ಭಟ್ಕಳ: 240 ಕೋಟಿ ರೂ. ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಆಡಳಿತಾತ್ಮಕ ಅನುಮೋದನೆ

Update: 2022-11-19 10:30 GMT

ಭಟ್ಕಳ: ಭಟ್ಕಳ ಹಾಗೂ ಹೊನ್ನಾವರ ತಾಲೂಕುಗಳ ಜನ ಸಾಮಾನ್ಯರ ಬಹು ವರ್ಷಗಳ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಸರಕಾರ ಮುಂದಡಿ ಇಟ್ಟಿದ್ದು, ಈ ಎರಡೂ ತಾಲೂಕುಗಳ ಒಟ್ಟೂ 23 ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ರು.240ಕೋ. ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಗುರುವಾರ ರಾಜ್ಯ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.

ಕೇಂದ್ರ ಸರಕಾರದ ಜಲ ಜೀವನ್ ಮಿಷನ್ (104.30 ಕೋ.ರೂ.) ಹಾಗೂ ಕರ್ನಾಟಕ ಸರಕಾರದ ಅನುದಾನ ( 135.70ಕೋ. ರೂ.) ಸಂಯೋಜಿತ ಈ ಯೋಜನೆಯು  ಭಟ್ಕಳ ತಾಲೂಕಿನ ಬೆಂಗ್ರೆ, ಶಿರಾಲಿ, ಹೆಬಳೆ, ಬೈಲೂರು, ಮಾವಳ್ಳಿ 1, ಮಾವಳ್ಳಿ 2, ಕೈಕಿಣಿ, ಮಾರುಕೇರಿ (ಭಾಗಶಃ) ಬೆಳಕೆ, ಯಲ್ವಡಿಕವೂರು, ಮುಠ್ಠಳ್ಳಿ, ಮುಂಡಳ್ಳಿ, ಕೋಣಾರ (ಭಾಗಶಃ) ಹೊನ್ನಾವರ ತಾಲೂಕಿನ ಬಳಕೂರು, ಮೇಲಿನ ಇಡಗುಂಜಿ, ಕಾಸರಕೋಡ, ಕೆಳಗಿನೂರು, ಕೊಡಾಣಿ, ಕುದ್ರಗಿ, ಮಾಗೋಡು, ನಗರಬಸ್ತಿಕೇರಿ, ಮಂಕಿ ಬಿ (ಅನಂತವಾಡಿ), ಮಂಕಿ ಸಿ (ಚಿತ್ತಾರ) ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಅನುಷ್ಠಾಗೊಳ್ಳಲಿದೆ.

ಈ ಯೋಜನೆಯು ಮುಂದಿನ 5 ವರ್ಷಗಳ ಅವಧಿಯ ಅನುಷ್ಠಾನ, ಕಾರ್ಯಾಚರಣೆ, ನಿರ್ವಹಣೆಯನ್ನು ಒಳಗೊಂಡಿರುತ್ತದೆ. ಈ ಹಿಂದೆ 2018ರ ವಿಧಾನಸಭಾ ಚುನಾವಣೆಯ ಹೊತ್ತಿಗೆ ಭಟ್ಕಳಕ್ಕೆ ಬಂದಿದ್ದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಭಟ್ಕಳ ಹೊನ್ನಾವರಕ್ಕೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಮಂಜೂರಿ ಮಾಡುವುದಾಗಿ ಭರವಸೆ ನೀಡಿದ್ದರಾದರೂ, ಸರಕಾರ ಪತನಗೊಂಡು ಹೊಸ ಸರಕಾರಗಳು ಅಸ್ತಿತ್ವಕ್ಕೆ ಬಂದ ನಂತರದ ದಿನಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪ್ರಸ್ತಾಪವಾಗಿರಲಿಲ್ಲ. ಇದೀಗ 2023ರ ಚುನಾವಣೆಗೆ 4-5 ತಿಂಗಳು ಇರುವಾಗ ಸರಕಾರ ಜನರ ಓಲೈಕೆಗೆ ಮುಂದಾಗಿದ್ದು, ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅಸ್ತು ಎಂದಿದೆ. ಅಲ್ಲದೇ ರು.930 ಲಕ್ಷ ವೆಚ್ಚದಲ್ಲಿ ಮಂಕಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 25 ಹಾಸಿಗೆಗಳ ಮಾದರಿ ಸಮುದಾಯ ಕೇಂದ್ರವನ್ನಾಗಿ ಉನ್ನತೀಕರಿಸಲು ಸಚಿವ ಸಂಪುಟ ಹಸಿರು ನಿಶಾನೆ ತೋರಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಸುನಿಲ್ ನಾಯ್ಕ, ಸತತ ಪ್ರಯತ್ನದ ಮೂಲಕ ಸರಕಾರದ ಮೇಲೆ ಒತ್ತಡ ತಂದು ಈ ಯೋಜನೆಗೆ ಸರಕಾರದ ಅನುಮೋದನೆ ಪಡೆದುಕೊಂಡಿದ್ದು, ರಾಜ್ಯದ ಮುಖ್ಯಮಂತ್ರಿಗಳಿಗೆ, ಸಚಿವರುಗಳಿಗೆ ಹಾಗೂ ಸಂಸದ ಅನಂತಕುಮಾರ ಹೆಗಡೆ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಕಟಿಬದ್ಧನಾಗಿದ್ದು, ಮುಂದಿನ ದಿನಗಳಲ್ಲಿ ಭಟ್ಕಳ ಹಾಗೂ ಹೊನ್ನಾವರ ತಾಲೂಕುಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ನೆರವೇರಲಿದೆ. ಇದಕ್ಕೆ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ ಎಂದು ತಿಳಿಸಿದ್ದಾರೆ.

Similar News