ಬಾಬಾಬುಡನ್‍ಗಿರಿ-ದತ್ತಪೀಠದ ವಿಚಾರದಲ್ಲಿ ಕಾಂಗ್ರೆಸ್, ಬಿಜೆಪಿಯಿಂದ ಮತರಾಜಕಾರಣ: ಎಸ್.ಎಲ್.ಭೋಜೇಗೌಡ

Update: 2022-12-09 12:44 GMT

ಚಿಕ್ಕಮಗಳೂರು: ಬಾಬಾಬುಡನ್‍ಗಿರಿ-ದತ್ತಪೀಠ ವಿಚಾರದಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ರಾಜಕೀಯ ಲಾಭದ ಲೆಕ್ಕಾಚಾರದ ಹಿನ್ನೆಲೆಯಲ್ಲಿ ವಿವಾದವನ್ನು ಜೀವಂತವಾಗಿಟ್ಟುಕೊಂಡಿವೆ. ಎರಡೂ ಪಕ್ಷಗಳಿಗೂ ಸಮಸ್ಯೆ ಪರಿಹಾರಕ್ಕೆ ಎಲ್ಲ ಅವಕಾಶಗಳಿದ್ದರೂ ಸಮಸ್ಯೆಗೆ ಪರಿಹಾರ ಒದಗಿಸಲು ಮುಂದಾಗುತ್ತಿಲ್ಲ. ಈ ಬಾರಿ ದತ್ತಜಯಂತಿ ಆಚರಣೆ ವೇಳೆ ಜಿಲ್ಲಾಡಳಿತ ಆಡಳಿತ ಪಕ್ಷದವರ ಏಜೆಂಟ್‍ಗಳಂತೆ ಕೆಲಸ ಮಾಡಿ ಕಾನೂನುಗಳನ್ನು ಗಾಳಿಗೆ ತೂರಿದೆ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ 6 ತಿಂಗಳುಗಳಲ್ಲಿ ಈ ಸಮಸ್ಯೆಗೆ ಪರಿಹಾರ ಕಲ್ಪಿಸಲು ಬದ್ಧ, ತಪ್ಪಿದಲ್ಲಿ ತಾನು ರಾಜಕೀಯದಿಂದ ನಿವೃತ್ತಿ ಘೋಷಿಸುವುದಾಗಿ ಜೆಡಿಎಸ್ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ತಿಳಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಬಾ ಬುಡನ್‍ಗಿರಿ, ದತ್ತಪೀಠದ ಹೆಸರಿನಲ್ಲಿ ಎರಡು ರಾಜಕೀಯ ಪಕ್ಷಗಳು ಹಿಂದೂ, ಮುಸ್ಲಿಂ ಸಮುದಾಯಗಳ ಜನರನ್ನು ವಂಚಿಸುತ್ತಿವೆ. ಹಿಂದಿನ ಸಿದ್ದರಾಮಯ್ಯ ಸರಕಾರ 5 ವರ್ಷಗಳ ಕಾಲ ಅಧಿಕಾರ ನಡೆಸಿದ್ದು, ಈ ಅವಧಿಯಲ್ಲಿ ಸಮಸ್ಯೆ ಪರಿಹಾರಕ್ಕೆ ಅವಕಾಶಗಳಿದ್ದರೂ ಸರಕಾರ ಸಮಸ್ಯೆಗೆ ಪರಿಹಾರ ಒದಗಿಸಲು ವಿಫಲವಾಗಿದೆ. ಅಲ್ಲದೇ ಯಡಿಯೂರಪ್ಪ ಹಾಗೂ ಸಿಎಂ ಬೊಮ್ಮಾಯಿ ನೇತೃತ್ವದ ಸರಕಾರ ಎಂಟೂವರೆ ವರ್ಷಗಳ ಕಾಲ ಅಧಿಕಾರದಲ್ಲಿದ್ದರೂ ಸಮಸ್ಯೆಗೆ ಪೂರ್ಣಪ್ರಮಾಣದಲ್ಲಿ ಪರಿಹಾರ ನೀಡಿಲ್ಲ. ಎರಡೂ ಪಕ್ಷಗಳು ತಮ್ಮ ಅಧಿಕಾರವಧಿಯಲ್ಲಿ ಈ ವಿವಾದದ ವಿಷಯದಲ್ಲಿ ಸಮಸ್ಯೆಗಳನ್ನು ಹುಟ್ಟು ಹಾಕಿ ಜಿಲ್ಲೆಯಲ್ಲಿನ ಸಾಮರಸ್ಯವನ್ನು ಹಾಳು ಗೆಡಸವುತ್ತಿವೆ. ದತ್ತಪೀಠದ ವಿಚಾರವನ್ನು ಎರಡೂ ಪಕ್ಷಗಳು ಮತ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿವೆ ಎಂದು ಆರೋಪಿಸಿದರು.

ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಜಾತಿ, ಧರ್ಮ, ದೇವರುಗಳ ವಿಚಾರದಲ್ಲಿ ಅಧಿಕಾರಕ್ಕಾಗಿ ದೊಂಬರಾಟ ಮಾಡುತ್ತಿದ್ದು, ಅಧಿಕಾರಕ್ಕಾಗಿ ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ಒಲೈಸುತ್ತಿದ್ದರೇ, ಬಿಜೆಪಿ ಹಿಂದುಗಳನ್ನು ಓಲೈಸುತ್ತಿದೆ ಎಂದು ಟೀಕಿಸಿದ ಭೋಜೇಗೌಡ, ಬಾಬಾ ಬುಡನ್‍ಗಿರಿ ಹಾಗೂ ದತ್ತಪಿಠದ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸರಕಾರದ ಅವಧಿಯಲ್ಲಿ ಎರಡೂ ಸಮುದಾಯದ ಮುಖಂಡರೊಂದಿಗೆ ಸಾಮರಸ್ಯ ಮೂಡಿಸುವ ಸಲುವಾಗಿ ಒಂದೇ ಒಂದು ಸಭೆ ನಡೆಸಿಲ್ಲ, ಸರ್ವ ಪಕ್ಷಗಳ ಸಭೆಯನ್ನೂ ಕರೆದಿಲ್ಲ. ಸಮಸ್ಯೆಯನ್ನು ಜೀವಂತವಾಗಿಟ್ಟು ಎರಡೂ ಪಕ್ಷಗಳು ರಾಜಕಾರಣ ಮಾಡುತ್ತಿದ್ದು, ಈ ವಿಚಾರದಲ್ಲಿ ಸಾಮರಸ್ಯ ಮೂಡಿಸುವ ಕೆಲಸವನ್ನು ಮಾಡುತ್ತಿಲ್ಲ ಎಂದರು.

ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ದತ್ತ ಜಯಂತಿ ಆಚರಣೆ ನಡೆದಿದ್ದು, ಈ ವೇಳೆ ಆಡಳಿತ ಪಕ್ಷದವರು ಹಾಗೂ ಜಿಲ್ಲಾಡಳಿತ ಕಾನೂನುಗಳನ್ನು ಗಾಳಿಗೆ ತೂರಿದ್ದಾರೆ. ಗುರುವಾರ ನಡೆದ ಪಾದುಕೆಗಳ ಪೂಜೆ, ಹೋಮ ಹವನದ ಸಂದರ್ಭ ನ್ಯಾಯಾಲಯದ ಯಥಾಸ್ಥಿತಿ ಆದೇಶಕ್ಕೆ ಧಕ್ಕೆಯಾಗಿರುವುದು ಹಲವು ವಿಡಿಯೋಗಳಲ್ಲಿ ಕಂಡು ಬಂದಿದೆ. ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ವ್ಯವಸ್ಥಾಪನ ಸಮಿತಿಗೆ ನೀಡಿರುವ ಅಧಿಕಾರವನ್ನೂ ಸಮಿತಿ ಸದಸ್ಯರು ದುರ್ಬಳಕೆ ಮಾಡಿಕೊಂಡಿರುವುದು ಕಂಡು ಬಂದಿದೆ ಎಂದ ಅವರು, ವಿವಾದಿತ ಕೇಂದ್ರದ ಬಗ್ಗೆ ಸದ್ಯ ಸರಕಾರ ಕೈಗೊಂಡಿರುವ ಕ್ರಮಗಳನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಬೇಕು. ಜನರನ್ನು ಕತ್ತಲೆಯಲ್ಲಿಟ್ಟು ಬೇಕಾಬಿಟ್ಟಿ ಆಚರಣೆಗಳನ್ನು ಮಾಡುವುದು ಸಂಘರ್ಷಕ್ಕೆ ಕಾರಣವಾಗಬಹುದು ಎಂದು ಅವರು ಎಚ್ಚರಿಸಿದರು.

ದತ್ತಜಯಂತಿ ಆಚರಣೆಗೆ ಜಿಲ್ಲಾಡಳಿತ ಸರಕಾರದ ಒತ್ತಡಕ್ಕೆ ಮಣಿದು ಎಲ್ಲದಕ್ಕೂ ಕಣ್ಮುಚ್ಚಿಕೊಂಡು ಅನುಮತಿ ನೀಡಿದೆ. ಧ್ವನಿವರ್ಧಕಗಳ ಬಳಕೆಗೆ ನ್ಯಾಯಾಲದ ನಿರ್ಬಂಧ ಇದ್ದರೂ ಕಳೆದ ಬುಧವಾರ ನಗರದಲ್ಲಿ ನಡೆದ ಶೋಭಾಯಾತ್ರೆ ವೇಳೆ ನೂರಾರು ಧ್ವನಿವರ್ಧಕಗಳಿಗೆ ಅನುಮತಿ ನೀಡಲಾಗಿದೆ. ಸರಕಾರಿ ಆಸ್ಪತ್ರೆ ಇರುವ ಸ್ಥಳದಲ್ಲಿ ಡಿಜೆ ಅಬ್ಬರ ಕೇಳಿ ಬಂದಿದ್ದು, ಇದರಿಂದ ಆಸ್ಪತ್ರೆಯಲ್ಲಿದ್ದ ರೋಗಿಗಳು, ಬಾಣಂತಿಯರು ತೊಂದರೆ ಅನುಭವಿಸಿದ್ದಾರೆ, ಗುರುವಾರ ದತ್ತಜಯಂತಿ ವೇಳೆ ನೂರಾರು ವಾಹನಗಳಲ್ಲಿ ಡಿಜೆ, ಧ್ವನಿವರ್ಧಕಗಳನ್ನು ಬೇಕಾಬಿಟ್ಟಿ ಬಳಸಿದ್ದಾರೆ. ಯಾವುದಕ್ಕೂ ಅನುಮತಿ ಪಡೆದುಕೊಂಡಿಲ್ಲ. ಡ್ರೈವಿಂಗ್ ಲೈಸೆನ್ಸ್ ಇಲ್ಲದವರು ಬೇಕಾಬಿಟ್ಟಿಯಾಗಿ ಬೈಕ್ ಓಡಿಸಿದ್ದಾರೆ. ತ್ರಿಬಲ್ ರೈಡಿಂಗ್ ಮಾಡಿದ್ದರೂ ಪೊಲೀಸರು ಕ್ಯಾರೆ ಎಂದಿಲ್ಲ. ಶೋಭಾಯಾತ್ರೆ, ದತ್ತಜಯಂತಿ ವೇಳೆ ಕಿಡಿಗೇಡಿಗಳು ಕಾನೂನು ಉಲ್ಲಂಘನೆ ಮಾಡಿದ್ದರೂ ಪೊಲೀಸರು ಯಾರ ವಿರುದ್ಧವೂ ಕ್ರಮಕೈಗೊಂಡಿ. ಕಾನೂನು ಉಲ್ಲಂಘನೆ ಮಾಡಿರುವ ಬಗ್ಗೆ ಒಂದೇ ಒಂದು ಪ್ರಕರಣ ದಾಖಲಿಸಿಲ್ಲ. ಎಸ್ಪಿ, ಡಿಸಿ ತಮ್ಮ ಕರ್ತವ್ಯವನ್ನೂ ಸರಿಯಾಗಿ ನಿರ್ವಹಿಸದೇ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಭೋಜೇಗೌಡ ಆರೋಪಿಸಿದರು.

ದತ್ತಜಯಂತಿ ಆಚರಣೆ ವೇಳೆ ಆಗಿರುವ ಕಾನೂನು ಉಲ್ಲಂಘನೆಗೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯೇ ಹೊಣೆ. ಜಿಲ್ಲೆಯಲ್ಲಿರುವ ಎಸ್ಪಿ, ಡಿಸಿ ಬಿಜೆಪಿ ಪಕ್ಷದ ಏಜೆಂಟ್‍ಗಳಂತೆ ಕಾರ್ಯನಿರ್ವಹಿಸಿದ್ದು, ಈ ಸಂಬಂಧ ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಸರಕಾರವನ್ನು ಆಗ್ರಹಿಸಿದ ಅವರು, ಬಾಬಾಬುಡನ್‍ಗಿರಿ, ದತ್ತಪೀಠದ ವಿಚಾರದಲ್ಲಿ ರಾಜಕಾರಣ ಮಾಡುವುದನ್ನು ಬಿಟ್ಟು ಎರಡೂ ಸಮುದಾಯದವರಲ್ಲಿ ಸಾಮರಸ್ಯ ಮೂಡಿಸುವ ಕೆಲಸ ಮಾಡಬೇಕು. ಇದನ್ನು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಮಾಡುವುದಿಲ್ಲ, ಜಾತಿ, ಧರ್ಮ, ದೇವರುಗಳ ವಿಚಾರದಲ್ಲಿ ಜೆಡಿಎಸ್ ಎಂದಿಗೂ ರಾಜಕಾರಣ ಮಾಡಿಲ್ಲ, ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಸಾಮರಸ್ಯಕ್ಕೆ ಒತ್ತು ನೀಡಿ ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ತಿಮ್ಮಶೆಟ್ಟಿ, ಎ.ಸಿ.ಕುಮಾರ್, ಸಿ.ಕೆ.ಮೂರ್ತಿ, ಹೊಲದಗದ್ದೆ ಗಿರೀಶ್, ಚಿದಾನಂದ್ ಉಪಸ್ಥಿತರಿದ್ದರು.

Similar News