂಗದ ಸ್ಥಳೀಯ ಆಕಾಂಕ್ಷಿ ಪದವೀಧರ ವಿದ್ಯಾರ್ಥಿಗಳಿಗೆ ಯುಪಿಎಸ್‌ಸಿ ಉನ್ನತ ಶಿಕ್ಷಣ ತರಬೇತಿ ನೀಡುವ ನಿಟ್ಟಿನಲ್ಲಿ ’ಜಮಾತಿ ಗೊಂದು ಐಎಎಸ್, ಐಪಿಎಸ್’ ಯೋಜನೆಗೆ ಚಾಲನೆ ನೀಡಲಾಗುವುದು. ಸಮಾವೇಶದಲ್ಲಿ ರಾಜ್ಯ ಬ್ಯಾರಿ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯಿಸಲಾಗುವುದು ಎಂದು ಅಝೀಝ್ ಬೈಕಂಪಾಡಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮುಹಮ್ಮದ್ ಮೋನು, ಮುಹಮ್ಮದ್ ಶಾಕಿರ್ ಹಾಜಿ, ಮುಹಮ್ಮದ್ ಹನೀಫ್, ಹಮೀದ್ ಕಿನ್ಯ, ಇ.ಕೆ ಹುಸೈನ್, ಅಬ್ದುಲ್ ರಹ್ಮಾನ್ ಕೋಡಿಜಾಲ್, ಅಬ್ದುಲ್ ಖಾದರ್ ಇಡ್ಮ, ಇಬ್ರಾಹೀಂ ಬಾವಾ ಬಜಾಲ್, ಇಕ್ಬಾಲ್ ಮುಲ್ಕಿ, ಝಕರಿಯಾ ಮಲಾರ್, ಮುಹಮ್ಮದ್ ಹನೀಫ ದೇರಳಕಟ್ಟೆ, ಮುಹಮ್ಮದ್ ಸಮೀರ್ ಆರ್.ಕೆ. ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News