ಅ.28ರಿಂದ ಸುರತ್ಕಲ್ ಟೋಲ್‌ಗೇಟ್ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ: ಕಮಿಷನರ್ ಶಶಿಕುಮಾರ್

Update: 2022-10-27 15:52 GMT

ಸುರತ್ಕಲ್, ಅ.27: ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಟೋಲ್ ಗೇಟ್ ಸಮೀಪದ 200 ಮೀಟರ್  ವ್ಯಾಪ್ತಿಯಲ್ಲಿ ಅ.28ರ ಬೆಳಗ್ಗೆ 6ರಿಂದ ನವೆಂಬರ್ 3ರ ಸಂಜೆ 6ರವರೆಗೆ ಸೆಕ್ಷನ್ 144 ಪ್ರಕಾರ ನಿಷೇಧಾಜ್ಞೆ ವಿಧಿಸಿ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಆದೇಶಿಸಿದ್ದಾರೆ.

ಎನ್‌ಐಟಿಕೆ ಬಳಿಯ ಟೋಲ್ ಗೇಟ್ ನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸುರತ್ಕಲ್ ಹಾಗೂ ಸಮಾನ ಮನಸ್ಕ ಸಂಘಟಣೆ ವತಿಯಿಂದ ಅ.29ರಿಂದ ಟೋಲ್ ಗೇಟ್ ಬಳಿ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸುವುದಾಗಿ ಮಾಹಿತಿ ಇದ್ದು, ಈ ಸಮಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುವ, ಸಾರ್ವಜನಿಕರ ಸುರಕ್ಷತೆ ಕಾಪಾಡುವ ಮತ್ತು  ಟೋಲ್ ಗೇಟ್‌ನ ಭದ್ರತೆಯ ಹಿತದೃಷ್ಠಿಯಿಂದ ಸೆಕ್ಷನ್ ಜಾರಿ ಮಾಡಲಾಗಿದೆ‌ ಎಂದು ಕಮಿಷನರ್ ಶಶಿಕುಮಾರ್ ಆದೇಶದಲ್ಲಿ ತಿಳಿಸಿದ್ದಾರೆ.

ಸುರತ್ಕಲ್ ಟೋಲ್ ಗೇಟ್ ತೆರವು ಗೊಳಿಸಲು ಆಗ್ರಹಿಸಿ ಟೋಲ್ ಗೇಟ್ ತೆರವು ಹೋರಾಟ‌ ಸಮಿತಿ ಮತ್ತು ಸಮಾನ ಮನಸ್ಕ ಸಂಘಟನೆಗಳು ಅ.18ರಂದು ಟೋಲ್ ಗೇಟ್ ಗೆ ಮುತ್ತಿಗೆ ಹಾಕಿತ್ತು. ಆ ಬಳಿಕ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆಗೊಳಿಸಿದ್ದರು.

ಬಳಿಕ ಸುರತ್ಕಲ್ ಸಭಾಭವನದಲ್ಲಿ ಸಭೆ ನಡೆಸಿದ್ದ ಹೋರಾಟ ಸಮಿತಿ ಟೋಲ್ ಗೇಟ್ ತೆರವು ಗೊಳಿಸುವವರೆಗೂ ಅನಿರ್ಧಿಷ್ಟಾವಧಿ ಸತ್ಯಾಗ್ರಹ ನಡೆಸುವುದಾಗಿ ಪ್ರಕಟಿಸಿತ್ತು.

ಈ ನಡುವೆ ಗುರುವಾರ ಹೋರಾಟ ಸಮಿತಿಯೊಂದಿಗೆ ಜಿಲ್ಲಾಧಿಕಾರಿ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಭೆ ನಡೆಸಿ, ಟೋಲ್ ಗೇಟ್ ತೆರವಿಗೆ ಇನ್ನೂ ಹತ್ತು ದಿನಗಳ‌ ಅವಧಿ ನೀಡುವಂತೆ ಮನವಿ ಮಾಡಿದ್ದರು. ಇದನ್ನು ಸಮಿತಿ ಸಭೆಯಲ್ಲೇ ಖಂಡಿಸಿದ್ದು, ಸಮಿತಿ ನಿರ್ಧರಿಸಿದಂತೆ ನ.28ರಿಂದ ಆಹೋರಾತ್ರಿ ಧರಣಿ ನಡೆಸುವುದಾಗಿ ಘೋಷಿಸಿತ್ತು.

Similar News