ಕೊಪ್ಪಳ: ವಿಪಕ್ಷ ನಾಯಕ ಸಿದ್ಧರಾಮಯ್ಯನವರನ್ನು ನೋಡಲು ಮುಗಿಬಿದ್ದ ಜನತೆ

Update: 2022-11-20 18:23 GMT

ಕೊಪ್ಪಳ: ತಮ್ಮ ಆಪ್ತರೊಬ್ಬರ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳುವ ನಿಮಿತ್ತ ಆಗಮಿಸಿದ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ನೋಡಲು ನೂರಾರು ಜನರು ಅವರ ಆಗಮಿಸಿದ್ದ ಹೆಲಿಪ್ಯಾಡ್‍ಗೆ ಮುಗಿಬಿದ್ದ ಘಟನೆ ನಡೆಯಿತು.

ರವಿವಾರ ಕೊಪ್ಪಳದ ಹೆಲಿಪ್ಯಾಡ್‍ಗೆ ಸಿದ್ಧರಾಮಯ್ಯ ಆಗಮಿಸುತ್ತಿದ್ದಂತೆ ನೂರಾರು ಜನರು ಏಕಾಏಕಿ ಅವರನ್ನು ನೋಡಲು ಮುಗಿಬಿದ್ದರು. ಜನರನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದರೂ ಜನರನ್ನು ನಿಯಂತ್ರಣ ಮಾಡಲು ಸಾಧ್ಯವಾಗಲಿ. ಆ ಬಳಿಕ ಜನ ಜಂಗುಳಿಯ ಮಧ್ಯೆಯೇ ಸಿದ್ದರಾಮಯ್ಯ ಮದುವೆ ಸಮಾರಂಭಕ್ಕೆ ತೆರಳಿದರು.

ಕೊಪ್ಪಳ ತಾಲೂಕಿನ ವನಬಳ್ಳಾರಿಯಲ್ಲಿ ಆಪ್ತರೊಬ್ಬರ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿದ್ಧರಾಮಯ್ಯ, ‘ಜನರು ಬಿಜೆಪಿಯವರಿಗೆ ಮತ ಹಾಕುವುದಿಲ್ಲ ಎಂದು ಗೊತ್ತಾದ ಮೇಲೆ ಅಹಿಂದ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿದ್ದಾರೆ. ಈ ಪ್ರಕರಣವನ್ನು ನ್ಯಾಯಾಂಗ ತನಿಖೆ ಮಾಡಬೇಕೆಂದು ಆಗ್ರಹಿಸಿದ್ದೇವೆ ಎಂದರು.

ಮತದಾರರ ಮಾಹಿತಿ ಕಳ್ಳತನ ಮಾಡುವಂತಹ ಕೆಲಸ ಮಾಡಿದ್ದಾರೆ. ‘ಚಿಲುಮೆ’ ಎಂಬ ಸಂಸ್ಥೆಗೆ ಅನುಮತಿ ಕೊಟ್ಟಿದ್ದಾರೆ. ಯಾರಿಗಾದರೂ ನೀಡಲಿ. ಆದರೆ, ಅವರು ಬಿಎಲ್‍ಒಗಳನ್ನು ಖಾಸಗಿ ಜನರು ಮಾಡಿದ್ದಾರೆ. ಕಾನೂನು ಪ್ರಕಾರ ಚುನಾವಣಾ ಆಯೋಗದ ಹೊರತು ಖಾಸಗಿ ಜನರನ್ನು ಬಿಎಲ್‍ಒಗಳನ್ನು ಮಾಡಲು ಬರುವುದಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.

ಬೆಂಗಳೂರು ನಗರದ 28 ಕ್ಷೇತ್ರಗಳ ಪೈಕಿ ಯಾವ ಕ್ಷೇತ್ರದಲ್ಲಿ ಬಿಜೆಪಿ ಸೋಲುತ್ತದೆ ಎಂದು ತಿಳಿದು ಮತದಾರರ ಪಟ್ಟಿಯಿಂದಲೇ ಹಲವು ಜನರ ಹೆಸರುಗಳನ್ನು ಕೈಬಿಟ್ಟಿದ್ದಾರೆ. ಕೆಲ ಕ್ಷೇತ್ರದಲ್ಲಿ 50 ಸಾವಿರ, 60 ಸಾವಿರ ಮತದಾರರನ್ನು ಕೈಬಿಟ್ಟಿದ್ದಾರೆ. ಬೆಂಗಳೂರು ಉಸ್ತುವಾರಿ ಹೊತ್ತಿರುವ ಮುಖ್ಯಮಂತ್ರಿ ಇದಕ್ಕೆ ಉತ್ತರ ನೀಡಬೇಕಾಗುತ್ತದೆ’ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಸಿದ್ದರಾಮಯ್ಯ ಅವರಿಗೆ ಪಕ್ಷದ ಕಾರ್ಯಕರ್ತರು ಹಾಗೂ ಅವರ ಅಭಿಮಾನಿಗಳು ಬೃಹತ್ ಗಾತ್ರದ ಸೇಬಿನ ಹಾರವನ್ನು ಹಾಕುವ ಮೂಲಕ ಅದ್ದೂರಿ ಸ್ವಾಗತ ಕೋರಿದರು. ಮಾಜಿ ಸಚಿವರಾದ ಝಮೀರ್ ಅಹ್ಮದ್ ಖಾನ್, ಸತೀಶ್ ಜಾರಕಿಹೊಳಿ, ಶಿವರಾಜ್ ತಂಗಡಗಿ, ಇಕ್ಬಾಲ್ ಅನ್ಸಾರಿ, ಶಾಸಕರಾದ ಭೀಮಾ ನಾಯ್ಕ್, ರಾಘವೇಂದ್ರ ಹಿಟ್ನಾಳ್, ಭೈರತಿ ಸುರೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.

Similar News