ಎಲ್ಲರೂ ಸಮಾನರೆಂಬ ಮನಸ್ಥಿತಿ ಬೆಳೆಸಿಕೊಂಡಾಗ ದೇಶಾಭಿಮಾನ: ಡಾ. ನಾಗರತ್ನ
ಮಂಗಳೂರು, ಅ. 29: ಎಲ್ಲರೂ ಸಮಾನರೆಂಬ ಮನಸ್ಥಿತಿ ನಾವು ಬೆಳೆಸಿಕೊಂಡಾಗ ದೇಶಾಭಿಮಾನ ಬೆಳೆಸಿ ಕೊಳ್ಳಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಡಾ. ನಾಗರತ್ನ ಕೆ.ಎ. ಅಭಿಪ್ರಾಯಿಸಿದ್ದಾರೆ.
ಅವರು ಇಂದು ನಗರದ ರೋಶನಿ ನಿಲಯ ಸಭಾಂಗಣದಲ್ಲಿ ಸಂವಾದ ಯುವಜನ ಮುನ್ನಡೆ- ಸಂವಾದ ಯುವಜನ ಸಂಪನ್ಮೂಲ ಕೇಂದ್ರದಿಂದ ಆಯೋಜಿಸಲಾದ ಯುವಜನ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕರ್ತವ್ಯ ಪಾಲನೆಗಾಗಿ ಯುವಜನರ ಅಭಿವ್ಯಕ್ತಿ ಎಂಬ ವಿಚಾರದಲ್ಲಿ ಮಾತನಾಡಿದ ಅವರು, ಕರ್ತವ್ಯಗಳ ಪಾಲನೆ ಮನೆಯಿಂದಲೇ ಆರಂಭ ಆಗಬೇಕಾಗಿದೆ ಎಂದರು.
ಸಮಾಜದಲ್ಲಿ ಆಗುವ ತಪ್ಪುಗಳ ಬಗ್ಗೆ ಧ್ವನಿ ಎತ್ತುವ ಮನೋಭಾವವನ್ನು ಯುವಜನರು ಹೊಂದಿರಬೇಕು. ಪ್ರಾಥಮಿಕ ಹಂತದಿಂದಲೇ ಇಂತಹ ವಿಚಾರಗಳನ್ನು ಕಲಿಸುವ ಮತ್ತು ಅರಿಯುವ ಪ್ರಕ್ರಿಯೆ ಆದಾಗ ಎಲ್ಲರೂ ಸಮಾನರೆಂಬ ಮನೋಭಾವ ಹುಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಿರಿಯ ಪತ್ರಕರ್ತ ತಾರನಾಥ ಗಟ್ಟಿ ಮಾತನಾಡಿ, ಕರಾವಳಿಯಲ್ಲಿ ನಾವು ಹಿಂದೆ ಕಾಣುತ್ತಿದ್ದ ಭಾತೃತ್ವ, ಸೌಹಾರ್ದತೆ ದೂರವಾಗಿದೆ. ಊರು ಮಾತ್ರವಲ್ಲದೆ, ಕಾಲೇಜು ಕ್ಯಾಂಪಸ್‌ನಲ್ಲಿಯೂ ಮನಸ್ಸುಗಳ ನಡುವೆ ಕಂದಕವೇರ್ಪಟ್ಟಿದೆ. ಈ ಬಗ್ಗೆ ಯುವಜನತೆ ಅರಿತುಕೊಂಡು ತಮ್ಮ ಕರ್ತವ್ಯ ಪಾಲನೆಯನ್ನು ನಿರ್ವಹಿಸಬೇಕಾಗಿದೆ ಎಂದು ಅವರು ಹೇಳಿದರು.
ರೋಶನಿ ನಿಲಯದ ಸ್ಕೂಲ್ ಆಫ್ ಸೋಷಲ್ ವರ್ಕ್ಸ್ ಕಾಲೇಜಿನ ಉಪ ಪ್ರಾಂಶುಪಾಲೆ ಡಾ. ಜೆನ್ನಿಸ್ ಮೇರಿ, ಸಂವಾದ ಯುವ ಮುನ್ನಡೆಯ ಸಿದ್ದೀಕ್, ಮಂಜುಳಾ ಉಪಸ್ಥಿತರಿದ್ದರು. ವಂದನಾ ಕಾರ್ಯಕ್ರಮ ನಿರೂಪಿಸಿದರು. ಪವಿತ್ರ ಜ್ಯೋತಿ ಪ್ರಾಸ್ತಾವಿಕವಾಗಿ ಮಾತನಾಡಿದರು.