ಒಗ್ಗಟ್ಟಿನಿಂದ ಕೆಲಸ ಮಾಡಿ ಕಾಂಗ್ರೆಸ್ ಅಧಿಕಾರಕ್ಕೆ ತನ್ನಿ: ಮಲ್ಲಿಕಾರ್ಜುನ ಖರ್ಗೆ

AICC ಅಧ್ಯಕ್ಷರಾದ ಬಳಿಕ ಖರ್ಗೆ ಮೊದಲ ಬಾರಿ ಕಲಬುರಗಿ ಭೇಟಿ; ಅದ್ದೂರಿ ಸ್ವಾಗತ

Update: 2022-12-10 16:16 GMT

ಕಲಬುರಗಿ, ಡಿ. 10: ‘ಗುಜರಾತ್ ನಂತರ ಈಗ ರಾಜ್ಯಕ್ಕೆ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ  ಶಾ ಬರುತ್ತಿದ್ದಾರೆ. ನಾನು ನಮ್ಮ ಪಕ್ಷದ ನಾಯಕರಿಗೆ ಹೇಳುವುದಿಷ್ಟೇ ನೀವೆಲ್ಲ ಒಗ್ಗಟ್ಟಾಗಿ ಕೆಲಸ ಮಾಡಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತನ್ನಿ, ಯಾರು ಸಿಎಂ ಆಗುತ್ತಾರೆ, ಯಾರು ಮಂತ್ರಿ ಆಗುತ್ತಾರೆ ಅದನ್ನು ಹೈಕಮಾಂಡ್ ನಿರ್ಧಾರ ಮಾಡಲಿದೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.

ಶನಿವಾರ ನಗರದ ಎನ್.ವಿ.ಮೈದಾನದಲ್ಲಿ ಆಯೋಜಿಸಲಾಗಿದ್ದ ‘ಕಲ್ಯಾಣ ಕ್ರಾಂತಿ ಅಭಿನಂದನಾ ಸಮಾರಂಭ’ದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ‘ನಾವೇ ಕಚ್ಚಾಡಿದರೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುತ್ತದೆ. ಹಾಗಾಗಿ, ನೀವೆಲ್ಲ ಒಂದಾಗಿ ಕೆಲಸ ಮಾಡಿ. ಹಿಮಾಚಲ ಪ್ರದೇಶದಲ್ಲಿ 10 ಅಂಶದ ಕಾರ್ಯಕ್ರಮ ಕೊಟ್ಟಿದ್ದರಿಂದ ನಾವು ಗೆದ್ದಿದ್ದೇವೆ. ನಾಳೆ ನೂತನ ಮುಖ್ಯಮಂತ್ರಿ ಮಾಡಲಿದ್ದೇವೆ. ಇಲ್ಲಿಯೂ ಅದೇ ರೀತಿಯಲ್ಲಿ ಕೆಲಸ ಮಾಡಬೇಕು. ನನ್ನ ಸಂಪೂರ್ಣ ಬೆಂಬಲ ಇರುತ್ತದೆ. ನಾನು ಯಾರ ಪರ ಇಲ್ಲ, ನನಗೆ ಬೇಕಾಗಿರುವುದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು’ ಎಂದು ಕರೆ ನೀಡಿದರು.

‘ನಾನು ಶಾಸಕಾಂಗ ಪಕ್ಷದ ನಾಯಕನಾಗಿ ಕೆಲಸ ಮಾಡುವಾಗ ಸೋನಿಯಾ ಗಾಂಧಿ ಸಂಸತ್ತಿಗೆ ಆಗಮಿಸಬೇಕು, ನಿಮ್ಮನ್ನು ಕೇಂದ್ರದ ಮಂತ್ರಿ ಮಾಡಲಾಗುವುದು ಎಂಬ ಭರವಸೆ ನೀಡಿದರು. ಕಾಂಗ್ರೆಸ್ ಸರಕಾರ ಬಂದರೆ ಹೈದರಾಬಾದ್ ಕರ್ನಾಟಕಕ್ಕೆ 371ಜೆ ವಿಶೇಷ ಸ್ಥಾನಮಾನ ನೀಡುವುದಾದರೆ ನಾನು ಸ್ಪರ್ಧಿಸುತ್ತೇನೆ ಎಂದು ಹೇಳಿದೆ. ಆಗ ಅವರು ಇದು ಸಾಧ್ಯವೇ ಎಂದು ಕೇಳಿದ್ದರು ಎಂದು ಖರ್ಗೆ ತಿಳಿಸಿದರು.

ಹಿಂದಿನ ಗೃಹ ಸಚಿವರಾಗಿದ್ದ ಅಡ್ವಾಣಿ ಈ ಪ್ರಸ್ತಾವ ತಿರಸ್ಕರಿಸಿದ್ದು, ನಾವು ಈ ಬಗ್ಗೆ ಆಶ್ವಾಸನೆ ನೀಡುವುದು ಸರಿಯಲ್ಲ ಎಂದು ಕೆಲವರು ಅವರಿಗೆ ಸಲಹೆ ನೀಡಿದ್ದರು. ಆಗ ನಾನು ಅವರನ್ನು ಭೇಟಿ ಮಾಡಿ ಬಿಜೆಪಿಯವರು ತಿರಸ್ಕರಿಸಿದ ಮಾತ್ರಕ್ಕೆ ಅದು ಅಂತಿಮವಲ್ಲ. ನಾವು ಅದಕ್ಕೆ ಪುನರ್‍ಜೀವ ನೀಡಬಹುದು ಎಂದು ಹೇಳಿದೆ. ಅವರು ಇದೇ ಮೈದಾನದಲ್ಲಿ ಖರ್ಗೆ ಅವರನ್ನು ಆರಿಸಿದರೆ ಈ ಭಾಗಕ್ಕೆ 371ಜೆ ವಿಶೇಷ ಸ್ಥಾನಮಾನ ನೀಡುವ ಆಶ್ವಾಸನೆ ನೀಡಿದರು. ಹೀಗಾಗಿ ನಾನು ಸಂಸತ್ ಚುನಾವಣೆಯಲ್ಲಿ ಸ್ಪರ್ಧಿಸಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್ ಪಕ್ಷಕ್ಕೆ ಸಂಖ್ಯಾಬಲ ಇರಲಿಲ್ಲ. ಕೇವಲ 208 ಸ್ಥಾನಗಳು ಮಾತ್ರ ಇದ್ದವು. ಆ ತಿದ್ದುಪಡಿಗೆ 381 ಸಂಸದರ ಬೆಂಬಲ ಅಗತ್ಯವಿತ್ತು. ನಮ್ಮ ಮೈತ್ರಿ ಪಕ್ಷಗಳ ಮುಖಂಡರನ್ನು ಸಂಪರ್ಕಿಸಿ, ಮನವರಿಕೆ ಮಾಡಿಕೊಟ್ಟೆ. ಸೋನಿಯಾ ಗಾಂಧಿ ಅವರು ಕೆಲವರಿಗೆ ದೂರವಾಣಿ ಕರೆ ಮೂಲಕ ಸಹಕಾರ ನೀಡುವಂತೆ ಕೇಳಿದರು. ಉಳಿದಂತೆ ನಾನು ಎಲ್ಲ ಪಕ್ಷಗಳ ಮುಖಂಡರು, ಸಂಸದರ ನಿವಾಸ, ಕಚೇರಿಗಳಿಗೆ ಖುದ್ದಾಗಿ ಭೇಟಿ ನೀಡಿ ಸಹಕಾರ ನೀಡುವಂತೆ ಮನವಿ ಮಾಡಿ ಸಂಖ್ಯಾಬಲವನ್ನು ಕ್ರೋಢೀಕರಿಸಿದೆ ಎಂದು ಅವರು ತಿಳಿಸಿದರು.

ನಂತರ 2013ರಲ್ಲಿ ಇದಕ್ಕೆ ಅನುಮೋದನೆ ಪಡೆದುಕೊಂಡೆ. ನಂತರ ರಾಜ್ಯದಲ್ಲಿ ನಮ್ಮ ಸಿದ್ದರಾಮಯ್ಯ ಸರಕಾರ ಇದ್ದ ಕಾರಣ ಎಚ್.ಕೆ.ಪಾಟೀಲ್ ನೇತೃತ್ವದಲ್ಲಿ ಸಂಪುಟ ಉಪ ಸಮಿತಿ ರಚನೆ ಮಾಡಲಾಯಿತು. ದೇಶದ ಇತಿಹಾಸದಲ್ಲಿ ಯಾರೂ ಇಷ್ಟು ವೇಗವಾಗಿ ಸಂವಿಧಾನ ತಿದ್ದುಪಡಿ ಮಾಡಿ ಅದನ್ನು ಅನುಷ್ಠಾನಕ್ಕೆ ತಂದಿಲ್ಲ. ಇದು ಕಾಂಗ್ರೆಸ್ ಪಕ್ಷದ ಬದ್ಧತೆ ಎಂದು ಖರ್ಗೆ ತಿಳಿಸಿದರು.

ಈ ತಿದ್ದುಪಡಿಯಿಂದಾಗಿ ಸಾವಿರಾರು ಜನರಿಗೆ ಸರಕಾರಿ ಹುದ್ದೆ, ವಿದ್ಯಾರ್ಥಿಗಳಿಗೆ ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟು ಸಿಗುತ್ತಿದೆ. ನಮ್ಮ ಸರಕಾರ ಇದ್ದಾಗ 1500 ಕೋಟಿ ರೂ.ಗಳನ್ನು ಈ ಭಾಗಕ್ಕೆ ನೀಡುವುದಾಗಿ ಹೇಳಿದ್ದೆವು. ನಂತರ ಬಂದ ಬಿಜೆಪಿ ಸರಕಾರ ಆ ಹಣ ನೀಡದೆ, ಅದನ್ನು ಇಲಾಖೆಗೆ ವರ್ಗಾವಣೆ ಮಾಡಿತು. ಬೊಮ್ಮಾಯಿ ಮಾತೆತ್ತಿದರೆ ನಾವು ಉತ್ತರ ಕರ್ನಾಟಕದವರು ಎಂದು ಹೇಳುತ್ತಾರೆ. ಹಾಗಾದರೆ ನಾವು ಉತ್ತರ ಕರ್ನಾಟಕದ ಭಾಗವಲ್ಲವೇ? ಕರ್ನಾಟಕದ ಹಿಂದುಳಿದ ಭಾಗದ ಅಭಿವೃದ್ಧಿಗೆ ಬಿಜೆಪಿ ಸರಕಾರ ಹಣ ನೀಡದಿದ್ದರೆ ಅದು ಯಾರ ತಪ್ಪು? ಎಂದು ಅವರು ಪ್ರಶ್ನಿಸಿದರು.

ಭ್ರಮೆಗಳಿಂದ ಹೊಟ್ಟೆ ತುಂಬುವುದಿಲ್ಲ. ಜನರಿಗೆ ದುಡಿಯಲು ಕೆಲಸ ಬೇಕು. ನಿರುದ್ಯೋಗ ಪ್ರಮಾಣ ಹೆಚ್ಚಾಗಿದೆ. ರಾಜ್ಯದಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಇವೆ. ಕಲ್ಯಾಣ ಕರ್ನಾಟಕದಲ್ಲಿ ಸಾವಿರಾರು ಹುದ್ದೆಗಳಿವೆಯಾದರೂ ಯಾಕೆ ತುಂಬುತ್ತಿಲ್ಲ. 50 ಸಾವಿರ ಜನರಿಗೆ ಉದ್ಯೋಗ ನೀಡಬಹುದು. ನಮ್ಮ ಸರಕಾರ ಅಧಿಕಾರಕ್ಕೆ ಬಂದು ಕೇವಲ ಹೈದರಾಬಾದ್ ಕರ್ನಾಟಕ ಮಾತ್ರವಲ್ಲ ರಾಜ್ಯದಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ತುಂಬುತ್ತದೆ. ಇದನ್ನು ಮಾಡದಿದ್ದರೆ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಲು ಸಾಧ್ಯವಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ನಾನು ಗುಜರಾತ್ ಗೆ ಹೋಗಿದ್ದಾಗ ಪ್ರಧಾನಿ ಮೋದಿ 70 ಸಾವಿರ ಜನರಿಗೆ ಸರ್ಟಿಫಿಕೇಟ್ ಹಂಚುವ ಫೋಟೋ ಟಿವಿಯಲ್ಲಿ ನೋಡಿದೆ. ಸರಕಾರಿ ಹುದ್ದೆಗಳನ್ನು ತುಂಬಿ ಅದರ ನೇಮಕಾತಿ ಪತ್ರವನ್ನು ಪ್ರಧಾನಿ ಕೊಟ್ಟು ಪ್ರಚಾರ ಪಡೆದರು. ಅದೇ ರೀತಿ ಗುಜರಾತಿನಲ್ಲೂ ಮಾಡಿದ್ದಾರೆ. ದೇಶಾದ್ಯಂತ 30 ಲಕ್ಷ ಸರಕಾರಿ, ಅರೆ ಸರಕಾರಿ, ಸೇನೆ, ಪೊಲೀಸ್, ಬ್ಯಾಂಕ್ ಗಳಲ್ಲಿನ ಹುದ್ದೆಗಳು ಖಾಲಿ ಇವೆ. ರಾಜ್ಯದಲ್ಲೂ ಉದ್ಯೋಗಗಳು ಖಾಲಿ ಇವೆ ಎಂದು ಅವರು ತಿಳಿಸಿದರು.

70 ಸಾವಿರ ನೇಮಕಾತಿ ಪತ್ರ ನೀಡುವ ಫೋಟೋ ಪ್ರಚಾರ ಪಡೆಯುವವರು 30 ಲಕ್ಷ ಖಾಲಿ ಹುದ್ದೆ ಇರುವುದನ್ನು ತೋರುವುದಿಲ್ಲ. ಈ ಹುದ್ದೆ ತುಂಬಿದರೆ 30 ಲಕ್ಷ ಕುಟುಂಬದಲ್ಲಿ 2 ಕೋಟಿ ಜನರ ಜೀವನಕ್ಕೆ ಆಸರೆಯಾಗಲಿದೆ. ಇದನ್ನು ಬಿಜೆಪಿ ಮಾಡುತ್ತಿಲ್ಲ. ಅವರು ಹೇಳಿದ ವರ್ಷಕ್ಕೆ 2 ಕೋಟಿ ಉದ್ಯೋಗ ಎಲ್ಲಿ ಹೋದವೋ ಗೊತ್ತಿಲ್ಲ. ಸುಳ್ಳು ಭರವಸೆ ನೀಡಿದರು. ಯಾವುದೂ ಸಾಧ್ಯವಾಗಿಲ್ಲ. ಆದರೆ ನಾವು ನೀಡುತ್ತಿರುವ ಭರವಸೆ ಈಡೇರಿಸುತ್ತೇವೆ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

ನಾವು ಈ ಭಾಗಕ್ಕೆ 10 ಅಂಶಗಳ ಕಾರ್ಯಕ್ರಮ ಮಾಡಿದ್ದೇವೆ. ಮೊದಲ ವರ್ಷ ಈ ಭಾಗದ ಅಭಿವೃದ್ಧಿಗೆ 5 ಸಾವಿರ ಕೋಟಿ, ನಂತರ ಪ್ರತಿ ವರ್ಷ ಈ ಅನುದಾನದ ಮೊತ್ತ ಏರಿಕೆಯಾಗಲಿದೆ. ಈ ಭಾಗದ ಜನರಿಗಾಗಿ ನೂತನ ಕೈಗಾರಿಕೆ ನೀತಿ ಮಾಡುತ್ತೇವೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ 1 ಲಕ್ಷ ಹುದ್ದೆಗಳನ್ನು ಸೃಷ್ಟಿಸಿ 7 ಜಿಲ್ಲೆಗಳ ಜನರಿಗೆ ಅನುಕೂಲ ಮಾಡಿಕೊಡುತ್ತೇವೆ. ಕೃಷ್ಣ ಜಲಭಾಗ್ಯ, ಗೋದಾವರಿ ಭಾಗದ ನೀರಾವರಿ ಯೋಜನೆ ಪೂರ್ಣಗೊಳಿಸಲು ಅಗತ್ಯ ಅನುದಾನ ನೀಡಲಾಗುವುದು. ಪ್ರತಿ ಜಿಲ್ಲಾ ಕೇಂದ್ರದಲ್ಲಿ ನಮ್ಮ ಭರವಸೆ ಈಡೇರಿಸಲು ಸಮಿತಿ ಮಾಡಿ ಅನುಷ್ಠಾನಕ್ಕೆ ತರುತ್ತೇವೆ ಎಂದು ಅವರು ಹೇಳಿದರು.

ಕೇಂದ್ರಕ್ಕೆ ಮನವಿ ಮಾಡಿ ಐಐಟಿ, ಏಮ್ಸ್ ಸಂಸ್ಥೆಗಳು ಕಲ್ಯಾಣ ಕರ್ನಾಟಕಕ್ಕೆ ನೀಡುವಂತೆ ಕೋರುತ್ತೇವೆ. ಪ್ರತಿ ಜಿಲ್ಲೆಗಳಲ್ಲಿ, ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಮಹಿಳೆಯರಿಗೆ ಪದವಿ ಕಾಲೇಜುಗಳ ಸ್ಥಾಪನೆ ಮಾಡುತ್ತೇವೆ. ಎಲ್ಲ ಕುಟುಂಬಗಳಿಗೆ 5 ವರ್ಷಗಳಲ್ಲಿ ಮನೆಗಳ ನಿರ್ಮಾಣ ಮಾಡುತ್ತೇವೆ. ಪ್ರತಿ ಗ್ರಾಮ ಪಂಚಾಯ್ತಿಗೆ ಹೆಚ್ಚಿನ ಅನುದಾನ ನೀಡಲಾಗುವುದು ಎಂದು ಅವರು ಹೇಳಿದರು.

ಕೆಲವರ ತಲೆಯಲ್ಲಿ ಬಿಜೆಪಿ ಬಗ್ಗೆ ಯಾಕೆ ಆಸಕ್ತಿ ಇದೆಯೋ ಗೊತ್ತಿಲ್ಲ. ಅವರು ರಾಜ್ಯಕ್ಕೆ ಯಾವುದೇ ಕೊಡುಗೆ ನೀಡಿಲ್ಲ, ಬಂಡವಾಳ, ಕೈಗಾರಿಕೆ ತಂದಿಲ್ಲದಿದ್ದರೂ ಮೋದಿ ಹೆಸರು ಜಪಿಸುತ್ತಿದ್ದಾರೆ. ಹೀಗಾಗಿ ವೇದಿಕೆ ಮೇಲಿರುವ ಎಲ್ಲ ಮುಖಂಡರು ಬಿಜೆಪಿ, ಮೋದಿ, ಶಾ ಹೇಗೆ ಹಳ್ಳಿ ಹಳ್ಳಿಗೆ ಹೋಗಿ ಪ್ರಚಾರ ಮಾಡುವಂತೆ ನೀವು ಜನರ ಬಳಿ ಹೋಗಿ ಪ್ರಚಾರ ಮಾಡಬೇಕು. ನಾವು ಒಂದಾಗಿ ಕೆಲಸ ಮಾಡದಿದ್ದರೆ ನಮ್ಮನ್ನು ನಂಬಿದ ಜನರಿಗೆ ಮೋಸ ಮಾಡಿದಂತಾಗುತ್ತದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ವಿಪಕ್ಷ ನಾಯಕರಾದ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್, ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸಲೀಂ ಅಹ್ಮದ್, ಧ್ರುವ ನಾರಾಯಣ್, ಸತೀಶ್ ಜಾರಕಿಹೊಳಿ, ಮುಖಂಡರಾದ ಕೆ.ಎಚ್.ಮುನಿಯಪ್ಪ, ಡಾ.ಜಿ.ಪರಮೇಶ್ವರ್, ಡಾ.ಎಚ್.ಸಿ.ಮಹದೇವಪ್ಪ, ಅಲ್ಲಂ ವೀರಭದ್ರಪ್ಪ, ಎಚ್.ಕೆ.ಪಾಟೀಲ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Similar News