ಕರಾವಳಿ ಜಿಲ್ಲೆಗಳಲ್ಲಿ ಪಡಿತರ ಮೂಲಕ ಕುಚಲಕ್ಕಿ ವಿತರಣೆ: ಸಚಿವ ಕೋಟ ಶ್ರೀನಿವಾಸ ಪೂಜಾರಿ

Update: 2022-11-10 13:48 GMT

ಬೆಂಗಳೂರು, ನ.10: ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡದಲ್ಲಿ ಮುಂದಿನ ಸಾಲಿನ ಜ.1ರಿಂದ ಪಡಿತರ ಮೂಲಕ ಅಕ್ಕಿ ಬದಲು ಕುಚಲಕ್ಕಿ ವಿತರಿಸಲು ನಿರ್ಧರಿಸಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರಾವಳಿ ಜಿಲ್ಲೆಗಳ ಜನರು ಪಡಿತರ ಮೂಲಕ ಕುಚಲಕ್ಕಿಯನ್ನು ನೀಡುವಂತೆ ಬಹಳ ಹಿಂದಿನಿಂದಲೂ ಬೇಡಿಕೆ ಇಟ್ಟಿದ್ದರು. ಇದನ್ನು ಗಮನಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕರವಾಳಿ ಜಿಲ್ಲೆಗಳಲ್ಲಿ ಕುಚಲಕ್ಕಿ ವಿತರಣೆಗೆ ಸಹಮತಿ ವ್ಯಕ್ತಪಡಿಸಿದ್ದಾರೆ ಎಂದರು.

ಕೇಂದ್ರ ಸರಕಾರವು ಪ್ರತಿ ಕ್ವಿಂಟಾಲ್ ಭತ್ತಕ್ಕೆ 2040 ರೂ.ಬೆಂಬಲ ಬೆಲೆ ನಿಗದಿ ಮಾಡಿದೆ. ಆದರೆ, ರೈತರು ಈ ದರದಲ್ಲಿ ಭತ್ತ ನೀಡಲು ಸಿದ್ಧರಿಲ್ಲ. ಆದುದರಿಂದ, ರಾಜ್ಯ ಸರಕಾರವು ಪ್ರತಿ ಕ್ವಿಂಟಾಲ್ ಭತ್ತಕ್ಕೆ ಹೆಚ್ಚುವರಿಯಾಗಿ 500 ರೂ.ಸೇರಿಸಿ, 2540 ರೂ.ನೀಡಿ ಭತ್ತ ಖರೀದಿ ಮಾಡಲಿದೆ. ಇದರಿಂದ ರಾಜ್ಯ ಸರಕಾರಕ್ಕೆ 132 ಕೋಟಿ ರೂ.ಹೊರೆಯಾಗಲಿದೆ. ಡಿ.1ರಿಂದಲೆ ಭತ್ತ ಖರೀದಿ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಈ ಮೂರು ಜಿಲ್ಲೆಗಳಲ್ಲಿ ವರ್ಷ ಪೂರ್ತಿ ಕುಚಲಕ್ಕಿ ಸಿಗುವುದು ಕಷ್ಟ. ಆದುದರಿಂದ, ರಾಜ್ಯದ ಬೇರೆ ಜಿಲ್ಲೆಗಳಿಂದಲೂ ಭತ್ತ ಖರೀದಿ ಮಾಡಲು ಕೇಂದ್ರ ಸರಕಾರ ಅನುಮತಿ ನೀಡಿದೆ. 15 ಲಕ್ಷ ಕ್ವಿಂಟಾಲ್ ಭತ್ತ ಖರೀದಿ ಮಾಡುವ ಗುರಿಯಿದೆ. ಇದರಿಂದ, ಸುಮಾರು 9 ಲಕ್ಷ ಕ್ವಿಂಟಾಲ್ ಅಕ್ಕಿ ಸಿಗುತ್ತದೆ. ಮುಂದಿನ ಸಾಲಿನ ಜ.1ರಿಂದ ಈ ಮೂರು ಜಿಲ್ಲೆಗಳಲ್ಲಿ ಕುಚಲಕ್ಕಿ ವಿತರಣೆ ಮಾಡಲಾಗುವುದು ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿನ ವಸತಿ ಶಾಲೆಗಳಲ್ಲಿ 6ನೆ ತರಗತಿಯ ವಿದ್ಯಾರ್ಥಿನಿಯರಿಗೆ ಓಬವ್ವ ಆತ್ಮರಕ್ಷಣೆ ಕಲೆ ಕಾರ್ಯಕ್ರಮ ಅಂಗವಾಗಿ ಕರಾಟೆ ಕಲಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಅಗತ್ಯವಿರುವ ಸಮವಸ್ತ್ರ ಖರೀದಿಸಲು 18 ಕೋಟಿ ರೂ.ಅಗತ್ಯವಿದೆ. ಅಂತರ್ ಜಾತಿಯ ವಿವಾಹದ ಪ್ರೋತ್ಸಾಹ ಧನ 176 ಕೋಟಿ ರೂ.ಬಾಕಿ ಇದ್ದು, ಅದನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

Similar News