ಅನ್ನರಾಮಯ್ಯ, ಸಿದ್ರಾಮುಲ್ಲಾ ಖಾನ್ ಎಂದು ಕರೆದರೆ ಖುಷಿಪಡುವೆ: ಸಿದ್ದರಾಮಯ್ಯ
ಬೆಂಗಳೂರು, ಡಿ.7: ಮುಖ್ಯಮಂತ್ರಿಯಾಗಿ ಜನರಿಗಾಗಿ ಮಾಡಿರುವ ಸೇವೆಯನ್ನು ಗುರುತಿಸಿ ಬಹಳಷ್ಟು ಜನ ನನ್ನನ್ನು ‘ಅನ್ನರಾಮಯ್ಯ’, ರೈತರಾಮಯ್ಯ, ಕನ್ನಡ ರಾಮಯ್ಯ, ದಲಿತರಾಮಯ್ಯ ಎಂದೆಲ್ಲಾ ಕರೆಯುತ್ತಾರೆ. ಅದೇ ರೀತಿ ಮುಸ್ಲಿಮ್ ಸಮುದಾಯಕ್ಕೆ ನಾನು ಮಾಡಿರುವ ಕೆಲಸವನ್ನು ಗುರುತಿಸಿ ನನ್ನನ್ನು ‘ಸಿದ್ರಾಮುಲ್ಲಾ ಖಾನ್’ ಎಂದು ಕರೆದರೆ ಅದಕ್ಕೂ ಖುಷಿಪಡುವೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಿದ್ರಾಮುಲ್ಲಾ ಖಾನ್ ಎಂದು ನನ್ನ ಹೆಸರಿಗೆ ಮುಸ್ಲಿಮ್ ಹೆಸರು ಸೇರಿಸಿರುವ ಬಗ್ಗೆ ನನಗೇನು ಬೇಸರವಿಲ್ಲ. ಮುಸ್ಲಿಮ್ ಕುಟುಂಬದಲ್ಲಿ ಹುಟ್ಟಿ ಗೋವಿಂದ ಭಟ್ಟರ ಶಿಷ್ಯನಾಗಿ ಈಗಲೂ ನಮ್ಮ ಆತ್ಮಸಾಕ್ಷಿಯನ್ನು ಎಚ್ಚರಿಸುತ್ತಲೇ ಇರುವ ಸಂತ ಶಿಶುನಾಳ ಷರೀಫರ ಪರಂಪರೆ ನಮ್ಮದು ಎಂದು ಹೇಳಿದ್ದಾರೆ.
ಮುಸ್ಲಿಮ್ ಕುಟುಂಬದಲ್ಲಿ ಹುಟ್ಟಿ ಸಂತ ರಮಾನಂದರ ಶಿಷ್ಯತ್ವವನ್ನು ಒಪ್ಪಿಕೊಂಡು ಜಗಮೆಚ್ಚಿದ ಸೂಫಿ ಕವಿ ಕಬೀರನೂ ನಮ್ಮದೇ ಪರಂಪರೆಯವರು. ಆದುದರಿಂದ, ಮುಸ್ಲಿಮ್ ಹೆಸರನ್ನು ನನ್ನ ಹೆಸರಿಗೆ ಜೋಡಿಸುವ ಮೂಲಕ ಜಾತ್ಯತೀತತೆಯ ಮೇಲಿನ ನನ್ನ ನಂಬಿಕೆಯನ್ನು ಅವರು ಪುರಸ್ಕರಿಸಿದ್ದಾರೆಂದು ತಿಳಿದುಕೊಳ್ಳುವೆ ಎಂದು ಬಿಜೆಪಿ ನಾಯಕರಿಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಸುಳ್ಳು, ಅಪಪ್ರಚಾರ ಮತ್ತು ಚಾರಿತ್ರ್ಯಹನನವನ್ನೇ ರಾಜಕೀಯ ಪ್ರಚಾರದ ಸರಕನ್ನಾಗಿ ಮಾಡಿಕೊಂಡ ಭಾರತೀಯ ಜನತಾ ಪಕ್ಷ ನನ್ನ ಹೆಸರಿಗೆ ಮುಸ್ಲಿಮ್ ಹೆಸರು ಸೇರಿಸಿ ನಡೆಸುತ್ತಿರುವ ಅಪ ಪ್ರಚಾರದಲ್ಲಿ ಅಚ್ಚರಿಪಡುವಂತಹದ್ದೇನಿಲ್ಲ. ಇಂತಹ ಅಪ ಪ್ರಚಾರವಲ್ಲದೆ ಅವರಾದರೂ ಬೇರೆ ಏನು ಮಾಡಲು ಸಾಧ್ಯ? ಶೂನ್ಯ ಸಾಧನೆ, ಭ್ರಷ್ಟಾಚಾರ, ಅನಾಚಾರಗಳ ಮಸಿ ಬಳಿದುಕೊಂಡ ಮುಖವನ್ನು ತೋರಿಸಿ ಮತಯಾಚನೆ ಮಾಡಲಿಕ್ಕಾಗುತ್ತದೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.