ಜಮೀನು ಅಕ್ರಮ ಮಂಜೂರು ಆರೋಪ: ದಲಿತ ಕುಟುಂಬದ ಸದಸ್ಯರಿಂದ ಅಹೋರಾತ್ರಿ ಪ್ರತಿಭಟನೆ

Update: 2025-01-04 15:55 GMT

ಸುಳ್ಯ: ತಾಲೂಕಿನ ಪಂಬೆತ್ತಾಡಿ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಚಂರ್ಬ ಮೇರ ಎಂಬವರ ಜಮೀನನ್ನು ಸ್ಥಳೀಯ ನಿವಾಸಿ ಮೋನಪ್ಪ ಗೌಡ ಮತ್ತು ಇತರರು ಅಕ್ರಮವಾಗಿ ಮಂಜೂರುಗೊಳಿಸಿ ಬಡ ದಲಿತ ಕುಟುಂಬಕ್ಕೆ ಅನ್ಯಾಯ ವೆಸಗಿದ್ದಾರೆ ಎಂದು ಆರೋಪಿಸಿ ಗುರುವಾರ ರಾತ್ರಿಯಿಂದ ಸುಳ್ಯ ತಾಲೂಕು ಕಚೇರಿ ಆವರಣದಲ್ಲಿ ದಲಿತ ಕುಟುಂಬದ ಸದಸ್ಯರು ಮತ್ತು ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಯ ಮುಖಂಡರು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಸುಳ್ಯ ಮಿನಿ ವಿಧಾನಸೌಧದ ಒಳಭಾಗದಲ್ಲಿ ತಹಸೀಲ್ದಾರ್ ಕಚೇರಿಯ ಮುಂಭಾಗ ನ್ಯಾಯ ಸಿಗುವವರೆಗೆ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದರು. ಈ ವೇಳೆ ತಹಸೀಲ್ದಾರ್ ಮಂಜುಳಾ ಮತ್ತು ಪೊಲೀಸ್ ಸಿಬ್ಬಂದಿ ಬಂದು ರಾತ್ರಿ ಸಮಯ ಕಚೇರಿಯ ಒಳಭಾಗದಲ್ಲಿ ಯಾರು ಕೂಡ ನಿಲ್ಲುವಂತಿಲ್ಲ. ಏನೇ ಸಮಸ್ಯೆ ಇದ್ದರು ಬೆಳಿಗ್ಗೆ ಕಚೇರಿಯ ಕೆಲಸದ ಸಮಯಕ್ಕೆ ಬನ್ನಿ. ಈಗ ಇಲ್ಲಿಂದ ತೆರಳಬೇಕೆಂದು ಸೂಚನೆ ನೀಡಿದರು. ಆದರೆ ಪ್ರತಿಭಟನಾಕಾರರು ಪ್ರತಿಭಟನೆ ಕೈ ಬಿಡದೆ ಮಿನಿಸೌಧದಿಂದ ಹೊರಗಡೆ ಬಂದು ಗೇಟಿನ ಬಳಿ ಕುಳಿತು ಮತ್ತೆ ಪ್ರತಿಭಟನೆ ಮುಂದುವರೆಸಿದರು.

ಗುರುವಾರ ರಾತ್ರಿ ಸುಮಾರು 8.45ಕ್ಕೆ ಸ್ಥಳಕ್ಕೆ ಬಂದ ಸುಳ್ಯ ಎಸೈ ಸಂತೋಷ್ ಅವರು ಗಿರಿಧರ ನಾಯ್ಕ ಅವರ ಬಳಿ ಮನವಿ ಮಾಡಿ ರಾತ್ರಿ ವೇಳೆ ವೃದ್ಧ ಮಹಿಳೆಯರನ್ನು ಈ ಚಳಿಯ ಸಮಯ ಇಲ್ಲಿ ಕೂರಿಸುವುದು ಸರಿಯಲ್ಲ. ಅಲ್ಲದೆ ಇದು ಕಚೇರಿಯ ಪರಿಸರ ಆದ ಕಾರಣ ಇಲ್ಲಿಂದ ತೆರಳಬೇಕು ಮತ್ತು ಏನಾದರೂ ಮಾತಾಡಲು ಇದ್ದರೆ ಬೆಳಿಗ್ಗೆ ಬಂದು ಕಚೇರಿ ವೇಳೆ ಅಧಿಕಾರಿಗಳೊಂದಿಗೆ ಮಾತನಾಡಿಕೊಳ್ಳಿ ಎಂದು ಮನವಿ ಮಾಡಿಕೊಂಡರು.

ಇದಕ್ಕೆ ಒಪ್ಪಿಕ್ಕೊಂಡ ಗಿರಿಧರ್ ನಾಯ್ಕ ಅವರು ನಿಮ್ಮ ಮಾತಿಗೆ ಬೆಲೆ ನೀಡಿ ಸದ್ಯಕ್ಕೆ ಇಲ್ಲಿಂದ ಈಗ ತೆರಳುತ್ತೇವೆ. ಮತ್ತೆ ನಾಳೆ ಬೆಳಿಗ್ಗೆ ಮತ್ತೆ ಬಂದು ನಾವು ಇಲ್ಲಿ ಕೂರುತ್ತೇವೆ. ಎಲ್ಲಾದರೂ ನಾಳೆ ನಮಗೆ ನ್ಯಾಯ ಸಿಗದೇ ಹೋದರೆ ಮತ್ತೆ ನಾವು ಯಾವುದೇ ಅಧಿಕಾರಿಗಳ ಮಾತನ್ನು ಕೇಳುವುದಿಲ್ಲ ಮತ್ತು ಎಷ್ಟೇ ರಾತ್ರಿಯಾದರು ನಾವು ಈ ಜಾಗ ಬಿಟ್ಟು ಹೋಗುವುದೂ ಇಲ್ಲ ಎಂದು ಎಚ್ಚರಿಕೆಯನ್ನು ನೀಡಿ ಅಲ್ಲಿಂದ ತೆರಳಿದರು.

ಶುಕ್ರವಾರ ಮತ್ತೆ ತಾಲೂಕು ಕಛೇರಿ ಬಳಿ ಪ್ರತಿಭಟನೆ ನಡೆಸಿದರು. ರಾತ್ರಿ ವರೆಗೂ ಕಚೇರಿಯಲ್ಲೇ ಇದ್ದು ಪ್ರತಿಭಟನೆ ನಡೆಸುತ್ತೇವೆ. ಏನಾದರೂ ಅನಾಹುತ ಸಂಭವಿಸಿದರೆ ಅಧಿಕಾರಿಗಳೇ ಹೊಣೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಹಶಿಲ್ದಾರ್ ಮಂಜುಳಾ ಅವರು, ಪ್ರಕರಣ ಸಂಬಂಧಿಸಿದಂತೆ ಈಗಾಗಲೇ ಹೈಕೋರ್ಟ್ ನಲ್ಲಿ ಆದೇಶವಾಗಿದೆ. ಅದರಂತೆ ಪಡೆದುಕೊಳ್ಳಲಾಗಿದೆ. ಇನ್ನು ಏನಾದರೂ ಸಮಸ್ಯೆಗಳಿದ್ದಲ್ಲಿ ಅವರು ಕೋರ್ಟ್‍ನಲ್ಲೇ ವಾದಿಸಬೇಕಾಗುತ್ತದೆ ಎಂದರು.

ಎರಡು ದಿನಗಳಿಂದ ನಡೆಯುತ್ತಿರುವ ಧರಣಿ ಶುಕ್ರವಾರವೂ ಮುಂದುವರೆಯಿತು ಶುಕ್ರವಾರ ರಾತ್ರಿ ಧರಣಿ ನಿರತರು ವೃದ್ಧರು, ಮಹಿಳೆಯರು ಸಹಿತ ಇತರರು ತಾಲೂಕು ಕಛೇರಿ ಹೊರ ಭಾಗದಲ್ಲೇ ಅಹೋರಾತ್ರಿ ಕಳೆದ ಘಟನೆ ನಡೆದಿದೆ. ಶನಿವಾರ ಮತ್ತೆ ಪ್ರತಿಭಟನೆ ಮುಂದುವರಿಸಿದ್ದು, ಈ ವೇಳೆ ಪತ್ರಕರ್ತರ ಜೊತೆ ಮಾತನಾಡಿದ ಸಂಘಟನೆಯ ಗಿರಿಧರ್, ನಮ್ಮ ಪ್ರತಿಭಟನೆ ಇಲ್ಲಿ ಮುಂದುವರಿಯಲಿದೆ. ಅಧಿಕಾರಿಗಳು ಯಾವುದೇ ಸ್ಪಂಧನೆ ನೀಡುತ್ತಿಲ್ಲ, ಸೋಮವಾರ ಪುತ್ತೂರಿನ ಎಸಿ ಕಛೇರಿಗೆ ಮುತ್ತಿಗೆ ಹಾಕಿ ಎಸಿ ಕಛೇರಿಯೊಳಗೆ ಕುಳಿತು ನ್ಯಾಯಕ್ಕಾಗಿ ಒತ್ತಾಯಿಸುತ್ತೇವೆ. ಬಳಿಕವೂ ನ್ಯಾಯ ಸಿಗದೇ ಇದ್ದಲ್ಲಿ, ವಾರದ ಬಳಿಕ ಪಂಬೆತ್ತಾಡಿಯ ಚಂರ್ಬ ಮೇರ ಅವರಿದ್ದ ಜಾಗಕ್ಕೆ ಹೋಗಿ ಅಲ್ಲಿ ವಾಸ್ತವ್ಯ ಮಾಡಲು ಆರಂಭಿಸು ತ್ತೇವೆ. ಯಾವುದೇ ಅನಾಹುತ ಸಂಭವಿಸಿದರೂ ಅಧಿಕಾರಿಗಳೇ ನೇರ ಹೊಣೆ ಎಂದು ಅವರು ಎಚ್ಚರಿಸಿದರು. ಸಂಘಟನೆಯ ಪ್ರಮುಖರು, ಕುಟುಂಬಸ್ಥರು ಉಪಸ್ಥಿತರಿದ್ದರು. ರಾತ್ರಿ ವೇಳೆ ಸುಳ್ಯ ಪೊಲೀಸರು ಧರಣಿ ನಿರತ ಸ್ಥಳಕ್ಕೆ ಭೇಟಿ ನೀಡಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News