ವಂಚನೆ ಪ್ರಕರಣ ಗಂಭೀರವಾಗಿ ತೆಗೆದುಕೊಳ್ಳಲು ಸೂಚನೆ : ಸ್ಪೀಕರ್ ಯು ಟಿ ಖಾದರ್
ಮಂಗಳೂರು : ವಿಟ್ಲದಲ್ಲಿ ಈಡಿ ದಾಳಿ ಹೆಸರಲ್ಲಿ ನಡೆದಿರುವ ಹಣ ಲೂಟಿ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಆದಷ್ಟು ಶೀಘ್ರ ದುಷ್ಕರ್ಮಿಗಳನ್ನು ಪತ್ತೆ ಹಚ್ಚುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚನೆ ನೀಡಿದ್ದೇನೆ. ಪ್ರಕರಣದ ತನಿಖೆಗೆ ಹಾಗು ದುಷ್ಕರ್ಮಿಗಳನ್ನು ಪತ್ತೆ ಹಚ್ಚಲು ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಸ್ಪೀಕರ್ ಯು ಟಿ ಖಾದರ್ ತಿಳಿಸಿದ್ದಾರೆ.
ಈಡಿ ಅಧಿಕಾರಿಗಳು ಎಂದು ನಂಬಿಸಿ ಉದ್ಯಮಿಯ ಮನೆಗೆ ದಾಳಿ 30 ಲಕ್ಷ ರೂ. ಲೂಟಿ ಮಾಡಿದ ಘಟನೆ ಬೋಳಂತೂರು ಸಮೀಪದ ನಾರ್ಶ ಎಂಬಲ್ಲಿ ನಡೆದಿದೆ.
ಬಂಟ್ವಾಳ ತಾಲೂಕಿನ ವಿಟ್ಲ ಪೋಲೀಸ್ ಠಾಣೆ ವ್ಯಾಪ್ತಿಯ ಬೋಳಂತೂರು ಸಮೀಪದ ನಾರ್ಶ ಎಂಬಲ್ಲಿ ಸುಲೈಮಾನ್ ಹಾಜಿ ಅವರು ಸಿಂಗಾರಿ ಬೀಡಿ ಸಂಸ್ಥೆಯನ್ನು ಅನೇಕ ವರ್ಷಗಳಿಂದ ನಡೆಸುತ್ತಿದ್ದಾರೆ. ತಡರಾತ್ರಿ ಅವರ ಮನೆಗೆ ತಮಿಳುನಾಡು ಮೂಲದ ಕಾರಿನಲ್ಲಿ ಆಗಮಿಸಿದ ತಂಡ ದಿಢೀರ್ ದಾಳಿ ನಡೆಸಿದೆ. ನಾವು ಈಡಿ ಅಧಿಕಾರಿಗಳು ಎಂದು ನಂಬಿಸಿ ಸುಮಾರು ಎರಡು ಗಂಟೆಗಳ ವರೆಗೆ ತನಿಖೆ ನಡೆಸಿದೆ ಎನ್ನಲಾಗಿದೆ.
ಪ್ರಕರಣದ ಕುರಿತು ದಿಗ್ಭ್ರಮೆ ವ್ಯಕ್ತಪಡಿಸಿರುವ ಸ್ಪೀಕರ್ ಯು ಟಿ ಖಾದರ್ ಸುಲೈಮಾನ್ ಹಾಜಿ ಹಾಗೂ ಕುಟುಂಬಸ್ಥರ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಧೃತಿಗೆಡದಂತೆ ಧೈರ್ಯ ತುಂಬಿದ್ದಾರೆ. ದುಷ್ಕರ್ಮಿಗಳು ಶೀಘ್ರ ಬಂಧನವಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.