ಸಾಗರ | ಮೊಬೈಲ್ ಚಾರ್ಜ್‌ಗೆ ನಿರಾಕರಿಸಿರುವ ಆರೋಪ: ಹಲ್ಲೆಗೊಳಗಾಗಿದ್ದ ವ್ಯಕ್ತಿ ಮೃತ್ಯು

Update: 2022-11-10 18:19 GMT

ಸಾಗರ, ನ.10: ಮೊಬೈಲ್‌ಗೆ ಚಾರ್ಜ್ ಮಾಡಿಕೊಡಲು ನಿರಾಕರಿಸಿರುವ ಆರೋಪದಲ್ಲಿ ನಡೆದ ಜಗಳದಲ್ಲಿ ಗಾಯಗೊಂಡಿದ್ದ ವ್ಯಕ್ತಿಯು ಮೃತಪಟ್ಟ ಘಟನೆ ಕಾರ್ಗಲ್ ಸಮೀಪದ ಮುರಳ್ಳಿ ಗ್ರಾಮದಲ್ಲಿ ವರದಿಯಾಗಿದೆ.

ಮುರಳ್ಳಿಯ ತಿಮ್ಮಪ್ಪ(52) ಸ್ನೇಹಿತನಿಂದಲೇ ಹಲ್ಲೆಗೊಳಗಾಗಿ ಮೃತಪಟ್ಟ ವ್ಯಕ್ತಿ ಎಂದು ತಿಳಿದು ಬಂದಿದೆ. ಆರೋಪಿ ಸಿದ್ದು ಎಂಬಾತನನ್ನು ಅಸಹಜ ಸಾವಿನ ಪ್ರಕರಣ ದಾಖಲಿಸಿ, ಪೊಲೀಸರು ಬಂಧಿಸಿದ್ದಾರೆ.

ಘಟನೆ ಹಿನ್ನೆಲೆ: ಮುರಳ್ಳಿ ಗ್ರಾಮದ ತನ್ನ ಮನೆಯಲ್ಲಿ ವಿದ್ಯುತ್ ಸಮಸ್ಯೆಯಿದ್ದ ಹಿನ್ನೆಲೆಯಲ್ಲಿ ಸಿದ್ದು ಅದೇ ಊರಿನ ಸ್ನೇಹಿತ ತಿಮ್ಮಪ್ಪ ಅವರ ಮನೆಗೆ ಮೊಬೈಲ್ ಚಾರ್ಜ್ ಮಾಡಿಕೊಳ್ಳಲು ಸೋಮವಾರ ರಾತ್ರಿ ತೆರಳಿದ್ದನು. ಆದರೆ, ತಿಮ್ಮಪ್ಪ ಮೊಬೈಲ್ ಚಾರ್ಜ್ ಮಾಡಿಕೊಡಲು ನಿರಾಕರಿಸಿದ್ದಾನೆನ್ನಲಾಗಿದೆ. ಇದು ಮಾತಿಗೆ ಮಾತು ಬೆಳೆಯಲು ಕಾರಣವಾಗಿ, ಆರೋಪಿ ಸಿದ್ದು ತಿಮ್ಮಪ್ಪ ಅವರ ತಲೆಗೆ ದೊಣ್ಣೆಯಿಂದ ಹೊಡೆದಿದ್ದಾನೆ ಎಂದು ತಿಳಿದು ಬಂದಿದೆ.

ಕಣ್ಣಿಗೆ ಬಲವಾದ ಏಟು ಬಿದ್ದರೂ ಸಾರಿಗೆ ವ್ಯವಸ್ಥೆಯ ಕೊರತೆಯ ಹಿನ್ನೆಲೆಯಲ್ಲಿ ತಿಮ್ಮಪ್ಪ ಅವರನ್ನು ಮಂಗಳವಾರ ಚಿಕಿತ್ಸೆಗೆ ಬ್ಯಾಕೋಡು ಪ್ರಾಥಮಿಕ ಆರೋಗ್ಯ ಕೇಂದ್ರ, ಅಲ್ಲಿಂದ ಸಾಗರ ಮತ್ತು ನಂತರದಲ್ಲಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಪರಿಸ್ಥಿತಿ ಬಿಗಡಾಯಿಸಿದ ಕಾರಣ ಹೆಚ್ಚಿನ ಚಿಕಿತ್ಸೆಗೆ ಉಡುಪಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ರಾತ್ರಿ ತಿಮ್ಮಪ್ಪ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.

Similar News