VIDEO - ಮುರುಘಾ ಶ್ರೀ ಪ್ರಕರಣ: ವಿವಿಧ ಸಂಘಟನೆಗಳಿಂದ ಮೈಸೂರಿನಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ

Update: 2022-11-18 17:34 GMT

ಮೈಸೂರು,ನ.18: ''ಚಿತ್ರದುರ್ಗದ ಮುರುಘಾ ಶರಣರ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರು ದೂರುದಾರರನ್ನೇ ಬಂಧಿಸಿರುವುದು ಕಳವಳಕಾರಿಯಾಗಿದ್ದು, ಕೂಡಲೇ ಸರ್ಕಾರ ಸ್ವಾಮೀಜಿಯನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಜತೆಗೆ ನಾವು ದೂರು ನೀಡಿರುವ ಮಕ್ಕಳ ಪರವಾಗಿದ್ದೇವೆ'' ಎಂದು ನಗರದಲ್ಲಿ ಒಡನಾಡಿ ಸಂಸ್ಥೆಯ ಮಕ್ಕಳ ನೇತೃತ್ವದಲ್ಲಿ ರೈತಸಂಘ, ದಲಿತ ಸೇರಿದಂತೆ ವಿವಿಧ ಪ್ರಗತಿಪರ  ಸಂಘಟನೆಗಳು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

ನಗರದ ಕೋರ್ಟ್ ಮುಂಭಾಗದ ಮಹಾತ್ಮಾಗಾಂಧಿ ಪ್ರತಿಮೆ ಎದುರು ಶುಕ್ರವಾರ ಜಮಾಯಿಸಿದ ದಸಂಸ, ರೈತಸಂಘ, ಮಹಿಳಾ ಸಂಘಟನೆಗಳು ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಒಡನಾಡಿ ಸಂಸ್ಥೆಯ ಮಕ್ಕಳ ನೇತೃತ್ವದಲ್ಲಿ ಭಾರಿ ಪ್ರತಿಭಟನಾ ಮೆರವಣಿಗೆ ನಡೆಸಿ ದಾರಿಯುದ್ದಕ್ಕೂ ಸರ್ಕಾರ, ಪೊಲೀಸರು ಮತ್ತು ವ್ಯವಸ್ಥೆಯ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. 

ಈ ಸಂದರ್ಭದಲ್ಲಿ ಪ್ರಗತಿಪರ ಚಿಂತಕ ಪ.ಮಲ್ಲೇಶ್ ಮಾತನಾಡಿ, ''ಬೇಲಿಯೇ ಎದ್ದು ಹೊಲ ಮೇಯ್ತು ಎನ್ನುವ ಗಾದೆ ಮಾತಿನಂತೆ ಸಮಾಜದಲ್ಲಿ ಮೌಲ್ಯಗಳನ್ನು ಪ್ರತಿಷ್ಠಾಪಿಸಿ ಸಮುದಾಯಕ್ಕೆ ದಾರಿ ದೀಪವಾಗಬೇಕಾದ ಸ್ವಾಮೀಜಿಯೇ ಘೋರವಾದ ಅನ್ಯಾಯ ಮಾಡಿದ್ದಾರೆ'' ಎಂದು ಕಿಡಿಕಾರಿದರು.

ಒಡನಾಡಿ ಸಂಸ್ಥೆಯ ಮುಖ್ಯಸ್ದ ಸ್ಟ್ಯಾನ್ಲಿ ಮಾತನಾಡಿ, ''ಸರ್ಕಾರ ಈ ಪ್ರಕರಣದ ಉನ್ನತ ಮಟ್ಟದ ತನಿಖೆ ನಡೆಸಬೇಕು. ನಾವು ದೂರುದಾರ ಮಕ್ಕಳು ಮತ್ತು ಅವರ ಫೋಷಕರ ಪರವಾಗಿದ್ದೇವೆ'' ಎಂದು ತಿಳಿಸಿದರು.  

ನಂತರ ಪ್ರತಿಭಟನಾ ಮೆರವಣಿಗೆ ಕೋರ್ಟ್ ಮುಂಭಾಗದಿಂದ ಆರ್.ಟಿ.ಓ ವೃತ್ತ, ಜೆ.ಎಲ್.ಬಿ. ರಸ್ತೆ ಮೂಲಕ ಮಹಾರಾಣಿ ಕಾಲೇಜು ಹಾದು ನಂತರ ಜಿಲ್ಲಾಧಿಕಾರಿ ಕಚೇರಿಗೆ ತಲುಪಿ ಸರ್ಕಾರಕ್ಕೆ, ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನಾ ಮೆರವಣಿಗೆಯಲ್ಲಿ ಮಾಜಿ ಮೇಯರ್ ಗಳಾದ ನಾರಾಯಣ್, ಪುರುಷೋತ್ತಮ್ ಹೊಸಕೋಟೆ ಬಸವರಾಜು, ವಕೀಲ ಪುನೀತ್, ಗೋಪಾಲಕೃಷ್ಣ, ಚೋರನಹಳ್ಳಿ ಶಿವಣ್ಣ, ಮರಂಕಯ್ಯ, ಉಗ್ರ ನರಸಿಂಹೇಗೌಡ, ಪ್ರೊ .ವನಜಾ, ಪ್ರೊ.ಸಬೀಹಾ ಭೂಮಿಗೌಡ, ಪ್ರೊ .ಕಾಳಚನ್ನೇಗೌಡ, ಆಲಗೋಡು ಶಿವಕುಮಾರ್, ಸಿ.ಬವಲಿಂಗಯ್ಯ, ಸೈಯದ್ ಕಲೀಂ, ಹೊಸೂರು ಕುಮಾರ್, ಮರಿದೇವಯ್ಯ, ಮಹೇಶ್ ಸೋಸಲೆ, ವಿಜಯಕುಮಾರ್,  ಹೆಜ್ಜಿಗೆ ಪ್ರಕಾಶ್, ಬೆಳ್ಳಾಳೆ ಬೆಟ್ಟೇಗೌಡ, ರತಿರಾವ್, ಕುಮಾರಸ್ವಾಮಿ, ಚಂದ್ರಶೇಖರ ಮೇಟಿ, ಕಲ್ಲಳ್ಳಿ ಕುಮಾರ್, ಭಾಗ್ಯಮ್ಮ, ಗೋವಿಂದರಾಜು ಸೇರಿದಂತೆ ಹಲವರು ಭಾಗವಹಿಸಿದ್ದರು.
 

Full View

Similar News