ಶಿವಮೊಗ್ಗ | 5 ಲಕ್ಷ ರೂ. ಸುಪಾರಿ ಕೊಟ್ಟು ತಂದೆಯನ್ನೇ ಕೊಲೆ ಮಾಡಿಸಿದ ಮಕ್ಕಳು: ಐವರು ಆರೋಪಿಗಳ ಬಂಧನ

Update: 2022-12-12 08:40 GMT

ಶಿವಮೊಗ್ಗ: ಆಸ್ತಿ ವಿಚಾರವಾಗಿ ತಂದೆಯನ್ನೇ ಸುಪಾರಿ ಕೊಟ್ಟು ಕೊಲೆ ಮಾಡಿಸಿರುವ ಘಟನೆ  ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ನಡೆದಿರುವುದಾಗಿ ವರದಿಯಾಗಿದೆ.

ಭೋಗಿ ಗ್ರಾಮದ ರಿಝ್ವಾನ್, ಹಬೀಬುಲ್ಲಾ, ಸುಹೇಲ್ ಕೊಲೆಗೈದವರು. ಮಂಜುನಾಥ್, ಉಮೇಶ್, ರಿಜ್ವಾನ್, ಹಬೀಬ್ ಉಲ್ಲಾ ಹಾಗೂ ಸುಹೇಲ್ ಬಾಷಾ ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ನವೆಂಬರ್ 29ರಂದು ಕೆಎಸ್ಆರ್ ಪಿಯ ನಿವೃತ್ತ ಎಆರ್ ಎಸ್ಐ ನಾಗೇಂದ್ರಪ್ಪ ಎಂಬವರ ಮೃತದೇಹ ಚರಂಡಿಯಲ್ಲಿ ಪತ್ತೆಯಾಗಿತ್ತು. ಇವರು ಶಿರಾಳಕೊಪ್ಪದ ಭೋಗಿ ಗ್ರಾಮದವರು. ಆಸ್ತಿ ವಿಚಾರದಲ್ಲಿ ಕೊಲೆಯಾಗಿರುವ ಶಂಕೆಯಲ್ಲಿ ತನಿಖೆ ನಡೆಸಿದ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಮೂಲಕ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ  ನಡೆದ ಘಟನೆಯನ್ನು ಪೊಲೀಸರು ಭೇದಿಸಿದ್ದಾರೆ

ಭದ್ರಾವತಿ ಕೋರ್ಟ್ ಗೆ ಹೋಗಿ, ವಾಪಾಸ್ ಶಿಕಾರಿಪುರಕ್ಕೆ ಬಂದಿದ್ದ ನಾಗೇಂದ್ರಪ್ಪ ಅವರನ್ನು ತಮ್ಮ ಆಟೋದಲ್ಲಿ ಹತ್ತಿಸಿಕೊಂಡಿದ್ದ ಆರೋಪಿಗಳು ಪುಣೇದಹಳ್ಳಿ ಗ್ರಾಮದ ಬಳಿ ಕರೆದೊಯ್ದು, ಬಲವಂತದಿಂದ ನಶೆ ಬರುವ ಔಷಧಿ ಕುಡಿಸಿದ್ದರು. ಬಳಿಕ ಉಸಿರುಗಟ್ಟಿಸಿ ಸಾಯಿಸಿ, ಅದೇ ಆಟೋದಲ್ಲಿ ಶವ ಸಾಗಿಸಿ ಉಡುಗಣಿ ಗ್ರಾಮದಿಂದ ಕುಸ್ಕೂರು ಗ್ರಾಮಕ್ಕೆ ಹೋಗುವ ರಸ್ತೆ ಪಕ್ಕದಲಿ ಚರಂಡಿಗೆ ಶವ ಎಸೆದಿದ್ದಾರೆನ್ನಲಾಗಿದೆ.

ಇದಕ್ಕೂ ಮುನ್ನ ನ. 9ರಂದು ಸಹ ಅವರ ಕೊಲೆ ಯತ್ನ ನಡೆದಿತ್ತು. ಲಗೇಜ್ ಆಟೋದಿಂದ ನಾಗೇಂದ್ರಪ್ಪ ಬೈಕ್ ಗೆ ಢಿಕ್ಕಿ ಹೊಡೆಸಲಾಗಿತ್ತು. ಈ ವೇಳೆ ನಾಗೇಂದ್ರಪ್ಪ ಪ್ರಾಣಾಪಾಯದಿಂದ ಪಾರಾಗಿದ್ದರು .ಈ ಘಟನೆ ಬಗ್ಗೆ ದೂರು ಸಹ ದಾಖಲಾಗಿರಲಿಲ್ಲ.

ತಂದೆಯ ಕೊಲೆಗೆ 5 ಲಕ್ಷ ರೂ. ಸುಪಾರಿ: ನಾಗೇಂದ್ರಪ್ಪನವರಿಗೆ ಐದೂವರೆ ಎಕರೆ ಭೂಮಿ ಇತ್ತು. ನಾಗೇಂದ್ರಪ್ಪನವರಿಗೆ ಐವರು ಮಕ್ಕಳಿದ್ದು, ಪತ್ನಿ ನಿಧನಗೊಂಡಿದ್ದರಿಂದ ಎರಡು ವರ್ಷಗಳ ಹಿಂದೆ ವಿಧವೆಯೊಬ್ಬರನ್ನು ವಿವಾಹವಾಗಿದ್ದರು. ಮಕ್ಕಳೇ ಮುಂದೆ ನಿಂತು ಮದುವೆ ಮಾಡಿಸಿದ್ದರು. ಎರಡನೇ ಮದುವೆಯಿಂದ ಗಂಡುಮಗು ಜನಿಸಿತ್ತು. ತಮಗೆ ಆಸ್ತಿ ಪಾಲು ಕೊಡುವಂತೆ ಮೊದಲ ಹೆಂಡತಿ, ಮಕ್ಕಳು ನಾಗೇಂದ್ರಪ್ಪನಿಗೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ.

ನಾಗೇಂದ್ರಪ್ಪ ಆಸ್ತಿ ಪಾಲಿಗೆ ನಿರಾಕರಿಸಿದ್ದರು. ಊರಲ್ಲಿ ನ್ಯಾಯ ಪಂಚಾಯಿತಿ ನಡೆದು, ಐದೂವರೆ ಎಕರೆ ಜಾಗದಲ್ಲಿ ಪಾಲು ಮಾಡಲು ಸಂಧಾನ ನಡೆದಿತ್ತು. ಆದರೆ ನಾಗೇಂದ್ರಪ್ಪ ಸಂಧಾನಕ್ಕೆ ಒಪ್ಪಿರಲಿಲ್ಲ ಎನ್ನಲಾಗಿದೆ. ಮಗ ಭದ್ರಾವತಿ ಕೋರ್ಟ್ ನಲ್ಲಿ ದಾವೆ ಹೂಡಿದ್ದರು. ದಾವೆ ವಿಚಾರಣೆ ನಡೆದಿತ್ತು.

ಆಸ್ತಿ ಪಾಲು ಮಾಡಲು ನಿರಾಕರಿಸಿದ ತಂದೆಯನ್ನೇ ಕೊಲೆ ಮಾಡಲು ಮಕ್ಕಳಾದ  ಮಂಜುನಾಥ್, ಉಮೇಶ್  ಪ್ಲಾನ್ ಮಾಡಿ ಬೋಗಿ ಗ್ರಾಮದ ಮೂವರಿಗೆ ಸುಪಾರಿ ನೀಡಿದ್ದರು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಶಿರಾಳಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News