ಶ್ರೀರಂಗಪಟ್ಟಣದ ಜಾಮಿಯಾ ಮಸೀದಿಗೆ ನುಗ್ಗಲು ಯತ್ನಿಸಿದವರ ವಿರುದ್ಧ ಕ್ರಮಕ್ಕೆ ಆಗ್ರಹ

ಮಂಡ್ಯ ಡಿಸಿ ಕಚೇರಿ ಎದುರು ಸಮಾನ ಮನಸ್ಕರ ವೇದಿಕೆಯಿಂದ ಪ್ರತಿಭಟನೆ

Update: 2022-12-12 16:36 GMT

ಮಂಡ್ಯ, ಡಿ.12: ಶ್ರೀರಂಗಪಟ್ಟಣದ ಐತಿಹಾಸಿಕ ಜಾಮಿಯಾ ಮಸೀದಿಗೆ ನುಗ್ಗಲು ಯತ್ನಿಸಿ ಜಿಲ್ಲೆಯಯಲ್ಲಿನ ಸೌಹಾರ್ದತೆಗೆ ಭಂಗ ತರುತ್ತಿರುವ ಕೆಲವು ಹಿಂದೂಪರ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಸಮಾನ ಮನಸ್ಕರ ವೇದಿಕೆ, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯನ್ನು ಆಗ್ರಹಿಸಿದೆ.

ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ  ಮತ್ತು ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಅವರಿಗೆ ಮನವಿ ಸಲ್ಲಿಸಿದ ವೇದಿಕೆ ಮುಖಂಡರು, ಮುಂದಿನ ದಿನಗಳಲ್ಲಿ ಇಂತಹ ಧಾರ್ಮಿಕ ಅವಘಡಗಳು ನಡೆಯದಂತೆ ಎಚ್ಚರಿಕೆವಹಿಸಬೇಕು ಎಂದು ಆಗ್ರಹಿಸಿದರು.

ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ವಿಷಯವು ಕೊರ್ಟಿನಲ್ಲಿದ್ದು, ಇನ್ನೂ ಯಾವುದೇ ತೀರ್ಪು ಬಂದಿಲ್ಲ. ಇಂತಹ ಹೊತ್ತಿನಲ್ಲಿ ಒಂದು ಧಾರ್ಮಿಕ ಸ್ಥಳದ ಮೇಲೆ ಎರಗುವುದು ಸ್ಪಷ್ಟವಾಗಿ ಈ ದೇಶದ ಕಾನೂನಿನ ಉಲ್ಲಂಘನೆಯಾಗಿದೆ ಎಂದು ಅವರು ಪ್ರತಿಪಾದಿಸಿದರು.

'ಧರ್ಮದ ಅಫೀಮು ತುಂಬಿಕೊಂಡ ಯುವಕನೊಬ್ಬ ಸಂಕೀರ್ತನಾ ಯಾತ್ರೆ ವೇಳೆ ಮುಸ್ಲಿಂ ಮನೆಯೊಂದರ ಮೇಲೆ ದಾಳಿಗೆ ಮುಂದಾಗಿದ್ದಾನೆ. ಮತ್ತೊಂದೆಡೆ ಮಸೀದಿಗೆ ನುಗ್ಗಲು ಯತ್ನಿಸಿದ ಐವರು ಯುವಕರು ಮದ್ಯಪಾನ ಮಾಡಿದ್ದು ವೈದ್ಯಕೀಯ ತಪಾಸಣೆಯಿಂದ ದೃಢಪಟ್ಟಿದೆ. ಹಾಗಾಗಿ ಅವಕಾಶವಾದಿ ಜನರು, ಯುವ ಸಮೂಹವನ್ನು ಕೋಮುದ್ವೇಷಕ್ಕೆ ಬಲಿ ಕೊಡಲು ಯತ್ನಿಸಿರುವುದನ್ನು ಇದು ಸಾಕ್ಷೀಕರಿಸುತ್ತದೆ' ಎಂದು ಅವರು ದೂರಿದರು.

'ಜಾಗತಿಕ ಪ್ರವಾಸೋದ್ಯಮದಲ್ಲಿ ತನ್ನದೇ ಸ್ಥಾನಮಾನ ಹೊಂದಿರುವ, ಐತಿಹಾಸ ಪ್ರಸಿದ್ದ ಸ್ಥಳವಾದ ಶ್ರೀರಂಗಪಟ್ಟಣವನ್ನು ಮಂದಿರ, ಮಸೀದಿಯ ಹೆಸರಲ್ಲಿ ಕೋಮುದ್ವೇಶದ ಆಡೊಂಬೋಲ ಮಾಡಿಕೊಂಡು ಇಡೀ ಮಂಡ್ಯ ಜಿಲ್ಲೆಗೆ ಮಸಿ ಬಳಿಯುವ ಕೆಲಸಕ್ಕೆ ಸಂಘಪರಿವಾರದ ಸಂಘಟನೆಗಳು ಮತ್ತು ಆಳುವ ಬಿಜೆಪಿ ನಿರಂತರ ಪ್ರಯತ್ನ ಮಾಡುತ್ತಿವೆ' ಎಂದು ಅವರು ಆರೋಪಿಸಿದರು.

ಚಿಂತಕರಾದ ಪ್ರೊ.ಹುಲ್ಕೆರೆ ಮಹದೇವ, ಭೂಮಿಗೌಡ, ಪ್ರೊ.ಬಿ.ಎಸ್.ಚಂದ್ರಶೇಖರನ್, ರೈತಸಂಘದ ಮುಖಂಡರಾದ ಮಂಜೇಶ್‍ಗೌಡ, ಕಿರಂಗೂರು ಪಾಂಡು, ಮುಸ್ಲಿಂ ಒಕ್ಕೂಟದ ಪ್ರಧಾನಕಾರ್ಯದರ್ಶಿ ಮುಹಮ್ಮದ್ ತಾಹೇರ್, ದಲಿತ ಮುಖಂಡ ಗಂಜಾ ರವಿ, ವಕೀಲರಾದ ಚೀರನಹಳ್ಳಿ ಲಕ್ಷ್ಮಣ್, ನಯೀಂ ಸೇರಿದಂತೆ ಪ್ರಗತಿಪರ ಸಂಘಟನೆಗಳ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. 

ಇದನ್ನೂ ಓದಿ: ಶ್ರೀರಂಗಪಟ್ಟಣ | ಮನೆ ಮೇಲಿನ ಹಸಿರು ಧ್ವಜ ಕಿತ್ತೆಸೆದು ಕೇಸರಿ ಧ್ವಜ ಹಾರಾಟ, ಸ್ವತ್ತುಗಳಿಗೆ ಹಾನಿ ಆರೋಪ: FIR ದಾಖಲು

Full View

Similar News