ಫಿಫಾ ವಿಶ್ವಕಪ್‌ನಲ್ಲಿ ಮೆಸ್ಸಿ ಆಟವನ್ನು ನೋಡಲು ಕಣ್ಣೂರಿನಿಂದ ಕತರ್‌ಗೆ ಏಕಾಂಗಿ ಯಾತ್ರೆ ಕೈಗೊಂಡ ನಾಜಿರಾ ನೌಶಾದ್

Update: 2022-11-03 10:35 GMT

ಮುಂಬೈ: ಕೇರಳ ಮೂಲದ 34 ವಷದ ನಾಜಿರಾ ನೌಶಾದ್ (Najira Noushad) ಎಂಬವರು ಕೇರಳದ ಕಣ್ಣೂರಿನಿಂದ  ಕತರ್‌ನ ದೋಹಾಗೆ ಏಕಾಂಗಿ ಯಾತ್ರೆಯನ್ನು ಆರಂಭಿಸಿದ್ದಾರೆ. ಈ ತಿಂಗಳು ದೋಹಾದಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್‌ (FIFA World Cup Qatar) ಪಂದ್ಯಾವಳಿ ವೀಕ್ಷಿಸುವುದೇ ಅವರ ಉದ್ದೇಶ. ಮಹಿಳೆಯರಲ್ಲಿ ಇಚ್ಛಾ ಶಕ್ತಿಯೊಂದಿದ್ದರೆ ಅವರು ಏನು ಬೇಕಾದರೂ ಸಾಧಿಸಬಹುದೆಂಬುದನ್ನು ಮಾಡಿ ತೋರಿಸುವ ಛಲದೊಂದಿಗೆ ಅವರು ಈ ಏಕಾಂಗಿ ಯಾತ್ರೆಯನ್ನು ಕೈಗೊಂಡಿದ್ದಾರೆ ಎಂದು thehindu.com ವರದಿ ಮಾಡಿದೆ. 

ಮೂಲತಃ ಒಮನ್‌ನಲ್ಲಿ ತಮ್ಮ ಪತಿ ಹಾಗೂ ಮಕ್ಕಳೊಂದಿಗೆ ಇರುವ ನಾಜಿರ ಈ ಯಾತ್ರೆ ಕೈಗೊಳ್ಳಲೆಂದೇ ತಾಯ್ನಾಡಿಗೆ ಮರಳಿ ತಮ್ಮ ಹುಟ್ಟೂರಾದ ಕಣ್ಣೂರಿನಿಂದ ಅಕ್ಟೋಬರ್‌ 15 ರಂದು ತಮ್ಮ ಯಾತ್ರೆಯನ್ನು ತಮ್ಮ ಮಹೀಂದ್ರ ಥಾರ್‌ ವಾಹನದಲ್ಲಿ ಆರಂಭಿಸಿದ್ದಾರೆ. ಕೇರಳ ಸಾರಿಗೆ ಸಚಿವೆ ಆಂತೊನಿ ರಾಜು ಅವರ ಯಾತ್ರೆಗೆ ಹಸಿರು ನಿಶಾನೆ ತೋರಿಸಿದ್ದರು.

ಅಲ್ಲಿಂದ ಕಲ್ಲಿಕೋಟೆ, ಕೊಚ್ಚಿ, ಸೇಲಂ, ಬೆಂಗಳೂರು, ಪುಣೆ ಮಾರ್ಗವಾಗಿ ಅವರೀಗ ಹಂಪಿಗೆ ಬಂದಿದ್ದಾರೆ. ತಮ್ಮ ವಾಹನ 'ಓಲು' ಅನ್ನು ಅವರು ಮುಂಬೈಯಿಂದ ಒಮನ್‌ಗೆ ವಿಮಾನ ಮೂಲಕ ಸಾಗಿಸಿ ನಂತರ ದುಬೈಯಿಂದ ಕತರ್‌ಗೆ ತಮ್ಮ ವಾಹನದಲ್ಲಿಯೇ ಫಿಫಾ ಪಂದ್ಯಾವಳಿ ನಡೆಯುವ ಸ್ಥಳದತ್ತ ಸಾಗಲಿದ್ದಾರೆ. ಫುಟ್ಬಾಲ್‌ ಪ್ರೇಮಿಯಾಗಿರುವ ನಾಜಿರಾ ತಮ್ಮ ಮೆಚ್ಚಿನ ಆಟಗಾರ ಲಿಯೊನೆಲ್‌ ಮೆಸ್ಸಿ ಅವರು ಡಿಸೆಂಬರ್‌ 1 ರಂದು ತಮ್ಮ ಕೊನೆಯ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಆಡುವುದನ್ನು ನೋಡಲು ಉತ್ಸುಕರಾಗಿದ್ದಾರೆ.

ಪ್ರತಿದಿನ ಸುಮಾರು 600 ಕಿಮೀ ದೂರ ಕ್ರಮಿಸುವ ಅವರ ಪಯಣ ಬೆಳಿಗ್ಗೆ  6 ಗಂಟೆಗೆ ಆರಂಭಗೊಳ್ಳುತ್ತದೆ. ಕೆಲವೊಮ್ಮೆ ರಾತ್ರಿ ಕೂಡ ವಾಹನ ಚಲಾಯಿಸುವುದನ್ನು ಅವರು ಇಷ್ಟಪಡುತ್ತಾರೆ. ಬೆಳಗ್ಗೆ 11 ಗಂಟೆಯ ಹೊತ್ತಿಗೆ ಎಲ್ಲಿಯಾದರೂ ರಸ್ತೆಬದಿಯಲ್ಲಿ ವಾಹನ ನಿಲ್ಲಿಸಿ ಅದರ ಹಿಂಭಾಗದಲ್ಲಿ ಇರಿಸಿರುವ ಪುಟ್ಟ ಗ್ಯಾಸ್‌ ಸ್ಟವ್‌ ತೆಗೆದು ಕ್ಷಿಪ್ರವಾಗಿ ಚಹಾ ತಯಾರಿಸಿ ಅಲ್ಲಿರುವವರಿಗೆ ಕೂಡ ನೀಡುತ್ತಾರೆ. ನಂತರ ತಮ್ಮ ಸರಳ ಊಟ, ಹೆಚ್ಚಾಗಿ ಉಪ್ಪಿಟ್ಟು, ಪುಟ್ಟು ಅಥವಾ ಘೀ ರೈಸ್‌ ತಯಾರಿಸುತ್ತಾರೆ. ಅವರ ವಾಹನದ ಹಿಂಭಾಗದಲ್ಲಿ ಅವರಿಗೆ ಅಗತ್ಯವಿರುವ ವಸ್ತುಗಳೆಲ್ಲವೂ ಹಾಗೂ ಒಂದು ಹಾಸಿಗೆ ಕೂಡ ಇದೆ.

ಈ ಸೋಲೋ ಯಾತ್ರೆಯನ್ನು ನಾಜಿರಾ ಆರಂಭಿಸಿದ ಮೊದಲ ದಿನಗಳಲ್ಲಿ ಎಲ್ಲಾ ಖರ್ಚುಗಳನ್ನು ಅವರ ಪತಿಯೇ ನಿಭಾಯಿಸುತ್ತಿದ್ದರೂ ಈಗ ತಮ್ಮ ಯುಟ್ಯೂಬ್‌ ಚಾನಲ್‌ ಹಾಗೂ ಪ್ರವರ್ತಕರ ಸಹಾಯದಿಂದ ತಮ್ಮ ಖರ್ಚನ್ನು ತಾವೇ ನಿಭಾಯಿಸುತ್ತಾರೆ. ಗೃಹಿಣಿಯಾಗಿರುವ ಅವರು  ತಮ್ಮ ಕನಸನ್ನು ನನಸಾಗಿಸಲು ಈ ಯಾತ್ರೆ ಕೈಗೊಂಡಿದ್ದು ಮುಂದೆ ತಮ್ಮ ಮಕ್ಕಳಿಗೆ ತಾವೇ ಆದರ್ಶಪ್ರಾಯರಾಗಿರಬೇಕೆಂದು ಬಯಸುತ್ತಾರೆ ಎಂದು thehindu.com ವರದಿ ಮಾಡಿದೆ. 

ಇದನ್ನೂ ಓದಿ: ರಕ್ತದ ಮಡುವಿನಲ್ಲಿ ಬಿದ್ದಿರುವ ರೋಗಿಯ ಸುತ್ತಲೂ ಓಡಾಡುತ್ತಿರುವ ಬೀದಿ ನಾಯಿ: ಉ.ಪ್ರ. ಆಸ್ಪತ್ರೆಯ ಆಘಾತಕಾರಿ ವೀಡಿಯೋ

Similar News