ಕಣ್ಣು ಮುಚ್ಚಿ ಬಿಲ್ ಮಾಡಿದರೆ ಅಧಿಕಾರಿಗಳೇ ಹೊಣೆ: ಸಚಿವ ಆಚಾರ್ ಹಾಲಪ್ಪ ಎಚ್ಚರಿಕೆ

Update: 2022-10-28 13:41 GMT

ಧಾರವಾಡ, ಅ.28: ಅಭಿವೃದ್ಧಿ ಕಾರ್ಯಗಳಿಗಾಗಿ, ಮೂಲಭೂತ ಸೌಕರ್ಯಗಳ ನಿರ್ಮಾಣಕ್ಕಾಗಿ ಬಿಡುಗಡೆಯಾಗುವ ಅನುದಾನ ವೆಚ್ಚ ಮಾಡುವಲ್ಲಿ ಪಾರದರ್ಶಕತೆ ಇರಲಿ. ಕಾಮಗಾರಿ ಮತ್ತು ಕಾರ್ಯಕ್ರಮಗಳ ಬಿಲ್ ಮಾಡುವಲ್ಲಿ ನಿರ್ಲಕ್ಷ್ಯ ವಹಿಸಿ, ಕಣ್ಣು ಮುಚ್ಚಿದವರಂತೆ ಸಹಿ ಮಾಡಿದರೆ ಸಂಬಂಧಿಸಿದ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿಸಿ ಕ್ರಮ ಜರುಗಿಸಲಾಗುವುದೆಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಆಚಾರ್ ಹಾಲಪ್ಪ ಬಸಪ್ಪ ಎಚ್ಚರಿಕೆ ನೀಡಿದರು. 

ಶುಕ್ರವಾರ ನಗರದಲ್ಲಿರುವ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ 2022-23ನೇ ಸಾಲಿನ ಸೆಪ್ಟೆಂಬರ್ ಅಂತ್ಯಕ್ಕೆ ಕೊನೆಗೊಂಡಂತೆ 2ನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯ ಹಾಗೂ ಕೇಂದ್ರ ಸರಕಾರದಿಂದ ಕುಡಿಯುವ ನೀರು ಸರಬರಾಜು, ರಸ್ತೆ, ಸೇತುವೆ, ಶಾಲಾ ಕಾಲೇಜು ಕಟ್ಟಡ, ಕೃಷಿ, ಕೌಶಲ್ಯ ಅಭಿವೃದ್ಧಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಅನುಕೂಲವಾಗುವಂತೆ ಸಾಕಷ್ಟು ಅನುದಾನ ಬಿಡುಗಡೆಯಾಗುತ್ತಿದೆ. ಇಲಾಖಾ ಅಧಿಕಾರಿಗಳು ಸರಕಾರದ ಅನುದಾನವನ್ನು ನಿಯಮಾನುಸಾರ ಮತ್ತು ಪಾರದರ್ಶಕವಾಗಿ ಬಳಕೆ ಮಾಡಬೇಕು ಎಂದು ಸೂಚಿಸಿದರು.

ಕಾಮಗಾರಿಗಳ ಗುಣಮಟ್ಟವನ್ನು ಸಾಧ್ಯವಾದಷ್ಟು ಸ್ವತಃ ಕ್ಷೇತ್ರ ಭೇಟಿ ಮೂಲಕ ಖಾತರಿ ಪಡಿಸಿಕೊಳ್ಳಬೇಕು. ಕೆಳಹಂತದ ಅಧಿಕಾರಿಗಳ ಮೇಲೆ ಅವಲಂಬನೆಯಾಗಿ ಸಲ್ಲಿಕೆಯಾದ ಬಿಲ್‍ಗಳಿಗೆ ಸಹಿ ಮಾಡುವ ಪರಿಪಾಠ ನಿಲ್ಲಬೇಕು. ಕಾಮಗಾರಿ ಕಳಪೆಯಾದ ಬಗ್ಗೆ ಅಥವಾ ಅನುದಾನ ದುರುಪಯೋಗವಾದ ಬಗ್ಗೆ ಯಾವುದೇ ದೂರುಗಳು ಬಂದಲ್ಲಿ ತಕ್ಷಣ ಸಂಬಂಧಿಸಿದ ಅಧಿಕಾರಿಯನ್ನೇ ಹೊಣೆಗಾರರನ್ನಾಗಿಸಿ ಸೂಕ್ತ ಕ್ರಮ ಜರುಗಿಸಲಾಗುವುದೆಂದು ಅವರು ಎಚ್ಚರಿಕೆ ನೀಡಿದರು.

ಅತಿಯಾದ ಮಳೆಯಿಂದಾಗಿ ಜಿಲ್ಲೆಯಲ್ಲಿರುವ ರಾಷ್ಟ್ರೀಯ, ರಾಜ್ಯ, ಜಿಲ್ಲಾಮಟ್ಟದ ರಸ್ತೆಗಳು, ಜಿಲ್ಲಾ ಪಂಚಾಯತ್, ಲೋಕೋಪಯೋಗಿ ಇಲಾಖೆಯ ರಸ್ತೆಗಳು ಹಾಳಾಗಿದ್ದು, ಇವುಗಳ ತುರ್ತು ದುರಸ್ತಿ ಅಗತ್ಯವಿದೆ. ಸಂಬಂಧಿಸಿದ ಇಲಾಖೆಗಳು ಮುಂದಿನ ಒಂದು ವಾರದಲ್ಲಿ ಕರಾರುವಕ್ಕಾದ ಸಮೀಕ್ಷೆ ಮಾಡಿ ಜಿಲ್ಲಾಡಳಿತಕ್ಕೆ ವರದಿ ನೀಡಬೇಕೆಂದು ಆಚಾರ್ ಹಾಲಪ್ಪ ಬಸಪ್ಪ ಸೂಚಿಸಿದರು. 

ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ಧಾರವಾಡ ಜಿಲ್ಲೆಗೆ ಕೇಂದ್ರ ಸರಕಾರದಿಂದ ಅತಿ ಹೆಚ್ಚು ಯೋಜನೆಗಳನ್ನು, ಅನುದಾನಗಳನ್ನು ತರಲಾಗುತ್ತಿದೆ. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಜಿಲ್ಲೆಗೆ ಕಳೆದ ಸಾಲಿನಲ್ಲಿ 82 ಕೋಟಿ ರೂ.ಬೆಳೆ ಪರಿಹಾರ ಬಿಡುಗಡೆಯಾಗಿದೆ. ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರ ವಿವಿಧ ಉತ್ಪನ್ನಗಳನ್ನು ನೇರವಾಗಿ ರೈತರಿಂದ ಖರೀದಿಸಲು ಕ್ರಮ ವಹಿಸಲಾಗಿದೆ ಎಂದರು. 

ಸಭೆಯಲ್ಲಿ ಶಾಸಕರಾದ ಅಮೃತ ದೇಸಾಯಿ, ಸಿ.ಎಂ.ನಿಂಬಣ್ಣವರ, ಕುಸುಮಾವತಿ ಶಿವಳ್ಳಿ, ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿ.ಪಂ.ಸಿಇಒ ಡಾ.ಸುರೇಶ್ ಇಟ್ನಾಳ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Similar News