ಧಾರವಾಡ; ಮೈಮೇಲೆ ಬಿಸಿ ಸಾಂಬಾರು ಬಿದ್ದು ಗಂಭೀರ ಗಾಯಗೊಂಡಿದ್ದ ಮಗು ಸಾವು
Update: 2022-11-16 12:53 GMT
ಧಾರವಾಡ, ನ. 16: ಆಟವಾಡುತ್ತಿದ್ದ ವೇಳೆ ಮೈಮೇಲೆ ಬಿಸಿ ಸಾಂಬಾರ್ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ 18 ತಿಂಗಳ ಮಗುವೊಂದು ಚಿಕಿತ್ಸೆ ಫಲಿಸದೆ ಅಸುನೀಗಿದ ಘಟನೆ ಜಿಲ್ಲೆಯ ಕುಂದಗೋಳ ತಾಲೂಕಿನ ಬಿಳೇಬಾಳ ಗ್ರಾಮದಲ್ಲಿ ವರದಿಯಾಗಿದೆ.
ಮೃತಪಟ್ಟ ಮಗುವನ್ನು ಸ್ವಾತಿ ಚಲವಾದಿ ಎಂದು ಗುರುತಿಸಲಾಗಿದೆ. ನ.10ರಂದು ಮನೆಯಲ್ಲಿ ಆಟವಾಡುತ್ತಿದ್ದ ವೇಳೆ ಬಿಸಿ ಸಾಂಬಾರು ಮಗುವಿನ ಮೈಮೇಲೆ ಚೆಲ್ಲಿತ್ತು. ಇದರಿಂದ ತೀವ್ರ ಸ್ವರೂಪದ ಸುಟ್ಟಗಾಯಗಳಾಗಿದ್ದ ಮಗುವನ್ನು ಮೊದಲು ಕುಂದಗೋಳ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ(ಕಿಮ್ಸ್)ಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.
ಆದರೆ, ಮಗು ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದೆ. ಈ ಸಂಬಂಧ ಕುಂದಗೋಳ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.