ಅಭ್ಯರ್ಥಿಗಳನ್ನು ಘೋಷಿಸುವ ಹಕ್ಕು ನನಗೆ, ಸಿದ್ದರಾಮಯ್ಯಗೆ ಇಲ್ಲ: ಡಿಕೆಶಿ ಸ್ಪಷ್ಟನೆ

Update: 2022-11-21 11:02 GMT

ಬೆಂಗಳೂರು:  ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸುವ ಅಭ್ಯರ್ಥಿಗಳ ಹೆಸರನ್ನು ಘೋಷಿಸುವ ಹಕ್ಕು ನನಗೂ ಇಲ್ಲ, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೂ ಇಲ್ಲ. ಅದನ್ನು ಎಐಸಿಸಿ ಮಾತ್ರ ನಿರ್ಧರಿಸುತ್ತದೆ'' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. 

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಕೊಪ್ಪಳದಲ್ಲಿ ಸಿದ್ದರಾಮಯ್ಯ ಅವರು ಅಭ್ಯರ್ಥಿಗಳ ಬಗ್ಗೆ ಏಕೆ ಹಾಗೆ ಹೇಳಿದ್ದಾರೋ ಗೊತ್ತಿಲ್ಲ.  ಕಳೆದ ಬಾರಿ ಕಳೆದ ಮತಗಳ ಅಂತರದಿಂದ ಸೋತವರಿಗೆ ಪ್ರೋತ್ಸಾಹ ನೀಡಲೆಂದು ಸಿದ್ದರಾಮಯ್ಯ ಹಾಗೆ ಹೇಳಿರಬಹುದು. ಆದರೆ, ನಮಗೆ ಮಲ್ಲಿಕಾರ್ಜುನ ಖರ್ಗೆಯವರೇ ಹೈಕಮಾಂಡ್. ರಾಜ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಿಸುವ ಹಕ್ಕು ಖರ್ಗೆ ಅವರಿಗೆ ಮಾತ್ರವೇ ಇದೆ'' ಎಂದು ಅವರು ತಿಳಿಸಿದರು.

ಸಿದ್ದರಾಮಯ್ಯ ಅವರು ನಿನ್ನೆ ಕೊಪ್ಪಳ ತಾಲೂಕಿನ ವಣಬಳ್ಳಾರಿ ಗ್ರಾಮದಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ,  ಕನಕಗಿರಿ ಕ್ಷೇತ್ರದಲ್ಲಿ ಶಿವರಾಜ ತಂಗಡಗಿ, ಕುಷ್ಟಗಿ ಕ್ಷೇತ್ರದಲ್ಲಿ ಅಮರೇಗೌಡ ಭಯ್ಯಾಪೂರ, ಯಲಬುರ್ಗಾದ ಕ್ಷೇತ್ರದ ಬಸವರಾಜ ರಾಯರೆಡ್ಡಿ, ಕೊಪ್ಪಳ ಕ್ಷೇತ್ರ ರಾಘವೇಂದ್ರ ಹಿಟ್ನಾಳ ಹಾಗೂ ಗಂಗಾವತಿ ಕ್ಷೇತ್ರದಿಂದ ಸ್ಪರ್ಧಿಸಲಿರುವ ಇಕ್ವಾಲ್ ಅನ್ಸಾರಿ ಅವರಿಗೆ ಮತ ನೀಡುವಂತೆ ವೇದಿಕೆಯಲ್ಲೇ ಕರೆ ನೀಡಿದ್ದರು. 

Similar News