ಹಲವು ಹೊಸ ಫೀಚರ್ಸ್‌ ಬಿಡುಗಡೆಗೊಳಿಸಿದ ವಾಟ್ಸ್ ಆ್ಯಪ್‌

Update: 2023-06-30 05:06 GMT

ನ್ಯೂಯಾರ್ಕ್‌: ವಾಟ್ಸ್ ಆ್ಯಪ್‌ (WhatsApp) ತನ್ನ ಬಳಕೆದಾರರಿಗೆ ಇಂದಿನಿಂದ ಕಮ್ಯುನಿಟೀಸ್‌ ಎಂಬ ಹೊಸ ಫೀಚರ್‌ ಆರಂಭಿಸಿದ್ದು ಸಮಾನ ಹಿತಾಸಕ್ತಿಯ ಜನರನ್ನು ಒಂದೇ ವೇದಿಕೆಯಡಿ ತರುವ ಯತ್ನವಾಗಿ ಈ ಫೀಚರ್‌ ಅನ್ನು ಪರಿಚಯಿಸಲಾಗಿದೆ.

ಕಮ್ಯುನಿಟೀಸ್‌ ಫೀಚರ್‌ ಜೊತೆಗೆ ಇನ್-ಚಾಟ್‌ ಪೋಲ್‌ಗಳನ್ನು ನಡೆಸಲು, 32 ಜನರಿರುವ ವೀಡಿಯೋ ಕಾಲಿಂಗ್‌ ಮಾಡಲು ಹಾಗೂ 1024 ಮಂದಿಯಷ್ಟು ಸದಸ್ಯರಿರಬಹುದಾದ ವಾಟ್ಸ್ ಆ್ಯಪ್‌ ಗ್ರೂಪ್‌ ಆರಂಭಿಸಲು ಕೂಡ ಅನುಮತಿಸುವ ಫೀಚರ್ಸ್‌ ಪರಿಚಯಿಸಿದೆ.

ಈ ಮಾಹಿತಿಯನ್ನು ಸ್ವತಃ ವಾಟ್ಸ್ ಆ್ಯಪ್‌ ಒಡೆತನ ಹೊಂದಿರುವ ಮೆಟಾ ಕಂಪನಿಯ ಮುಖ್ಯಸ್ಥ ಮಾರ್ಕ್‌ ಝುಕರ್ ಬರ್ಗ್‌ ( Meta CEO Mark Zuckerberg) ನೀಡಿದ್ದಾರೆ.

ವಾಟ್ಸ್ ಆ್ಯಪ್‌ ಕಮ್ಯುನಿಟೀಸ್‌ ಮೂಲಕ ಸಮಾನಮನಸ್ಕ ಪ್ರತ್ಯೇಕ ಗುಂಪುಗಳನ್ನು ಒಂದೇ ವೇದಿಕೆಯಡಿ ತರಬಹುದಾಗಿದೆಯಲ್ಲದೆ ಅಪ್‌ಡೇಟ್‌ಗಳನ್ನು ಇಡೀ ಕಮ್ಯುನಿಟಿಗೆ ಕಳುಹಿಸಬಹುದಾಗಿದೆ ಹಾಗೂ ಸ್ವೀಕರಿಸಬಹುದಾಗಿದೆ. ಈ ಫೀಚರ್‌ ಭಾಗವಾಗಿ ಅಡ್ಮಿನ್‌ಗಳಿಗೆಂದು ಕೆಲವು ಟೂಲ್‌ಗಳಿದ್ದು ಸಂದೇಶಗಳನ್ನು ಎಲ್ಲರಿಗೂ ಕಳುಹಿಸಲಾಗುತ್ತಿರುವ ಕುರಿತು ಅಧಿಸೂಚನೆಗಳನ್ನು ನೀಡಲು ಹಾಗೂ ಯಾವ ಗುಂಪುಗಳನ್ನು ಸೇರಿಸಬಹುದೆಂಬುದನ್ನು ನಿರ್ಧರಿಸಲು ಅವಕಾಶ ನೀಡುತ್ತದೆ.

ತಮ್ಮ ಆಂಡ್ರಾಯ್ಡ್‌ ಫೋನ್‌ನ ಚಾಟ್‌ ಮೇಲ್ಭಾಗದಲ್ಲಿರುವ ಕಮ್ಯುನಿಟೀಸ್‌ ಟ್ಯಾಬ್‌ ಅನ್ನು ಬಳಕೆದಾರರು ಈ ಫೀಚರ್‌ ಬಳಸಲು ಟ್ಯಾಪ್‌ ಮಾಡಬೇಕಿದೆ. ಐಒಎಸ್‌ ಸಾಧನಗಳ ಬಳಕೆದಾರರು ತಮ್ಮ ಸ್ಕ್ರೀನ್‌ನ ಕೆಳಭಾಗದಲ್ಲಿರುವ ಕಮ್ಯುನಿಟೀಸ್‌ ಟ್ಯಾಬ್‌ ಟ್ಯಾಪ್‌ ಮಾಡಬೇಕಿದೆ.

ಇನ್-ಚಾಟ್‌ ಪೋಲ್‌ ಭಾಗವಾಗಿ ಬಳಕೆದಾರರು ಪೋಲ್‌ಗಾಗಿ ಪ್ರಶ್ನೆಗಳನ್ನು ರಚಿಸಿ ಅದರೊಂದಿಗೆ 12 ಸಂಭಾವ್ಯ ಉತ್ತರಗಳನ್ನು ಆಪ್‌ನೊಳಗೆ ಪ್ರತ್ಯೇಕ ಸ್ಕ್ರೀನ್‌ ಮೂಲಕ ಮಾಡಬಹುದಾಗಿದೆ. ಈ ಫೀಚರ್‌ ಕಾರ್ಯಾತ್ಮಕತೆಯ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ದೊರಕಬೇಕಿದೆ.

1024 ಮಂದಿಯೊಂದಿಗೆ ಏಕಕಾಲದಲ್ಲಿ ಗ್ರೂಪ್‌ ಚಾಟ್‌, 32 ಮಂದಿಯೊಂದಿಗೆ ವೀಡಿಯೋ ಕಾಲ್.‌

ಇದರ ಹೊರತಾಗಿ ದೊಡ್ಡ ಗಾತ್ರದ ಫೈಲ್‌ ಹಂಚಿಕೆ, ಎಮೋಜಿ ರಿಯಾಕ್ಷನ್‌ಗಳು, ಅಡ್ಮಿನ್‌ ಡಿಲೀಟ್‌ ಫೀಚರ್‌ಗಳನ್ನೂ ಪರಿಚಯಿಸಲಾಗುತ್ತಿದೆ.

ಇದನ್ನೂ ಓದಿ: ಫಿಫಾ ವಿಶ್ವಕಪ್‌ನಲ್ಲಿ ಮೆಸ್ಸಿ ಆಟವನ್ನು ನೋಡಲು ಕಣ್ಣೂರಿನಿಂದ ಕತರ್‌ಗೆ ಏಕಾಂಗಿ ಯಾತ್ರೆ ಕೈಗೊಂಡ ನಾಜಿರಾ ನೌಶಾದ್

Similar News