‘ವೈದ್ಯಕೀಯ ಸಮಾಜಶಾಸ್ತ್ರ’ ಪುಸ್ತಕ ವಿವಾದ: ಬೋಧನೆ ತಡೆ ಹಿಡಿಯಲು ಸಾಹಿತಿ, ಶಿಕ್ಷಣ ತಜ್ಞರ ಆಗ್ರಹ

Update: 2022-11-19 16:31 GMT

ಬೆಂಗಳೂರು: ‘ನಿವೃತ್ತ ಪ್ರಾಂಶುಪಾಲ ಕೆ.ಭೈರಪ್ಪರ ‘ವೈದ್ಯಕೀಯ ಸಮಾಜಶಾಸ್ತ್ರ’ ಪುಸ್ತಕವು ಅನಗತ್ಯವಾಗಿ ವಿವಾದವನ್ನು ಸೃಷ್ಟಿಸಿದ್ದು, ಪುಸ್ತಕ ವಿವಾದದ ಕುರಿತು ಸ್ಪಷ್ಟೀಕರಣ ನೀಡಿ, ಕೂಡಲೇ ಈ ಪುಸ್ತಕದ ಬೋಧನೆಯನ್ನು ತಡೆ ಹಿಡಿಯಬೇಕು’ ಎಂದು ಹಿರಿಯ ಸಾಹಿತಿಗಳಾದ ಪ್ರೊ.ಕೆ.ಮರುಳಸಿದ್ದಪ್ಪ, ಡಾ.ಜಿ.ರಾಮಕೃಷ್ಣ, ಪ್ರೊ.ಎಸ್.ಜಿ.ಸಿದ್ದರಾಮಯ್ಯ ಸೇರಿದಂತೆ 18 ಮಂದಿ ಸಾಹಿತಿ, ಪ್ರಗತಿಪರ ಚಿಂತಕರು ಹಾಗೂ ಶಿಕ್ಷಣತಜ್ಞರು ಆಗ್ರಹಿಸಿದ್ದಾರೆ.

ಶನಿವಾರ ಈ ಕುರಿತು ಅವರು ಸಮಾಜಶಾಸ್ತ್ರ ಪಠ್ಯ ಪುಸ್ತಕ ರಚನಾ ಮಂಡಳಿ ಅಧ್ಯಕ್ಷ ರಾಮೇಗೌಡ ಮತ್ತು ಸದಸ್ಯರಿಗೆ ಬಹಿರಂಗ ಪತ್ರವನ್ನು ಬರೆದಿದ್ದು, ಪ್ರೊ.ಕೆ.ಭೈರಪ್ಪನವರು ಬರೆದ ಮೌಢ್ಯಾಚರಣೆಯ ವಿಚಾರಗಳಿಗೂ ಆರೆಸ್ಸಸ್ ಬಿಜೆಪಿ ಮುಖಂಡರ ಹೇಳಿಕೆಗಳಿಗೂ ಸಾಮ್ಯತೆಯಿದೆ. ಪರಾಮರ್ಶನ ಪುಸ್ತಕದ ನೆಪದಲ್ಲಿ ಶಿಕ್ಷಣದಲ್ಲಿಯೂ ಇದು ಸೇರಿಕೊಳ್ಳುವ ಅಪಾಯವಿದೆ. ಇದು ಕಳವಳಕಾರಿಯಾಗಿದೆ. ಏಕೆಂದರೆ ಇತ್ತೀಚಿನ ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ಇದಕ್ಕೊಂದು ಉದಾಹರಣೆ ಎಂದು ಟೀಕಿಸಿದ್ದಾರೆ.

ಪುಸ್ತಕದಲ್ಲಿ ‘ಪ್ರಕೃತಿ ಚಿಕಿತ್ಸೆ ಹೆಸರಿನಲ್ಲಿ ಮೂತ್ರ ಚಿಕಿತ್ಸೆ, ಗೋಮೂತ್ರ ಚಿಕಿತ್ಸೆ, ಶಂಕು ಚಿಕಿತ್ಸೆ, ಚುಟ್ಕಿ ಚಿಕಿತ್ಸೆ, ತೈಲ ಚಿಕಿತ್ಸೆ, ಸಿದ್ಧ ವೈದ್ಯ ಪದ್ಧತಿ, ಜ್ಯೂಸ್ ಚಿಕಿತ್ಸೆ' ಇತ್ಯಾದಿ ವಿಧಾನಗಳ ಮೌಢ್ಯಾಚರಣೆಯ, ಪುರಾವೆಗಳಿಲ್ಲದ ಅಧ್ಯಾಯಗಳಿವೆ ಎಂದು ವರದಿಯಾಗಿದೆ. ಆದರೆ ಪಠ್ಯಕ್ರಮ ರಚನಾ ಮಂಡಳಿ ಅಧ್ಯಕ್ಷ ಪ್ರೊ.ಎ.ರಾಮೇಗೌಡ, “ಎನ್‍ಇಪಿ ಪಠ್ಯಕ್ರಮದಂತೆ ಆರೋಗ್ಯ ಸಮಾಜಶಾಸ್ತ್ರ ಪರಿಚಯಿಸಲಾಗಿದೆ. ಆದರೆ ಪೂರ್ಣ ಪಠ್ಯಕ್ರಮ ಅಂತಿಮವಾಗಿಲ್ಲ. ಲೇಖಕರು ಏಕೆ ಹಾಗೆ ಬರೆದಿದ್ದಾರೆ ಎನ್ನುವ ಮಾಹಿತಿ ಇಲ್ಲ” ಎಂದು ಹೇಳಿರುವುದೂ ವರದಿಯಾಗಿದೆ. ಅಂದರೆ ಮುಖ್ಯ ಪಠ್ಯಪುಸ್ತಕವೇ ಅಂತಿಮವಾಗಿಲ್ಲ, ಆದರೆ ಅದರ ರೆಫರೆನ್ಸ್ ಪುಸ್ತಕ ಪ್ರಕಟಗೊಂಡು ವಿದ್ಯಾರ್ಥಿಗಳು ಓದುತ್ತಿದ್ದಾರೆ ಎನ್ನುವ ಸಂಗತಿಯೇ ಆತಂಕಕಾರಿಯಾಗಿದೆ ಎಂದು ಖಂಡಿಸಿದ್ದಾರೆ. 

ಮೈಸೂರು ವಿವಿ ಕುಲ ಸಚಿವ ಪ್ರೊ.ಆರ್.ಶಿವಪ್ಪ ‘ಪರಾಮರ್ಶನ ಪುಸ್ತಕಕ್ಕೂ ಮತ್ತು ವಿವಿಗೂ ಸಂಬಂಧವಿಲ್ಲ’ ಎಂದು ಹೇಳಿರುವುದು ವರದಿಯಾಗಿದೆ. ಈ ಹೇಳಿಕೆ ಬೇಜವಾಬ್ದಾರಿಯಿಂದ ಕೂಡಿದೆ. ಹಾಗಾದರೆ ಪುಸ್ತಕವನ್ನು ಆಯ್ಕೆ ಮಾಡಿದ್ದು ಯಾರು? ಯಾಕೆ ಆಯ್ಕೆ ಮಾಡಲಾಗಿದೆ? ಪರಾಮರ್ಶನ ಪುಸ್ತಕಗಳ ಉದ್ದೇಶವೇನು ಮೊದಲ ಎರಡು ಸೆಮಿಸ್ಟರ್‍ನಲ್ಲಿ ಎನ್‍ಇಪಿ ಶಿಕ್ಷಣ ನೀಡುತ್ತಿದ್ದು, ಐದನೇ ಸೆಮಿಸ್ಟರ್ ಪುಸ್ತಕವನ್ನು ಎನ್‍ಇಪಿ ಎಂದು ಪ್ರಚಾರ ಮಾಡುವುದು ಕಾನೂನು ವಿರೋಧವಲ್ಲವೇ? ಎಂದು ಪ್ರಶ್ನಿಸಿದ್ದಾರೆ.

Similar News