ನಿವೃತ್ತ ಶಿಕ್ಷಕಿ ರೋಹಿಣಿಗೆ ಬೈಕಾಡಿ ಪ್ರಶಸ್ತಿ ಪ್ರದಾನ

Update: 2025-01-06 17:51 GMT

ಮಂಗಳೂರು: ನಿವೃತ್ತ ಶಿಕ್ಷಕಿ ಕೆ. ಎ. ರೋಹಿಣಿಯವರಿಗೆ 5ನೇ ವರ್ಷದ ‘ಬೈಕಾಡಿ ಜನಾರ್ದನ್ ಆಚಾರ್ ಪ್ರಶಸ್ತಿ 2025’ನ್ನು ಪ್ರದಾನ ಮಾಡಲಾಯಿತು.

‘ಬೈಕಾಡಿ ಪ್ರತಿಷ್ಠಾನ ಮಂಗಳೂರು’ ಇದರ ವತಿಯಿಂದ ನಗರದ ಉರ್ವಸ್ಟೋರ್‌ನ ತುಳು ಭವನದ ಪ್ರೊಫೆಸರ್ ಅಮೃತ ಸೋಮೇಶ್ವರ ಸಭಾಂಗಣದಲ್ಲಿ ರವಿವಾರ ನಡೆದ ಸಮಾರಂಭದಲ್ಲಿ ಶ್ರೀ ಜಗದ್ಗುರು ದುರುದುಂಡೀಶ್ವರ ಸಿದ್ಧಸಂಸ್ಥಾನ ಮಠ ಬೆಳಗಾವಿಯ ನಿಡಸೋಸಿಯ ಉತ್ತರಾಧಿಕಾರಿ ನಿಜಲಿಂಗೇಶ್ವರ ಸ್ವಾಮಿ ಪ್ರಶಸ್ತಿ ಪ್ರದಾನ ಮಾಡಿದರು.

ಆಶೀರ್ವಚನ ನೀಡಿ ಮಾತನಾಡಿದ ಸ್ವಾಮೀಜಿ ಅವರು , ಬೈಕಾಡಿ ಜನಾರ್ದನ ಆಚಾರ್ ಇವರೊಬ್ಬ ಕಲೆಯ ಆರಾಧಕ ರಾಗಿದ್ದು, ರಾಮಕೃಷ್ಣ ಪರಮಹಂಸ ಮತ್ತು ವಿವೇಕಾನಂದರ ತತ್ವಗಳನ್ನು ಆಳವಾಗಿ ಅಧ್ಯಯನ ಮಾಡಿ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಕಲೆ ಸಂಸ್ಕೃತಿಯ ಬಗ್ಗೆ ಅವರಿಗೆ ಅಪಾರ ಆಸಕ್ತಿ ಇತ್ತು. ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡಿದ ವರನ್ನು ಗುರುತಿಸುವ ಕೆಲಸ ಈ ಪ್ರತಿಷ್ಠಾನದಿಂದ ಆಗುತ್ತಿದೆ ಎಂದರು.

ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ ಮಾತನಾಡಿ ‘‘ಮಕ್ಕಳಲ್ಲಿ ಮಕ್ಕಳಾಗಿ ಬೆರೆ ಯುವ ಪ್ರವೃತ್ತಿ ಬೈಕಾಡಿ ಜನಾರ್ದನ ಆಚಾರ್ ಅವರಲ್ಲಿತ್ತು. ಅವರು ಸಾಮಾಜಿಕ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿ ಕೊಂಡು ಒಳ್ಳೆಯ ವಿಚಾರವನ್ನು ಸಮಾಜಕ್ಕೆ ಕೊಟ್ಟವರು. ಅವರ ಹೆಜ್ಜೆ ಗುರುತು ನಮ್ಮ ಬದುಕಿನಲ್ಲಿ ಅನುಕರಣೀಯ. ಆ ಮೂಲಕ ಪ್ರತಿನಿತ್ಯ ಅವರ ಸಂಸ್ಮರಣೆಯಾಗುತ್ತದೆ ಎಂದರು.

ರಾಜ್ಯಮಟ್ಟದ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಡಾ. ಎಸ್. ಆರ್. ಹರೀಶ ಆಚಾರ್ಯ, ಪ್ರಶಸ್ತಿ ಪುರಸ್ಕೃತ ಹಾಸನದ ರಾಜಾರಾಮ ತೊಗಲು ಬೊಂಬೆ ಮೇಳದ ಗುಂಡುರಾಜು, ಧ್ವನಿ ಫೌಂಡೇಶನ್ ಮೈಸೂರು ಇದರ ಸಂಸ್ಥಾಪಕಿ ಶ್ವೇತ ಮಡಪ್ಪಾಡಿ ಮುಖ್ಯ ಅತಿಥಿಯಾಗಿದ್ದರು.

ಉದಯೋನ್ಮುಖ ಗಾಯಕಿ ನಿರೀಕ್ಷಾ ಯು. ಕೆ. ಮತ್ತು ಗಾಯಕ ಆಯುಷ್ ಪ್ರೇಮ್ ಇವರ ಸುಮಧುರ ಭಾವಗಾನ ಸಮಾರಂಭಕ್ಕೆ ಅಪೂರ್ವ ಕಳೆ ನೀಡಿ ಸಂಗೀತಾಸಕ್ತರನ್ನು ಮುದಗೊಳಿಸಿತು.

ಪ್ರತಿಷ್ಠಾನದ ಭರತ್ ರಾಜ್ ಬೈಕಾಡಿ ಸ್ವಾಗತಿಸಿ, ಅಕ್ಷತಾ ಬೈಕಾಡಿ ಸನ್ಮಾನಿತರನ್ನು ಪರಿಚಯಿಸಿ, ರತ್ನಾವತಿ ಜೆ. ಬೈಕಾಡಿ ವಂದಿಸಿದರು. ಮಾಧುರಿ ಶ್ರೀರಾಮ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಪ್ರಶಸ್ತಿ ಪುರಸ್ಕೃತ ಗುಂಡುರಾಜು ಮತ್ತು ತಂಡದಿಂದ ಸುಪ್ರಭಾ ವಿಲಾಸ ತೊಗಲು ಬೊಂಬೆಯಾಟದ ಪ್ರದರ್ಶನ ನಡೆಯಿತು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News