ಬಿಜೆಪಿಯಲ್ಲಿ ಕೇಂದ್ರ ಸರಕಾರದ ಎದುರು ನಿಂತು ರಾಜ್ಯದ ಪರವಾಗಿ ಮಾತನಾಡುವ ಒಬ್ಬ ಸಂಸದರೂ ಇಲ್ಲ: ಸಿದ್ದರಾಮಯ್ಯ ಕಿಡಿ

Update: 2022-11-07 17:27 GMT

ಬೆಂಗಳೂರು, ನ.7: ಬಿಜೆಪಿ ಸರಕಾರಕ್ಕೆ ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ವಿಚಾರದಲ್ಲಿ ಯಾವುದೇ ಬದ್ಧತೆ, ಸಂಕಲ್ಪಗಳಿಲ್ಲದಿರುವಾಗ ‘ಜನಸಂಕಲ್ಪ ಯಾತ್ರೆ’ಗಳನ್ನು ಮಾಡುವುದು ಹಾಸ್ಯಾಸ್ಪದ ಮತ್ತು ನಾಡಿಗೆ ಮಾಡುವ ದ್ರೋಹ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಗಾರಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೇಂದ್ರವನ್ನು ಒತ್ತಾಯಿಸಿ ಅಗತ್ಯವಿದ್ದರೆ ಪ್ರತಿಭಟಿಸಿ ರಾಜ್ಯಕ್ಕೆ ಬರಬೇಕಾದ ಅನುದಾನಗಳನ್ನು ತಂದು ಅಭಿವೃದ್ಧಿಗೆ ವಿನಿಯೋಗಿಸಬೇಕು. ಬಿಜೆಪಿಯಲ್ಲಿ ಕೇಂದ್ರ ಸರಕಾರದ ಎದುರು ನಿಂತು ರಾಜ್ಯದ ಪರವಾಗಿ ಧೈರ್ಯವಾಗಿ ಮಾತನಾಡುವ ಒಬ್ಬ ಸಂಸದರೂ ಇಲ್ಲ ಎಂದು ಟೀಕಿಸಿದ್ದಾರೆ. 

ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕರ್ನಾಟಕಕ್ಕೆ ಎಲ್ಲೆಲ್ಲಿ ಅನ್ಯಾಯ ಮಾಡಬಹುದು ಎನ್ನುವುದನ್ನು ಯೋಜಿಸುವುದರಲ್ಲಿಯೇ ಅವರ ಸಮಯ ಮುಗಿದು ಹೋಗುತ್ತಿದೆ. ಪ್ರಹ್ಲಾದ್ ಜೋಶಿ ನನ್ನನ್ನು ಹೇಗೆ ಟೀಕಿಸಬಹುದು ಎನ್ನುವುದರಲ್ಲೇ ಸಮಯ ಕಳೆಯುತ್ತಿದ್ದಾರೆ ಎಂದು ಸಿದ್ದರಾಮಯ್ಯ ಕಿಡಿಗಾರಿದ್ದಾರೆ.

ಈ ವರ್ಷ 20,352 ಕೋಟಿ ರೂ.ಕೇಂದ್ರವು ರಾಜ್ಯಕ್ಕೆ ಕೇಂದ್ರ ಪುರಸ್ಕೃತ ಯೋಜನೆಗಳಿಗಾಗಿ ನೀಡಬೇಕಾಗಿತ್ತು. ಅಕ್ಟೋಬರ್ ಅಂತ್ಯದ ವೇಳೆಗೆ 5,083 ಕೋಟಿ ರೂ. ಬಿಡುಗಡೆ ಮಾಡಿದೆ. ವಸತಿ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಉನ್ನತ ಶಿಕ್ಷಣ ಇಲಾಖೆಗೆ ಒಂದು ರೂಪಾಯಿಯನ್ನೂ ಬಿಡುಗಡೆ ಮಾಡಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಸಮಾಜ ಕಲ್ಯಾಣ ಇಲಾಖೆಗೆ 346 ಕೋಟಿ ರೂ.ಪೈಕಿ 7 ಕೋಟಿ ರೂ.. ಕೃಷಿ ಇಲಾಖೆಗೆ 613 ಕೋಟಿ ರೂ. ಪೈಕಿ 136 ಕೋಟಿ ರೂ. ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಗೆ 472.5 ಕೋಟಿ ರೂ.ಪೈಕಿ 3.68 ಕೋಟಿ ರೂ., ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ 2152 ಕೋಟಿ ರೂ. ಪೈಕಿ 382 ಕೋಟಿ ರೂ. ಬಿಡುಗಡೆಯಾಗಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ, ಜಲಸಂಪನ್ಮೂಲ ಇಲಾಖೆಗೆ ಒಂದು ರೂಪಾಯಿಯನ್ನೂ ಕೊಟ್ಟಿಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

ರಾಜ್ಯ ಸರಕಾರದ ಸಂಕಲ್ಪ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಕಮಿಷನ್ ದಂಧೆ, ಸರಕಾರಿ ಹುದ್ದೆಗಳ ನೇಮಕಾತಿ, ವರ್ಗಾವಣೆ, ಭಡ್ತಿ ಮುಂತಾದವುಗಳಲ್ಲಿ ಭ್ರಷ್ಟಾಚಾರ ಎಷ್ಟೆಷ್ಟು ನಡೆಸಬಹುದು ಎನ್ನುವುದಕ್ಕೆ ಮಾತ್ರ ಇದೆಯೇ ಹೊರತು, ಜನರ ಕಲ್ಯಾಣ ಮಾಡಬೇಕೆಂಬ ಬಗ್ಗೆ ಇಲ್ಲ ಎಂದು ಅವರು ಟೀಕಿಸಿದ್ದಾರೆ. 

ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ 1.5 ಲಕ್ಷ ಕೋಟಿಯಷ್ಟು ಅನುದಾನ ಬರುವುದಾಗಿ ಒಡಂಬಡಿಕೆಯಾದರೂ, 9.82 ಲಕ್ಷ ಕೋಟಿ ಅನುದಾನ ಬರುತ್ತದೆ ಎಂದು ಸುಳ್ಳು ಹೇಳಿದೆ. ತೆಂಗಿನ ಕಾಯಿ ಮತ್ತು ಕೊಬ್ಬರಿ ಬೆಲೆ ಒಂದೇ ಸಮನೆ ಕುಸಿಯುತ್ತಿದೆ. ಅಡಿಕೆ, ಕಾಫಿ, ಮೆಣಸು ಬೆಳೆಯುವವರೂ ಸಂಕಷ್ಟದಲ್ಲಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಕಳೆದ ಐದು ವರ್ಷಗಳಲ್ಲಿ 1.36 ಕೋಟಿ ಎಕರೆ ಬೆಳೆ ಹಾಳಾಗಿದೆ. 2.62 ಲಕ್ಷ ಮನೆಗಳಿಗೆ ಹಾನಿಯಾಗಿದೆ. ರೈತರಿಗೆ ಸಮರ್ಪಕ ಪರಿಹಾರ ಕೊಟ್ಟಿಲ್ಲ. ವಿಶ್ವ ಬ್ಯಾಂಕಿನ ಮುಂದೆ ನೆರವಿಗಾಗಿ ಕೋರಿಕೊಳ್ಳುವಷ್ಟರ ಮಟ್ಟಿಗೆ ಕೇಂದ್ರ-ರಾಜ್ಯ ಸರಕಾರಗಳು ದಿವಾಳಿಯಾಗಿವೆ. ಬೆಂಗಳೂರು ಮತ್ತು ರಾಜ್ಯದ ರಸ್ತೆಗಳಲ್ಲಿ ಗುಂಡಿಬಿದ್ದು ಮರಣ ಹೊಂದುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ರಸ್ತೆಗಳ ಗುಂಡಿ ಮುಚ್ಚುವ ಯೋಗ್ಯತೆಯೂ ಸರಕಾರಕ್ಕೆ ಇಲ್ಲವಾಗಿದೆ ಎಂದು ಅವರು ಹೇಳಿದ್ದಾರೆ.

Similar News