ಕರಿಮೆಣಸು ಕಳವು ಪ್ರಕರಣ : ಕುಶಾಲನಗರ ಪೊಲೀಸರಿಂದ ಐವರು ಆರೋಪಿಗಳ ಬಂಧನ

Update: 2022-10-27 09:38 GMT

ಮಡಿಕೇರಿ ಅ.27 : ಕರಿಮೆಣಸು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಿರುವ ಕುಶಾಲನಗರ ಪೊಲೀಸರು, ಕರಿಮೆಣಸು, ನಗದು ಹಾಗೂ ಒಂದು ಜೀಪನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಬೂತನಹಳ್ಳಿ ನಿವಾಸಿ ಮೂರ್ತಿ, ಪಿರಿಯಾಪಟ್ಟಣ ತಾಲ್ಲೂಕಿನ ತರಿಕಲ್ಲು ಗ್ರಾಮದ ಕುಮಾರ, ಹರೀಶ, ಸಿದ್ದಾಪುರ ಬಳಿಯ ಬಾಡಗ ಬಾಣಂಗಾಲ ಗ್ರಾಮದ ಚಂದ್ರಶೇಖರ್ ಹಾಗೂ ತೂಚಮಕೇರಿ ನಿವಾಸಿ, ಕಳವು ಮಾಡಿದ ಕಾಫಿ ತೋಟದಲ್ಲಿ ಕೆಲಸ ಮಾಡಿಕೊಂಡಿರುವ ಎಂ.ಸಿ.ಕಾಳಪ್ಪ ಬಂಧಿತ ಆರೋಪಿಗಳಾಗಿದ್ದಾರೆ.

ಕಳವು ಮಾಡಿದ 800 ಕೆ.ಜಿ ಕರಿಮೆಣಸು, 1.67 ಲಕ್ಷ ರೂ. ನಗದು ಹಾಗೂ ಕಳವಿಗೆ ಬಳಸಿದ ಒಂದು ಜೀಪನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ಸುಂಟಿಕೊಪ್ಪ ಠಾಣಾ ವ್ಯಾಪ್ತಿಯ ಅತ್ತೂರು ನಲ್ಲೂರು ಗ್ರಾಮದ ಕಾಫಿ ತೋಟವೊಂದರ ತೋಟದ ಮನೆಯಿಂದ ಅ.17 ರಿಂದ ಅ.19ರ ನಡುವೆ ಸುಮಾರು 4ಲಕ್ಷ ರೂ. ಮೌಲ್ಯದ 800 ಕೆ.ಜಿ. ಕರಿಮೆಣಸನ್ನು ಮನೆಯ ಹೆಂಚು ತೆಗೆದು ಒಳ ಪ್ರವೇಶಿಸಿ ಕಳವು ಮಾಡಿರುವುದಾಗಿ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು. 

Similar News