'ಹಿಂದೂ' ಎಂಬುದು ಧರ್ಮವಲ್ಲ, ಅದು ಜೀವನ ಕ್ರಮ: ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ

''ಲಿಂಗಾಯತರು ಹಿಂದೂಗಳಲ್ಲ...''

Update: 2022-11-16 16:29 GMT

ಬೆಳಗಾವಿ, ನ. 16: ‘ವೇದ, ಆಗಮ ಪದ್ಧತಿ ವಿರೋಧಿಸುವ ಲಿಂಗಾಯತ ಅವೈದಿಕ ಧರ್ಮ. ಲಿಂಗಾಯತರು ಮತ್ತು ವೈದಿಕ ಧರ್ಮದ ಆಚರಣೆಗಳಲ್ಲಿ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ’ ಎಂದು ಗದುಗಿನ ಶ್ರೀ ತೋಂಟದಾರ್ಯ ಮಠದ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.

ಬುಧವಾರ ನಗರದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ‘ಹಿಂದೂ ಎಂಬುದು ಧರ್ಮವಲ್ಲ, ಅದು ಜೀವನ ಕ್ರಮ’ ಎಂದು ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರೇ ಹೇಳಿದ್ದಾರೆ. ಆದರೆ, ಇಂದು ವೈದಿಕ ಧರ್ಮಕ್ಕೆ ಹಿಂದೂ ಧರ್ಮ ಎನ್ನಲಾಗುತ್ತಿದೆ. ಲಿಂಗಾಯತರು ಯಾವುದೇ ಸಂದರ್ಭದಲ್ಲಿಯೂ ಹಿಂದೂಗಳಲ್ಲ’ ಎಂದು ನುಡಿದರು.

‘ವೈದಿಕರು ದೇವಸ್ಥಾನದಲ್ಲಿ ದೇವರನ್ನು ಪೂಜಿಸಿದರೆ, ಲಿಂಗಾಯತರು ತಾವು ಧರಿಸಿದ ಲಿಂಗವನ್ನೇ ಪೂಜಿಸುತ್ತಾರೆ. ವೈದಿಕ ಪದ್ಧತಿ ಅನುಸರಿಸುವವರಿ ಮೃತಪಟ್ಟರೆ ಸುಡಲಾಗುತ್ತದೆ. ಅದೇ ಲಿಂಗಾಯತರನ್ನು ಹೂಳಲಾಗುತ್ತದೆ. ಈ ದೇಶದಲ್ಲಿ ವಾಸಿಸುವ ಜೈನರು, ಬೌದ್ಧರು, ಸಿಖ್ಖರು, ವೈದಿಕರು, ಲಿಂಗಾಯತರು ಸೇರಿ ಎಲ್ಲರೂ ಪ್ರಾದೇಶಿಕವಾಗಿ ಹಿಂದೂಗಳು. ಆದರೆ, ಧಾರ್ಮಿಕ ವಿಚಾರ ಬಂದಾಗ ಲಿಂಗಾಯತರು ಪ್ರತ್ಯೇಕ’ ಎಂದು ಸ್ವಾಮೀಜಿ ತಿಳಿಸಿದರು.

‘ಹಿಂದೂ ಪದ ಪರ್ಷಿಯನ್ ಭಾಷೆಯಿಂದ ಬಂದಿದೆ. ಆ ಭಾಷೆಯಲ್ಲಿ ‘ಸ’ಕಾರವನ್ನು ‘ಹ’ಕಾರವನ್ನಾಗಿ ಉಚ್ಛರಿಸುತ್ತಾರೆ. ಸಿಂಧೂ ನದಿ ಈಚೆಗೆ ಇರುವ ಜನರನ್ನು ಅವರು ಹಿಂದೂಗಳೆಂದು ಕರೆದಿದ್ದರು. ಆದರೆ, ಹಿಂದೂ ಪದವನ್ನು ಒಂದು ಜಾತಿ, ಧರ್ಮಕ್ಕೆ ಸಿಮೀತಗೊಳಿಸಿದರೆ ಇಂತಹ ಅನಾಹುತ ಸಂಭವಿಸುತ್ತವೆ’ ಎಂದು ತೋಂಟದ ಸಿದ್ಧರಾಮ ಸ್ವಾಮೀಜಿ ಎಚ್ಚರಿಸಿದರು.

‘ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ನಿಂತಿಲ್ಲ. ಸದ್ಯಕ್ಕೆ ಬೇರೆ ಜಾತಿಯವರು ಪ್ರತ್ಯೇಕ ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನಾವು ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ಪಡೆಯುತ್ತೇವೆ’ ಎಂದು ತೋಂಟದ ಸಿದ್ಧರಾಮ ಸ್ವಾಮೀಜಿ ಇದೇ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ... 224 ಕ್ಷೇತ್ರಗಳಲ್ಲಿ ಎಲ್ಲಿ ನಿಂತರೂ ಸಿದ್ದರಾಮಯ್ಯ ಗೆಲ್ಲುತ್ತಾರೆ: ಡಿ.ಕೆ.ಶಿವಕುಮಾರ್

Similar News