ರಾಜ್ಯದ 29 ಪ್ರೌಢಶಾಲೆಗಳನ್ನು ಪದವಿ ಪೂರ್ವ ಕಾಲೇಜುಗಳನ್ನಾಗಿ ಉನ್ನತೀಕರಿಸಲು ಶಿಕ್ಷಣ ಇಲಾಖೆ ಚಿಂತನೆ

Update: 2022-11-01 17:43 GMT

ಬೆಂಗಳೂರು, ನ. 1: ರಾಜ್ಯದ 29 ಸರಕಾರಿ ಪ್ರೌಢ ಶಾಲೆಗಳನ್ನು ಪದವಿ ಪೂರ್ವ ಕಾಲೇಜುಗಳನ್ನಾಗಿ ಉನ್ನತೀಕರಿಸಲು ರಾಜ್ಯ ಸರಕಾರ ನಿರ್ಧರಿಸಿದ್ದು, ಅಗತ್ಯವಿರುವ ಮೂಲಭೂತ ಸೌಲಭ್ಯಗಳ ವಿವರಗಳನ್ನು ಸರಕಾರಕ್ಕೆ ಸಲ್ಲಿಸುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ. 

ಉತ್ತರ ಕರ್ನಾಟಕದ 25 ಪ್ರೌಢ ಶಾಲೆಗಳು ಸೇರಿ ರಾಜ್ಯದ 29 ಪ್ರೌಢ ಶಾಲೆಗಳಲ್ಲಿ ಪಿಯುಸಿ ತರಗತಿಗಳನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಆರಂಭಿಸಲಾಗುವುದು. ಇದಕ್ಕೆ ತಗಲುವ ಎಲ್ಲ ರೀತಿಯ ವೆಚ್ಚದ ಕ್ರೂಢೀಕೃತ ವಿವರಗಳನ್ನು ಕೂಡಲೇ ಸರಕಾರಕ್ಕೆ ಸಲ್ಲಿಸಬೇಕು ಎಂದು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ನಿರ್ದೇಶಕರಿಗೆ ಸೂಚಿಸಿದ್ದಾರೆ. 

ಯಾದಗಿರಿ ಜಿಲ್ಲೆಯ ದೇವತ್ಕಲ್ ಪ್ರೌಢಶಾಲೆ ಹಾಗೂ ಹುಣಸಗಿ ಪ್ರೌಢಶಾಲೆ, ಕೊಪ್ಪಳ ಜಿಲ್ಲೆಯ ಮುಸಲಾಪುರ, ಚಿಕ್ಕಡಂಕನಕಲ್ಲು, ಕವಲೂರು ಪ್ರೌಢಶಾಲೆಗಳನ್ನು ಪದವಿ ಪೂರ್ವ ಕಾಲೇಜುಗಳನ್ನಾಗಿ ಉನ್ನತೀಕರಿಸಲಾಗುತ್ತಿದೆ. ರಾಯಚೂರು ಜಿಲ್ಲೆಯ ಪಗಡದಿನ್ನಿ, ಬಳ್ಳಾರಿ ಜಿಲ್ಲೆಯ ಶಾನವಾಸಪುರ, ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ, ಪೀರಾಪುರ, ಬಾಗಲಕೋಟೆ ಜಿಲ್ಲೆಯ ಇಲಕಲ್, ಮುಗಳಖೋಡ, ಮಿರ್ಜಿ, ಢವಳೇಶ್ವರ, ಕುಲ್ಲಹಳ್ಳಿ ಪ್ರೌಢಶಾಲೆಗಳನ್ನು ಪದವಿ ಪೂರ್ವ ಕಾಲೇಜುಗಳನ್ನಾಗಿ ಉನ್ನತೀಕರಿಸಲಾಗುತ್ತಿದೆ.

ಬೆಳಗಾವಿ ಜಿಲ್ಲೆಯ ಶಿರಗೂರ, ಅಳಗವಾಡಿ, ಹಾರೋಗೇರಿ, ಮುಗಳಖೋಡ, ಚುಂಚನೂರು, ಕೆ.ಚಂದರಗಿ, ಶೀಗಿಹಳ್ಳಿ, ಕೆ.ಎಂ. ಹುಬ್ಬಳ್ಳಿ ಪಟ್ಟದಲ್ಲಿರುವ ಪ್ರೌಢಶಾಲೆಗಳನ್ನು ಪದವಿ ಪೂರ್ವ ಕಾಲೇಜುಗಳನ್ನಾಗಿ ಉನ್ನತೀಕರಿಸಲಾಗುತ್ತಿದೆ. ಉಡುಪಿ ಜಿಲ್ಲೆಯ ಸಿದ್ದಾಪುರ, ದಕ್ಷಿಣಕನ್ನಡ ಜಿಲ್ಲೆಯ ಹರೇಕಳ(ಆಜ್ಜಬ್ಬ) ದಾವಣಗೆರೆ ಜಿಲ್ಲೆಯ ಕಿರ್ಕಿ ಮತ್ತು ಹಾವೇರಿ ಜಿಲ್ಲೆಯ ದುಂಡಲಿ ಗ್ರಾಮದಲ್ಲಿರುವ ಪ್ರೌಢಶಾಲೆ ಪದವಿ ಪೂರ್ವ ಕಾಲೇಜುಗಳನ್ನಾಗಿ ಉನ್ನತೀಕರಿಸಲಾಗುತ್ತಿದೆ.

Similar News