ಹರಿಹರ | ದಲಿತರಿಗೆ ಕ್ಷೌರ ಮಾಡಲು ನಿರಾಕರಣೆ: ಆರೋಪ

ಬೂದಿಹಾಳ್ ಗ್ರಾಮಕ್ಕೆ ಪೊಲೀಸರ ಭೇಟಿ; ಕ್ರಮದ ಎಚ್ಚರಿಕೆ

Update: 2022-10-27 14:20 GMT

ಹರಿಹರ, ಅ.27: ದಲಿತ ಸಮುದಾಯದವರಿಗೆ ಕ್ಷೌರ ಮಾಡುತ್ತಿಲ್ಲ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬೂದಿಹಾಳ್ ಗ್ರಾಮಕ್ಕೆ ಪೊಲೀಸರು ಭೇಟಿ ನೀಡಿ ಸಮಸ್ಯೆ ಪರಿಹರಿಸಲು ಮಾತುಕತೆ ನಡೆಸಿದರು.

ದಲಿತರಿಗೆ ಕ್ಷೌರ ಮಾಡಲು ನಿರಾಕರಿಸಿದೆನ್ನಲಾದ ವ್ಯಕ್ತಿಯ ಅಂಗಡಿ ಬಳಿ ಹೋಗಿ ವಿಚಾರಣೆ ನಡೆಸಿದ ಮಲೆಬೆನ್ನೂರು ಪೊಲೀಸ್ ಠಾಣೆ ಪಿಎಸ್ಸೈ ರವಿಕುಮಾರ್, ಸ್ಥಳಕ್ಕೆ ಗ್ರಾಮದ ಸವರ್ಣೀಯರು ಹಾಗೂ ದಲಿತ ಸಮುದಾಯದ ಮುಖಂಡರನ್ನು ಕರೆಸಿ ಮಾತುಕತೆ ನಡೆಸಿದರು. ಯಾರೇ ಗ್ರಾಹಕರು ಬಂದರೂ ಕ್ಷೌರ ಮಾಡಲು ನಿರಾಕರಿಸಬಾರದು. ಜಾತಿ ಆಧರಿಸಿ ಕ್ಷೌರ ಮಾಡಲು ನಿರಾಕರಿಸಿದರೆ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ವೇಳೆ ಕ್ಷೌರ ಮಾಡುವ ವ್ಯಕ್ತಿ, ಇನ್ನು ಮುಂದೆ ಎಲ್ಲ ಸಮುದಾದವರಿಗೂ ಕ್ಷೌರ ಮಾಡುತ್ತೇನೆ ಎಂದು ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

''ಗ್ರಾಮದಲ್ಲಿ ಎರಡು ಕ್ಷೌರದಂಗಡಿ ಇವೆ. ಒಂದು ಅಂಗಡಿಯಲ್ಲಿ ಎಲ್ಲ ಸಮುದಾದವರಿಗೆ ಕ್ಷೌರ ಮಾಡುತ್ತಾರೆ, ಇನ್ನೊಂದು ಅಂಗಡಿಯಲ್ಲಿ ದಲಿತರಿಗೆ ಕ್ಷೌರ ಮಾಡಲು ನಿರಾಕರಿಸಲಾಗುತ್ತಿದೆ. ಈ ಕುರಿತು ಗ್ರಾಮದ ದಲಿತರು ಪೊಲೀಸರಿಗೆ ದೂರು ನೀಡಿದ್ದು, ಪಿಎಸ್ಸೈ ಎಚ್ಚರಿಕೆ ನೀಡಿದ್ದಾರೆ. ಇನ್ನು ಮುಂದೆ ಆ ಅಂಗಡಿಯಲ್ಲಿ ದಲಿತರಿಗೆ ಕ್ಷೌರ ಮಾಡುತ್ತಾರೆಯೇ ಎಂದು ಕಾದು ನೋಡುತ್ತೇವೆ''.

- ಬಸವರಾಜ್, ಬೂದಿಹಾಳ್ ಗ್ರಾಪಂ ಮಾಜಿ ಸದಸ್ಯ

----------------------------------------------------------

''ತಾಲೂಕಿನ ಹಲವು ಗ್ರಾಮಗಳಲ್ಲಿ ದಲಿತರಿಗೆ ಕ್ಷೌರ ಮಾಡಲು ನಿರಾಕರಿಸುವ ಆರೋಪ ಕೇಳಿ ಬಂದಿದೆ. ಅಸ್ಪಶ್ಯತೆ ವಿರುದ್ಧ ಜಾಗೃತಿ ಮೂಡಿಸುವ ಸಮಾಜ ಕಲ್ಯಾಣ ಇಲಾಖೆ, ತಾಲೂಕು, ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಬೇಕಾಗಿದೆ, ದೂರು ದಾಖಲಿಸುವುದು ಒಂದೇ ಪರಿಹಾರವಲ್ಲ. ಮನ ಪರಿವರ್ತನೆ ಮಾಡುವ ಮೂಲಕವೂ ಸಾಮಾಜಿಕ ಸಮಸ್ಯೆಯಾದ ಅಸ್ಪಶ್ಯತೆಯನ್ನು ನಿವಾರಿಸಬಹುದಾಗಿದೆ''.

- ಪಿ.ಜೆ.ಮಹಾಂತೇಶ್, ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ

► ಇದನ್ನೂ ಓದಿ... ಹಾವು ಕಚ್ಚಿ ಗರ್ಭಿಣಿ ಮೃತ್ಯು

Similar News