ಕರಾವಳಿ ಉತ್ಸವ ಪ್ರಯುಕ್ತ ಕದ್ರಿ ಪಾರ್ಕ್‌ನಲ್ಲಿ ಕಾರು-ಬೈಕ್‌ಗಳ ಪ್ರದರ್ಶನ

Update: 2025-01-04 15:21 GMT

ಮಂಗಳೂರು: ಕರಾವಳಿ ಉತ್ಸವ ಪ್ರಯುಕ್ತ ಯುವಮನದ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ನಗರದ ಕದ್ರಿ ಪಾರ್ಕ್‌ನಲ್ಲಿ ಶನಿವಾರ ನಡೆದ ಕಾರು ಮತ್ತು ಬೈಕ್ ಪ್ರದರ್ಶನದಲ್ಲಿ ಅಗಸ್ತಾ, ಡುಕಾಟಿ, ವೆಂಟ್ಲಿ ವಾಹನಗಳು ಸಾರ್ವಜನಿಕ ರನ್ನು ಆಕರ್ಷಿಸಲ್ಪಟ್ಟಿತು. ಯಂಗ್ ಇಂಡಿಯಾ, ಬೈಕಿಂಗ್ ಚಾಂಪಿಯನ್ಸ್ ಮತ್ತು ರೌಂಡ್ ಟೇಬಲ್ ಆಯೋಜಿಸಿದ್ದ ಪ್ರದರ್ಶನದಲ್ಲಿದ್ದ ದುಬಾರಿ ಬೆಲೆಯ, ಅಪರೂಪದ ಬೈಕ್ ಮತ್ತು ಕಾರುಗಳು ಯುವ ಪೀಳಿಗೆಯ ಕಣ್ಮನ ಸೆಳೆಯಿತು. ಕದ್ರಿ ಪಾರ್ಕ್‌ಗೆ ವಿಹರಿಸಲು ಬಂದವರೆಲ್ಲರೂ ಈ ಪ್ರದರ್ಶನದತ್ತ ಸುಲಿದಾಡಿದರು. ಅಲ್ಲದೆ ಕುಟುಂಬ ಸಮೇತರಾಗಿ ಕಾರುಗಳ ಮುಂದೆ ನಿಂತು ಸೆಲ್ಪಿ ಕ್ಲಿಕ್ಕಿಸಿಕೊಂಡರು.

ಎಂ.ವಿ ಆಗಸ್ತಾ, ಬೆನೆಲಿ ಪಿಆರ್‌ಕೆ500 ಮತ್ತು ಡುಕಾಟಿ ಬೈಕ್‌ಗಳನ್ನು ನೋಡಿ ಸಾರ್ವಜನಿಕರು ಸಂಭ್ರಮಿಸಿದರು. ಆಗಸ್ತಾ ಜಗತ್ತಿನಲ್ಲಿ 200 ಮಾತ್ರವಿದ್ದು ಭಾರತದಲ್ಲಿರುವ ಏಕೈಕ ಬೈಕ್ ಮಂಗಳೂರಿನಲ್ಲಿದೆ ಎಂದು ಅದರ ಮಾಲಕ ಮೋಸಿಸ್ ಹೇಳಿಕೊಂಡರು. ಬಿಎಂಡಬ್ಲ್ಯು ಕಂಪನಿಯ ವಿವಿಧ ವೇರಿಯಂಟ್‌ಗಳು, ಹಾರ್ಲಿ ಡೇವಿಡ್ಸನ್ ಕಂಪನಿಯ ಫ್ಯಾಟ್ ಬಾಬ್, ಸುಜುಕಿ ವಿಸ್ಟಾರ್ಮ್, ಕವಾಸಾಕಿ ನಿಂಜಾ ಮುಂತಾದ ಬೈಕ್‌ಗಳಿದ್ದವು. ಮಹಾರಾಷ್ಟ್ರದಿಂದ ಖರೀದಿಸಿದ ಲ್ಯಾಂಬೋರ್ಗಿನಿ, ಪುದುಚೇರಿಯಿಂದ ತಂದಿರುವ ಆ್ಯಷ್ಟನ್ ಮಾರ್ಟಿನ್, ದುಬಾರಿ ಬೆಂಟ್ಲಿ, ಮಸ್ಟ್ಯಾಂಗ್ ಜಿಟಿ, ಪೊರ್ಷೆ ಕಾರುಗಳು ಗಮನ ಸೆಳೆದವು.

*ಜಿಲ್ಲೆಯ ವಾರ್ಷಿಕ ಕಾರ್ಯಕ್ರಮಗಳಲ್ಲಿ ಕಾರು ಮತ್ತು ಬೈಕ್ ರ್ಯಾಲಿಯನ್ನು ಕೂಡ ಸೇರ್ಪಡೆಗೊಳಿಸಲಾಗುವುದು. ಅದಕ್ಕಾಗಿ ನಗರದ ಹೊರವಲಯದಲ್ಲಿ ರೇಸಿಂಗ್ ಟ್ರ್ಯಾಕ್ ನಿರ್ಮಿಸಲು ಚಿಂತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದರು.

ಯುವಮನದ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ನಡೆದ ವೈವಿಧ್ಯಮಯ ಕಾರು ಮತ್ತು ಬೈಕ್ ಪ್ರದರ್ಶನವನ್ನು ವೀಕ್ಷಿಸಿದ ಬಳಿಕ ಮಾತನಾಡಿದ ಅವರು ನಗರದಲ್ಲಿ ಸಾಕಷ್ಟು ರೇಸಿಂಗ್ ಚಾಂಪಿಯನ್ನರಿದ್ದಾರೆ. ರೇಸ್ ಆಯೋಜಕರೂ ಇದ್ದಾರೆ. ಅವರು ಸ್ಪರ್ಧೆ ನಡೆಸಲು ಹೊರ ರಾಜ್ಯಗಳಿಗೆ ಹೋಗುತ್ತಾರೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲೇ ಟ್ರ್ಯಾಕ್ ಸೌಲಭ್ಯವನ್ನು ಒದಗಿಸುವ ಯೋಜನೆ ಇದೆ ಎಂದರು.

ಶಾಸಕರಾದ ವೇದವ್ಯಾಸ ಕಾಮತ್, ಮಂಜುನಾಥ ಭಂಡಾರಿ, ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಇಂಡಿಯನ್ ನ್ಯಾಷನಲ್ ರ್ಯಾಲಿ ಚಾಂಪಿಯನ್‌ಷಿಪ್‌ನ ಪ್ರತಿನಿಧಿ ಮೂಸಾ ಮತ್ತಿತರರು ಪಾಲ್ಗೊಂಡಿದ್ದರು.







Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News