ಮುರುಘ ಶ್ರೀಗಳ ವಿರುದ್ಧ ಪ್ರಕರಣ; ಶೀಘ್ರದಲ್ಲೇ ಮುಂದಿನ ಕ್ರಮ: ಮುಖ್ಯಮಂತ್ರಿ ಬೊಮ್ಮಾಯಿ

Update: 2022-11-23 11:49 GMT

ಚಿತ್ರದುರ್ಗ, ನ. 23: ‘ಮುರುಘಾ ಮಠದ ಪ್ರಕರಣದ ಬಗ್ಗೆ ಜಿಲ್ಲಾಧಿಕಾರಿ ಸರಕಾರಕ್ಕೆ ವರದಿ ನೀಡಿದ್ದು, ಕಾನೂನು ಇಲಾಖೆಯಲ್ಲಿದೆ. ಈ ಕುರಿತು ಪರಿಶೀಲಿಸಿ ಶೀಘ್ರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಪಿತೂರಿ ನಡೆದಿದೆ ಎಂಬ ಪ್ರಕರಣವೂ ದಾಖಲಾಗಿದ್ದು, ಮಾಜಿ ಶಾಸಕರ ಬಂಧನವಾಗಿದೆ. ಈ ಪ್ರಕರಣವೂ ನ್ಯಾಯಾಲಯದಲ್ಲಿದೆ. ಪೊಲೀಸರು ತನಿಖೆ ಮಾಡುತ್ತಿದ್ದಾರೆ’ ಎಂದು ಹೇಳಿದರು.

ಭಿನ್ನಮತವಿಲ್ಲ: ‘ಬಿಜೆಪಿಯಲ್ಲಿ ಯಾವುದೇ ಭಿನ್ನಮತವಿಲ್ಲ’ ಎಂದು ಸ್ಪಷ್ಟಪಡಿಸಿದ ಬಸವರಾಜ ಬೊಮ್ಮಾಯಿ, ‘ಸಚಿವ ಬಿ.ಸಿ.ಪಾಟೀಲ್ ಅವರು ಮಂಡಿ ನೋವಿನ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆ  ಮಾಡಿಸಿಕೊಂಡಿದ್ದು, ಆಸ್ಪತ್ರೆಯಲ್ಲಿದ್ದಾರೆ. ಹೀಗಾಗಿ ಕಾರ್ಯಕ್ರಮಗಳಿಗೆ ಹಾಜರಾಗುತ್ತಿಲ್ಲ’ ಎಂದು ಸ್ಪಷ್ಟಣೆ ನೀಡಿದರು.

ಆಲೋಚನೆ ಇಲ್ಲ: ‘ರಾಜ್ಯದಲ್ಲಿನ ಪ್ರತಿ ಮನೆಗೆ 10 ಸಾವಿರ ಲೀಟರ್ ಉಚಿತವಾಗಿ ನೀರು ಕೊಡುವ ಬಗ್ಗೆ ಸರಕಾರ ಯಾವುದೇ ರೀತಿಯ ಆಲೋಚನೆ ಮಾಡಿಲ್ಲ’ ಎಂದ ಅವರು, ‘ಮಾಜಿ ಸಿಎಂ ಕುಮಾರಸ್ವಾಮಿ ಜೆಡಿಎಸ್‍ಗೆ ಬಹುಮತ ಬಂದರೆ ಅಲ್ಪಸಂಖ್ಯಾತರನ್ನು ಸಿಎಂ ಮಾಡುವುದಾಗಿ ಹೇಳಿದ್ದು, ಅವರ ಪಕ್ಷದ ನಿರ್ಣಯ. ಹೀಗಾಗಿ ನಾನು ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ನಿರಾಕರಿಸಿದರು.

Similar News