ಪೊಲೀಸ್ ಇಲಾಖೆಯ ಅಕ್ರಮದ ಬಗ್ಗೆ ಶೀಘ್ರದಲ್ಲೇ ದಾಖಲೆ ಬಿಡುಗಡೆ: ಡಿ.ಕೆ.ಶಿವಕುಮಾರ್

''ಪ್ರತಾಪ್ ಸಿಂಹ ಮೈಸೂರಿನ ಉದ್ಧಾರಕ್ಕೆ ಒಂದು ದಿನವೂ ಮಾತನಾಡಿಲ್ಲ''

Update: 2022-11-16 14:45 GMT

ಬೆಂಗಳೂರು, ನ. 16: ‘ಪೊಲೀಸ್ ಇಲಾಖೆಯ ಅಕ್ರಮದ ಬಗ್ಗೆ ಪೂರಕವಾಗಿರುವ ದಾಖಲೆಗಳನ್ನು ನಾನು ಸದ್ಯದಲ್ಲೇ ಮಾಧ್ಯಮಗಳ ಮುಂದೆ ಬಿಡುಗಡೆ ಮಾಡಲಿದ್ದೇನೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಇಂದಿಲ್ಲಿ ತಿಳಿಸಿದ್ದಾರೆ.

ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದಾಖಲೆ ಇಲ್ಲದೆ ಯಾವುದೇ ಆರೋಪ ಮಾಡುತ್ತಿಲ್ಲ ಈ ವಿಚಾರವಾಗಿ ಹಿರಿಯ ಅಧಿಕಾರಿಗಳ ಜತೆ ಮಾತನಾಡಿರುವ ಆಡಿಯೋ ನಮ್ಮ ಬಳಿ ಇದೆ. ಈಗ ಇದರಲ್ಲಿ ಯಾರೆಲ್ಲಾ ಭಾಗವಾಗಿದ್ದಾರೆಂದು ಹೇಳಿದರೆ ಮಾನನಷ್ಟ ಮೊಕದ್ದಮೆಗೆ ದಾರಿಯಾಗುತ್ತದೆ. ಆ ಅಧಿಕಾರಿ ಅನುಮತಿ ಪಡೆದು ಕಾನೂನು ರೀತಿಯಲ್ಲಿ ಆಡಿಯೋ ಬಿಡುಗಡೆ ಮಾಡಲಾಗುವುದು’ ಎಂದು ಹೇಳಿದರು.

ಅವರು ಭಾರತ ಮಾತೆ ಮಕ್ಕಳಲ್ಲವೇ?: ‘ಸಂಸದ ಪ್ರತಾಪ್ ಸಿಂಹಗೆ ಒಂದು ಪ್ರಶ್ನೆ ಕೇಳುತ್ತೇನೆ. ದೇಶದಲ್ಲಿರುವ ಮುಸ್ಲಿಮರು ಭಾರತ ಮಾತೆಯ ಮಕ್ಕಳಲ್ಲವೇ? ನಮಗೆ ನಿಮಗೆ ಯಾವ ಹಕ್ಕಿದೆಯೋ ಅವರಿಗೂ ಅಷ್ಟೇ ಹಕ್ಕು ಇದೆ. ನಿಮ್ಮ ರಾಜಕಾರಣದ ಬೇಳೆ ಬೇಯಿಸಿಕೊಳ್ಳಲು ಜನರಲ್ಲಿ ಭ್ರಮೆ ಮೂಡಿಸಬೇಡಿ. 2023ರ ಚುನಾವಣೆಯಲ್ಲಿ ಇದರ ಪರಿಣಾಮವನ್ನು ಜನ ತೋರಿಸುತ್ತಾರೆ’ ಎಂದು ಶಿವಕುಮಾರ್ ಎಚ್ಚರಿಕೆ ನೀಡಿದರು.

‘ಒಂದು ಕ್ಷೇತ್ರದ ಬಸ್ ಶೆಲ್ಟರ್ ಕಾಮಗಾರಿಗೂ ಸಂಸದ ಪ್ರತಾಪ್ ಸಿಂಹಗೂ ಏನು ಸಂಬಂಧ. ಬಿಜೆಪಿ ಶಾಸಕ ರಾಮದಾಸ್ ಲಿಖಿತ ರೂಪದಲ್ಲಿ ಪ್ರತಾಪ್ ಸಿಂಹ ಅವರು ರಾಜಕಾರಣ ಮಾಡುತ್ತಿದ್ದಾರೆಂದು ಹೇಳಿದ್ದಾರೆ. ಪ್ರತಾಪ್ ಸಿಂಹ ಅವರು ಮೈಸೂರಿನ ಉದ್ಧಾರಕ್ಕೆ ಒಂದು ದಿನವೂ ಮಾತನಾಡಿಲ್ಲ. ಕೇವಲ ಕಿಡಿ ಹಚ್ಚುವ ಬಗ್ಗೆ ಮಾತನಾಡುತ್ತಾರೆ. ಬಸ್ ಶೆಲ್ಟರ್ ಹೊಡೆಸುತ್ತೀರಾ, ಹೊಡೆಸಿ ನಾವು ಬಂದು ಅದನ್ನು ನಿಲ್ಲಿಸುವುದಿಲ್ಲ, ಕಾಂಗ್ರೆಸ್ ಪಕ್ಷದವರು ಬಂದು ನಿಂತು ನೋಡುತ್ತೇವೆ. ನಿಮಗೆ ಧೈರ್ಯ ತಾಕತ್ತು-ಧಮ್ಮು ಇದ್ದರೆ ಅದನ್ನು ಹೊಡೆಸಿ. ಕೇವಲ ಪ್ರಚಾರಕ್ಕಾಗಿ ಮಾತನಾಡುವುದನ್ನು ಬಿಡಿ. ನಿಮ್ಮ ಯೋಗ್ಯತೆಗೆ ಕೇಂದ್ರದಿಂದ 5 ಕೋಟಿ ರೂ.ಗಳನ್ನಾದರೂ ತಂದಿದ್ದರೆ ಮಾತನಾಡಿ’ ಎಂದು ಶಿವಕುಮಾರ್ ವಾಗ್ದಾಳಿ ನಡೆಸಿದರು.

‘ಸಿದ್ದರಾಮಯ್ಯ, ಮಹದೇವ್ ಪ್ರಸಾದ್, ಆಸ್ಕರ್ ಫನಾರ್ಂಡೀಸ್ ಅವರ ಕೊಡುಗೆಯಿಂದ ಬೆಂಗಳೂರು-ಮೈಸೂರು ಹೆದ್ದಾರಿ ಆಗುತ್ತಿದೆ. ಇದರಲ್ಲಿ 100 ಕೋಟಿ ರೂ.ಕಮಿಷನ್ ಪಡೆದಿದ್ದೀರಿ ಎಂದು ಮಂಡ್ಯದಲ್ಲಿ ಆರೋಪ ಮಾಡಿದ್ದಾರೆ. ಈ ಬಗ್ಗೆ ನೀವು ಉತ್ತರವೇ ಕೊಟ್ಟಿಲ್ಲ. ನಿಮ್ಮ ಸಂಸದ ನಿಧಿಯನ್ನು ಬಿಡದೇ ತಿನ್ನುತ್ತಿದ್ದೀರಿ. ನಿಮ್ಮ ಯೋಗ್ಯತೆ ಏನು ಎಂದು ನೋಡಿಕೊಳ್ಳಿ. ಸಿದ್ದರಾಮಯ್ಯನವರ ವಿರುದ್ಧ ಟೀಕೆ ಮಾಡಲು ಆರೆಸ್ಸೆಸ್ ನವರು ತರಬೇತಿ ನೀಡಿ ಕಳುಹಿಸುತ್ತಿದ್ದಾರೆ’ ಎಂದು ಅವರು ದೂರಿದರು.

Similar News