ಬಂಡೆ ಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ: ಹನಿಟ್ರ್ಯಾಪ್ ಶಂಕೆ ವ್ಯಕ್ತಪಡಿಸಿದ ಪೊಲೀಸರು
ರಾಮನಗರ: ಕಂಚುಗಲ್ ಬಂಡೇಮಠದ ಬಸವಲಿಂಗ ಸ್ವಾಮೀಜಿಯ ಆತ್ಮಹತ್ಯೆ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಸ್ವಾಮೀಜಿ ಮಹಿಳೆಯ ಹನಿಟ್ರ್ಯಾಪ್ ಮತ್ತು ಬೆದರಿಕೆಗೆ ಒಳಗಾಗಿದ್ದರು. ಈ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ದಟ್ಟವಾಗಿದೆ ಎಂದು ಪೊಲೀಸರು ತಿಳಿಸಿದ್ದಾಗಿ ಪಿಟಿಐ ವರದಿ ಮಾಡಿದೆ.
ಕಳೆದ ರವಿವಾರ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಕೆಂಪಾಪುರದ ಬಂಡೆಮಠದ ಆವರಣದಲ್ಲಿರುವ ಪೂಜಾ ಕೊಠಡಿಯ ಕಿಟಕಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಬಂಡೆಮಠದ ಸ್ವಾಮೀಜಿ ಅವರ ಮೃತದೇಹ ಪತ್ತೆಯಾಗಿತ್ತು.
ಸ್ವಾಮೀಜಿಗಳ ಮೃತದೇಹವಿದ್ದ ಜಾಗದಲ್ಲಿ ಪೊಲೀಸರಿಗೆ ಸ್ವಾಮೀಜಿ ಬರೆದಿದ್ದ ಪುಟಗಳ ಡೆತ್ ನೋಟ್ ಸಿಕ್ಕಿದ್ದು, ಅದರಲ್ಲಿ ತಮ್ಮ ಮೇಲೆ ನಿರಂತರ ಕಿರುಕುಳ ಮಾಡಿ ತಮ್ಮ ಚಾರಿತ್ರ್ಯಕ್ಕೆ ಧಕ್ಕೆ ತರಲು ಕೆಲವರು ಯತ್ನಿಸಿದ್ದಾರೆ. ನನ್ನ ಮಾನ ಕಳೆಯುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದ್ದು, ಅವರ ಹೆಸರುಗಳನ್ನು ಕೂಡ ಡೆತ್ ನೋಟ್ ನಲ್ಲಿ ದಾಖಲಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಪೊಕ್ಸೊ ಪ್ರಕರಣದಡಿ ಬಂಧಿತರಾದ ನಂತರ ಬಂಡೆಮಠದ 45 ವರ್ಷದ ಬಸವಲಿಂಗೇಶ್ವರ ಸ್ವಾಮಿಗಳ ಮೇಲೆ ಹನಿಟ್ರ್ಯಾಪ್ ಮಾಡಿ ಬೆದರಿಕೆ ಹಾಕಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವಿಡಿಯೋ ವೈರಲ್: ಮಹಿಳೆಯ ಜೊತೆ ವೀಡಿಯೋ ಕಾಲ್‍ನಲ್ಲಿ ಮಾತುಕತೆ ನಡೆಸುವ ಬಂಡೆಮಠದ ಸ್ವಾಮೀಜಿ ಅವರದ್ದೆನ್ನಲಾದ ವೀಡಿಯೋವೊಂದು ವೈರಲ್ ಆಗುತ್ತಿದೆ. ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ... ಮಡಿಕೇರಿ: ಕೆರೆಗೆ ಬಿದ್ದು ಯುವತಿ ಮೃತ್ಯು